ಬೆಂಗಳೂರು: ನೇರ ನೇಮಕಾತಿ ಮೂಲಕ ಕೋರ್ಟ್ ಗಳಲ್ಲಿ ಕೆಳ ಹಂತದ ಕೆಲಸ ಕೊಡಿಸುವುದಾಗಿ ನಂಬಿಸಿ ಹಲವರಿಂದ ಹಂತ-ಹಂತವಾಗಿ 40 ಲಕ್ಷ ರೂ.ಗೂ ಹೆಚ್ಚು ದುಡ್ಡು ಪಡೆದು ವಂಚಿಸಿದ ಆರೋಪದಡಿ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರ್.ಟಿ.ನಗರ ನಿವಾಸಿ ಅಬ್ದುಲ್ ರಜಾಕ್ ಎಂಬುವರು ನೀಡಿದ ದೂರಿನ ಆಧಾರದ ಮೇರೆಗೆ ಕೊಪ್ಪಳ ಮೂಲದ ಸಿದ್ದಲಿಂಗಯ್ಯ ಹಿರೇಮಠ ಸೇರಿ ಇಬ್ಬರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಬ್ದುಲ್ ನಾಗರಭಾವಿಯ ಪಾಪರೆಡ್ಡಿಪಾಳ್ಯದಲ್ಲಿ ಲೇಡಿಸ್ ಪಿ.ಜಿ.ನಡೆಸುತ್ತಿದ್ದಾರೆ. ಎನ್‌ಜಿಓ ಅನ್ನೂ ನಡೆಸುತ್ತಿದ್ದಾರೆ. 2023ರಲ್ಲಿ ರಜಾ ಕ್‌ಗೆ ಆರೋಪಿ ಸಿದ್ದಲಿಂಗಯ್ಯ ಪರಿಚಯವಾಗಿದ್ದ. ಬಳಿಕ ಸಹಕಾರ ನಗರದಲ್ಲಿರುವ ಆತನ ಕಚೇರಿಗೆ ತೆರಳಿದ್ದಾಗ ತನಗೆ ನ್ಯಾಯಮೂರ್ತಿಗಳೆಲ್ಲ ಪರಿಚಯವಿದ್ದು, ನೇರ ನೇಮಕಾತಿ ಮೂಲಕ ಪ್ರೊಸೆಸ್ ಸರ್ವರ್ ಹಾಗೂ ಗುಮಾಸ್ತ ಹುದ್ದೆ ಕೊಡಿಸುವುದಾಗಿ ನಂಬಿಸಿದ್ದ. ಇದಕ್ಕಾಗಿ ಒಬ್ಬರಿಗೆ 7 ಲಕ್ಷ ರೂ.ಆಗಲಿದೆ ಎಂದು ನಂಬಿಸಿದ್ದ. ಅಬ್ದುಲ್ ರಜಾಕ್ ತನ್ನ ಚಿಕ್ಕಪ್ಪನ ಮಗ ಜಾವೀದ್ ಎಂಬುವರಿಗೆ ಕೆಲಸ ಕೊಡಿಸುವಂತೆ ಆರೋಪಿಯೊಂದಿಗೆ ಮಾತನಾಡಿದ್ದರು. ಸರ್ವರ್ ಹುದ್ದೆ ಕೊಡಿಸುವುದಾಗಿ ಹೇಳಿ ಹಂತ-ಹಂತವಾಗಿ 7 ಲಕ್ಷ ಹಣ ಪಡೆದಿದ್ದ. 2023ರಂದು ಮಾರ್ಚ್ ತಿಂಗಳಲ್ಲಿ ಸಿಟಿ ಸಿವಿಲ್ ಕೋರ್ಟ್ ಬಳಿ ಜಾವೀದ್ ನನ್ನ ಕರೆಯಿಸಿಕೊಂಡು ಸಹಿ ಪಡೆದು ಕೆಲಸವಾಗಿದೆ ಎಂದು ಹೇಳಿದ್ದ. ನಂತರ ನ್ಯಾಯಮೂರ್ತಿಗಳ ಹೆಸರಿನ ನಕಲಿ ಸಹಿಯುಳ್ಳ ನೇಮಕಾತಿ ಪತ್ರ ಕೊಟ್ಟಿದ್ದ. ಇದೇ ಮಾದರಿಯಲ್ಲಿ 6 ಜನರಿಂದ ತಲಾ 7 ಲಕ್ಷ ರೂ.ನಂತೆ ಒಟ್ಟು 40 ಲಕ್ಷ ರೂ.ಗೂ ಅಧಿಕ ದುಡ್ಡು ಪಡೆದು ವಂಚಿಸಿರುವ ಆರೋಪ ಕೇಳಿ ಬಂದಿದೆ.