ನರೇಗಲ್ಲ: ನಾಲ್ಕೈದು ವರ್ಷಗಳಿಂದ ಸತತ ಬರಗಾಲದಿಂದ ಕಂಗೆಟ್ಟಿರುವ ಈ ಭಾಗದ ದುಡಿಯುವ ಕೈಗಳನ್ನು ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆ ಆಧರಿಸಿದೆ. ಯೋಜನೆಯಡಿ ಉದ್ಯೋಗ ಕಲ್ಪಿಸಿ ಕೂಲಿ ಕಾರ್ಮಿಕರ ಬದುಕು ಹಸನು ಮಾಡುವತ್ತ ಸ್ಥಳೀಯ ಹೋಬಳಿ ವ್ಯಾಪ್ತಿಯ ಗ್ರಾಪಂಗಳು ಮುಂದಾಗಿರುವುದು ಶ್ಲಾಘನೀಯವಾಗಿದೆ.
ಸಮೀಪದ ಕೋಟುಮಚಗಿ ಗ್ರಾಮದಲ್ಲಿ ಮೂರು ದಿನಗಳಿಂದ ದಿನ ಒಂದಕ್ಕೆ 1460 ಜನರು ಬದುವು ನಿರ್ಮಾಣ ಕಾಮಗಾರಿಯಲ್ಲಿ ಪಾಲ್ಗೊಂಡಿದ್ದಾರೆ. ದಿನಕ್ಕೆ ಒಬ್ಬ ಕಾರ್ಮಿಕನಿಗೆ 249 ರೂ. ಕೂಲಿಯನ್ನು ಸರ್ಕಾರ ನಿಗದಿ ಮಾಡಿದೆ. ಅದರಂತೆ 3,63,540 ರೂ. ಪಾವತಿ ಮಾಡಲಾಗುತ್ತಿದೆ. ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ ಸತತವಾಗಿ 30 ದಿನಗಳ ವರೆಗೆ ಕೆಲಸ ಕೊಡಲಾಗುತ್ತದೆ. ಕೃಷಿ ಇಲಾಖೆಯಿಂದ ಸರ್ವೇ ಮಾಡಿದ ಹೊಲಗಳಲ್ಲಿ ಬದುವು ನಿರ್ಮಾಣ ಕಾಮಗಾರಿ ಮಾಡಲಾಗುತ್ತದೆ. 10 ಅಡಿ ಉದ್ದ-ಅಗಲ ಹಾಗೂ 2 ಅಡಿ ಆಳದ ಬದುವು ಮಾಡಲಾಗುತ್ತದೆ.
ನರೇಗಲ್ಲ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಒಟ್ಟು 20515 ಜನ ಜಾಬ್ ಕಾರ್ಡ್ ಹೊಂದಿದ್ದಾರೆ. ಇದರಲ್ಲಿ ಈಗಾಗಲೇ 10554 ಜನ ಕೆಲಸದಲ್ಲಿ ತೊಡಗಿಕೊಂಡು ಉದ್ಯೋಗ ಖಾತ್ರಿ ಯೋಜನೆ ಲಾಭ ಪಡೆದುಕೊಳ್ಳುತ್ತಿದ್ದಾರೆ. ಗುಳೆ ತಡೆಯುವಲ್ಲಿ ಉದ್ಯೋಗ ಖಾತ್ರಿ ಇಲ್ಲಿ ಪ್ರಮುಖ ಪಾತ್ರ ವಹಿಸಿದೆ.
Advertisement
ರೋಣ ತಾಲೂಕಿನ ನರೇಗಲ್ಲ ಹೋಬಳಿ ವ್ಯಾಪ್ತಿಯ ಅಬ್ಬಿಗೇರಿ, ಯರಬೇಲೇರಿ, ಕುರಡಗಿ, ನಾಗರಾಳ, ಗುಜಮಾಗಡಿ, ಡ.ಸ. ಹಡಗಲಿ, ಜಕ್ಕಲಿ, ಮಾರನಬಸರಿ, ಬೂದಿಹಾಳ, ಹೊಸಳ್ಳಿ, ಹಾಲಕೆರೆ, ನಿಡಗುಂದಿಕೊಪ್ಪ, ನಿಡಗುಂದಿ ಸೇರಿದಂತೆ ಕೋಟುಮಚಗಿ, ನಾರಾಯಣಪುರ ಗ್ರಾಮಗಳ ಕೂಲಿ ಕಾರ್ಮಿಕರಿಗೆ ಉದ್ಯೋಗ ‘ಖಾತ್ರಿ’ಯಾಗಿದೆ. ರೈತರ ಜಮೀನುಗಳಿಗೆ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಚೆಕ್ ಡ್ಯಾಂ, ಹಳ್ಳದ ಪಕ್ಕದಲ್ಲಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ನದಿ ಪುನಶ್ವೇತನ ಕಾರ್ಯ ಮಾಡುತ್ತಿದ್ದಾರೆ.
Related Articles
Advertisement