ಬೆಂಗಳೂರು: ಸಹಕಾರ ಬ್ಯಾಂಕ್‌ಗಳು ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯ ಜತೆಗೆ ಬಡವರ ಕಲ್ಯಾಣ ಕಾರ್ಯದಲ್ಲಿ ನಿರತವಾಗಿದೆ ಎಂದು ರಾಜ್ಯಪಾಲ ವಜೂಭಾಯ್ ವಾಲಾ ಅಭಿಪ್ರಾಯಪಟ್ಟಿದ್ದಾರೆ.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಿ ಮೈಸೂರು ಸಿಲ್ಕ್ ಕ್ಲಾತ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್‌ನ ಸುವರ್ಣ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜದಲ್ಲಿ ಸೌಲಭ್ಯ ವಂಚಿತರಿಗೆ ಸಹಾಯ, ಸಹಕಾರ ಮಾಡುವುದೇ ಸಹಕಾರಿ ಬ್ಯಾಂಕ್‌ಗಳ ಆದ್ಯತೆಯಾಗಬೇಕು. ಲಾಭದ ಉದ್ದೇಶದಿಂದ ಸಹಕಾರಿ ವಲಯ ಹುಟ್ಟಿಕೊಂಡಿಲ್ಲ. ಸೇವಾ ಮನೋಧರ್ಮದಿಂದ ಬೆಳೆದು ಬಂದಿದೆ ಎಂದು ಹೇಳಿದರು.
ಸಹಕಾರಿ ಅಥವಾ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬಡ ಮತ್ತು ಮಧ್ಯಮ ವರ್ಗದವರು ಸಾಲ ಪಡೆದರೆ, ಪ್ರಾಣಿಕವಾಗಿ ಬದ್ಧತೆಯಿಂದ ಮರುಪಾವತಿ ಮಾಡುತ್ತಾರೆ. ಆದರೆ, ಶ್ರೀಮಂತರು ಸಾಲ ಪಡೆದು, ಮರುಪಾವತಿ ಮಾಡುವಾಗ ವಿಳಂಬ ಧೋರಣೆ ಅನುಸರಿಸುತ್ತಾರೆ. ಹೀಗಾಗಿ ಸಹಕಾರಿ ಬ್ಯಾಂಕ್‌ಗಳು ಶ್ರೀಮಂತರ ಹೂಡಿಕೆಯಲ್ಲಿ ಬಡವರಿಗೆ ಸಾಲ ಸೌಲಭ್ಯ ಹೆಚ್ಚೆಚ್ಚು ಒದಗಿಸಬೇಕು ಎಂದು ಸಲಹೆ ನೀಡಿದರು.
ಹೂಡಿಕೆಯನ್ನು ರಾಷ್ಟ್ರೀಯಕೃತ ಬ್ಯಾಂಕ್‌ಗಳ ಬದಲಾಗಿ ಸಹಕಾರಿ ಬ್ಯಾಂಕ್‌ನಲ್ಲಿ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕ್ ಒಮ್ಮೆಗೆ ನಷ್ಟಕ್ಕೆ ಜಾರಿದರೆ ಗ್ರಾಹಕರಿಗೆ ಏನೂ ಸಿಗುವುದಿಲ್ಲ. ಆದರೆ, ಸಹಕಾರಿ ಬ್ಯಾಂಕ್ ನಷ್ಟವಾದರೂ, ಸರ್ಕಾರ ಅಲ್ಪ ಸ್ಪಲ್ಪ ಸಹಾಯ ಮಾಡುತ್ತದೆ ಅಥವಾ ವಿಮೆ ಮೂಲಕವಾದರೂ ಗ್ರಾಹಕರಿಗೆ ಹಣ ಸಿಗುತ್ತದೆ. ಹೀಗಾಗಿ ಸಹಕಾರಿ ಬ್ಯಾಂಕ್‌ಗಳಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡುವಂತಾಗಲಿ ಎಂದರು.
ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಮಾತನಾಡಿ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಾಗೂ ಹಿಂದಿನ ಕಾಂಗ್ರೆಸ್ ಸರ್ಕಾರ ಮಾಡಿರುವ ಸಹಕಾರಿ ಸಾಲಮನ್ನಾ ಸೇರಿದಂತೆ ಒಟ್ಟಾರೆ ಸಹಕಾರ ಕ್ಷೇತ್ರದ 19 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದೇವೆ. ಹಾಗೆಯೇ ರಾಷ್ಟ್ರೀಕೃತ ಬ್ಯಾಂಕ್‌ನ 30 ಸಾವಿರ ಕೋಟಿ ರೂ.ಸಾಲಮನ್ನಾ ಮಾಡಿದ್ದೇವೆ ಎಂದು ಹೇಳಿದರು.
ಮಾಜಿ ಸಭಾಪತಿ ಡಿ.ಎಚ್.ಶಂಕರ ಮೂರ್ತಿ, ಸಹಕಾರಿ ಬ್ಯಾಂಕ್ ಅಧ್ಯಕ್ಷ ಎನ್.ಎಸ್.ಶ್ರೀನಿವಾಸ ಮೂರ್ತಿ, ಉಪಾಧ್ಯಕ್ಷ ಆರ್.ಪಿ.ರವಿಶಂಕರ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಎ.ಕೃಷ್ಣಭಗವಾನ್ ಉಪಸ್ಥಿತರಿದ್ದರು.
ರಾಜ್ಯ ಸರ್ಕಾರದ ಇಲಾಖೆಗಳು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಠೇವಣಿಯಾಗಿ ಇಟ್ಟಿರುವ ಹಣವನ್ನು ಅಪೆಕ್ಸ್ ಬ್ಯಾಂಕ್‌ಗೆ ವರ್ಗಾವಣೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಠೇವಣಿ ವರ್ಗಾವಣೆಗೊಂಡರೆ ರೈತರಿಗೆ ಸಾಲ ಕೊಡಲು ಅನುಕೂಲವಾಗಲಿದೆ. ಈ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದ್ದೇವೆ.
-ಬಂಡೆಂಪ್ಪ ಕಾಶಂಪುರ್, ಸಹಕಾರ ಸಚಿವ