Advertisement
ಬೆಳಗಾವಿ: ಕೊರೊನಾದ ಎರಡನೇ ಅಲೆಯ ತೀವ್ರತೆಯ ನಡುವೆ ಬಡ ಜನರ ಜೀವನ ಮತ್ತೆ ಮೂರಾಬಟ್ಟೆಯಾಗಿದೆ. ಉದ್ಯೋಗ ಕೈಕೊಟ್ಟಿದೆ. ಕಣ್ಣ ಮುಂದೆ ಹತ್ತಾರು ಕಷ್ಟಗಳ ಸರಮಾಲೆಯೇ ಇದೆ. ಆದರೆ ಇಂತಹ ಕಷ್ಟಗಳ ನಡುವೆಯೂ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನೂರಾರು ಕುಟುಂಬಗಳ ಕೈಹಿಡಿದಿದೆ. ಜೀವನಕ್ಕೆ ಆಸರೆಯಾಗಿ ಬಂದಿದೆ. ಇದಕ್ಕೆ ಬೆಳಗಾವಿ ಜಿಲ್ಲೆ ಒಂದು ಉತ್ತಮ ಉದಾಹರಣೆ.
Related Articles
Advertisement
ಜಿಲ್ಲೆಯಲ್ಲಿ ಆರು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಯೋಜನೆಗೆ ಹೆಸರು ನೋಂದಾಯಿಸಿದ್ದು ಇದಕ್ಕೆ ಸಾಕ್ಷಿ. ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆ ಯಲ್ಲಿ ವೈಯಕ್ತಿಕ ಕಾಮಗಾರಿಗಳ ಜೊತೆಗೆ ಕೆರೆಗಳ ನಿರ್ಮಾಣ, ಬದು ನಿರ್ಮಾಣ, ಕೃಷಿ ಹೊಂಡಗಳ ನಿರ್ಮಾಣ, ಚೆಕ್ ಡ್ಯಾಮ್ ನಿರ್ಮಾಣ, ಅರಣ್ಯ ಇಲಾಖೆಯಿಂದ ಸಸಿಗಳನ್ನು ನೆಡಲು ಗುಂಡಿಗಳ ನಿರ್ಮಾಣ ಕಾಮಗಾರಿಗಳು ನಡೆದಿವೆ. ಬರುವ ಮೂರು ವರ್ಷಗಳಲ್ಲಿ ಒಂದು ಕೋಟಿ ಸಸಿಗಳನ್ನು ನೆಡುವ ಗುರಿ ಇದ್ದು ಈ ವರ್ಷ 25 ಲಕ್ಷ ಸಸಿಗಳನ್ನು ಜಿಲ್ಲೆಯಾದ್ಯಂತ ನೆಡಲಾಗುತ್ತಿದೆ.
ಜಿಲ್ಲೆಯಲ್ಲಿ 241 ಹೊಸ ಕೆರೆಗಳ ನಿರ್ಮಾಣ ಮಾಡುವ ಗುರಿ ಇದೆ. ಅದರಲ್ಲಿ 145 ಕೆರೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 20 ಕೆರೆಗಳ ಕಾಮಗಾರಿ ಪೂರ್ಣಗೊಂಡಿದೆ. ಈ ಕಾಮಗಾರಿಗಳಿಗಾಗಿ 15,147 ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳಲಾಗಿದೆ. 20-21 ನೇ ಸಾಲಿನಲ್ಲಿ 460.81 ಕೋಟಿ ರೂ. ಗಳ ಅರ್ಥಿಕ ಪ್ರಗತಿ ಸಾಧಿಸಲಾಗಿದೆ ಎಂಬುದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದರ್ಶನ್ ಅವರ ಹೇಳಿಕೆ.