ಉಡುಪಿ: ಕೊಂಕಣ ರೈಲ್ವೇಯಿಂದ ಭೂಮಿ ಕಳೆದುಕೊಂಡು ಸಂತ್ರಸ್ತರಾದವರ ಮಕ್ಕಳಿಗೆ ನೀಡುವ ಉದ್ಯೋಗಾವಕಾಶ ನಿಯಮದಲ್ಲಿ ದಶಕಗಳ ಬಳಿಕ ಬದಲಾವಣೆ ಆಗಿದೆ. ಇದುವರೆಗೆ ಭೂಮಾಲಕರ ಪುತ್ರನ ಮಕ್ಕಳಿಗೆ ಮಾತ್ರ ಉದ್ಯೋಗಾವಕಾಶ ಸಿಗುತ್ತಿದ್ದು, ಈಗ ಪುತ್ರಿಯ ಮಕ್ಕಳಿಗೂ ಉದ್ಯೋಗ ನೀಡುವ ಬಗ್ಗೆ ಆದೇಶ ಹೊರಬಿದ್ದಿದೆ.
ಇದುವರೆಗೆ ಭೂ ಸಂತ್ರಸ್ತರ ಪತಿ, ಪತ್ನಿ, ಮಗ, ಅವಿವಾಹಿತ ಪುತ್ರಿ, ಪುತ್ರನ ಪುತ್ರ, ಪುತ್ರನಅವಿವಾಹಿತ ಪುತ್ರಿ ಎಂದು ವ್ಯಾಖ್ಯಾನಿಸಲಾಗುತ್ತಿತ್ತು. ಈಗ ಭೂಸಂತ್ರಸ್ತ ಪತಿ, ಪತ್ನಿ, ಪುತ್ರ, ಪುತ್ರಿ,ಮೊಮ್ಮಗ, ಮೊಮ್ಮಗಳು ಎಂದು ಬದಲಾಯಿಸಲಾಗಿದೆ. ಹೀಗಾಗಿ ಇನ್ನು ಮುಂದೆ ಭೂಸಂತ್ರಸ್ತರ ಪುತ್ರಿಯ ಕಡೆಯ ಮೊಮ್ಮಕ್ಕಳೂ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು.
ಪುತ್ರಿಯ ಮಕ್ಕಳ ಕಡೆಯವರು ಅರ್ಜಿ ಸಲ್ಲಿಸಿದಾಗ ಮೊದಲಿದ್ದ ವ್ಯಾಖ್ಯಾನದಿಂದ ತಿರಸ್ಕೃತವಾಗಿತ್ತು. ಈ ಉದ್ಯೋಗ ಸಂತ್ರಸ್ತರು ಸುಮಾರು ಎರಡು ತಿಂಗಳ ಹಿಂದೆ ಮಾಜಿ ಸಚಿವ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆಯವರಿಗೆ ತಿಳಿಸಿದ್ದು, ಅವರು ಕೊಂಕಣ ರೈಲ್ವೇ ಆಡಳಿತ ನಿರ್ದೇಶಕರನ್ನು ವಿಚಾರಿಸಿದಾಗ “ಕುಟುಂಬ ಎಂಬ ವ್ಯಾಖ್ಯಾನವನ್ನು ಬದಲಾಯಿಸುವುದು ಕಷ್ಟ’ ಎಂಬ ಉತ್ತರ ಲಭಿಸಿತ್ತು. ಆದರೆ ಹೆಗ್ಡೆಯವರು, ಆಸ್ತಿ ಬಂದದ್ದು ದಂಪತಿ ಕಡೆಯಿಂದ, ಇದು ಕೌಟುಂಬಿಕ ಆಸ್ತಿ. ಕುಟುಂಬದ ಆಸ್ತಿಯನ್ನು ಸ್ವಾಧೀನಪಡಿಸುವಾಗ ಕೇವಲ ಗಂಡು ಮಕ್ಕಳನ್ನು ಮಾತ್ರ ಪರಿಗಣಿಸುವುದು ಸರಿಯಲ್ಲ. ಎಷ್ಟೋ ಕಡೆ ಕರಾವಳಿಯಲ್ಲಿ ಹೆಣ್ಣಿನ ಕಡೆಯಿಂದ ಆಸ್ತಿ ಬಂದಿರುತ್ತದೆ’ ಎಂದು ವಾದಿಸಿದ್ದರು.
ಆಡಳಿತ ನಿರ್ದೇಶಕರು ಇದರ ಪರಿಹಾರಕ್ಕಾಗಿ ಸಮಿತಿ ರಚಿಸಿದ್ದು, ಅದರ ವರದಿ ಪ್ರಕಾರ ಈಗ ವ್ಯಾಖ್ಯಾನವನ್ನು ತಿದ್ದಲಾಗಿದೆ. ಇನ್ನು ಮುಂದೆ ಪುತ್ರಿಯ ಮಕ್ಕಳಿಗೂ
ಉದ್ಯೋಗ ಸಿಗಲಿದೆ ಎಂಬ ಅಧಿಸೂಚನೆಯನ್ನು ಕೊಂಕಣ ರೈಲ್ವೇ ಹೊರಡಿಸಿದೆ. “ಇದು 2019ರ ಆಗಸ್ಟ್29ರಿಂದ ಅನ್ವಯವಾಗಲಿದೆ. ಹಿಂದೆ ಯಾರಿಗೆಲ್ಲ ಇದೇ ಮಾನದಂಡದಲ್ಲಿ ಉದ್ಯೋಗ ಕೈತಪ್ಪಿ ಹೋಗಿದೆಯೋ ಅವರಿಗೂ ನ್ಯಾಯ ದೊರಕಿಸಬೇಕೆಂದು ಆಗ್ರಹಿಸುತ್ತೇವೆ’ ಎಂದು ಜಯಪ್ರಕಾಶ್ ಹೆಗ್ಡೆ “ಉದಯವಾಣಿ’ಗೆ ತಿಳಿಸಿದ್ದಾರೆ.