Advertisement

ನೌಕರರ ಮುಷ್ಕರ; ನೀರು ವ್ಯತ್ಯಯ ಸಾಧ್ಯತೆ

10:19 AM Apr 26, 2022 | Team Udayavani |

ಧಾರವಾಡ: ಅವಳಿನಗರದಲ್ಲಿ ಜಲಮಂಡಳಿ ಅಧೀನದಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ, ಗುತ್ತಿಗೆ ಹಾಗೂ ಹಂಗಾಮಿ ನೌಕರರು ತಮ್ಮ ಬೇಡಿಕೆ ಈಡೇರಿಕೆಗಾಗಿ ಏ.26ರಿಂದ ಸಾಮೂಹಿಕವಾಗಿ ಕೆಲಸ ಬಹಿಷ್ಕರಿಸಿ ಪ್ರತಿಭಟನೆಗೆ ಮುಂದಾಗಿದ್ದು, ಅವಳಿನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ಸಂಘದ ಅಧ್ಯಕ್ಷ ವಿ.ಎನ್‌. ಹಳಕಟ್ಟಿ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹು-ಧಾ ಮಹಾನಗರ ನೀರು ಸರಬರಾಜು ನಿರ್ವಹಣೆಗಾಗಿ ಕರ್ನಾಟಕ ಜಲಮಂಡಳಿಯಿಂದ ಕಳೆದ 20 ವರ್ಷಗಳಿಂದಲೂ ಗುತ್ತಿಗೆ, ದಿನಗೂಲಿ ಹಂಗಾಮಿ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೆ ಈಗ ನೀರು ಸರಬರಾಜು ನಿರ್ವಹಣೆಯನ್ನು ಮೆ| ಎಲ್‌ ಆಂಡ್‌ ಟಿ ಕಂಪನಿಗೆ ಗುತ್ತಿಗೆ ವಹಿಸಿ, ಕೆಲಸಕ್ಕೆ ಹೊಸಬರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಕೊಟ್ಟಿರುವುದು ಖಂಡನೀಯ. ಈ ಹಿನ್ನೆಲೆಯಲ್ಲಿ ಏ.26ರಿಂದ ಜಲಮಂಡಳಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದರು.

ಇದೀಗ ಜಲಮಂಡಳಿಯಲ್ಲಿ 600ಕ್ಕೂ ಹೆಚ್ಚು ನೌಕರರು 20 ವರ್ಷದಿಂದ ನಿರಂತರ ಕೆಲಸ ಮಾಡುತ್ತಿದ್ದಾರೆ. ಆದರೆ, ಪಾಲಿಕೆಯವರು ಕರ್ನಾಟಕ ಜಲಮಂಡಳಿಯವರಿಂದ ಪ್ರಸ್ತುತ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಸಾಮೂಹಿಕವಾಗಿ ವಜಾ ಮಾಡಿ, ಹೊಸಬರನ್ನು ನೇಮಕ ಮಾಡಿಕೊಂಡು ಕೆಲಸ ನಿರ್ವಹಿಸುವಂತೆ ಖಾಸಗಿ ಗುತ್ತಿಗೆದಾರ ಎಲ್‌ ಆಂಡ್‌ ಟಿ ಅವರಿಗೆ ಅನುಮತಿ ನೀಡಿ ಅನ್ಯಾಯ ಎಸಗಿದೆ ಎಂದು ದೂರಿದರು.

ಕರ್ನಾಟಕ ಜಲಮಂಡಳಿಯ ಹಂಗಾಮಿ, ಗುತ್ತಿಗೆ ಹಾಗೂ ದಿನಗೂಲಿ ನೌಕರರನ್ನು ಹು-ಧಾ ಮಹಾನಗರ ಪಾಲಿಕೆಯು ವರ್ಕ್‌ ಸಮೇತ ಹಸ್ತಾಂತರ ಮಾಡಿ ಆದೇಶ ಹೊರಡಿಸಬೇಕು. ಯೋಜನೆ ಪೂರ್ಣಗೊಳ್ಳುವವರೆಗೂ ನಿಯೋಜನೆ ಮೇರೆಗೆ ಎಲ್‌ಆಂಡ್‌ಟಿ ಅವರಲ್ಲಿ ಸೇವೆ ನಿರ್ವಹಿಸುವಂತೆ ಆದೇಶವನ್ನು ಮಹಾನಗರ ಪಾಲಿಕೆ ಮಾಡಬೇಕು. ಹೀಗಾದರೆ ಜಲಮಂಡಳಿ ನೌಕರರು ತಕ್ಷಣ ಕೆಲಸಕ್ಕೆ ಹಾಜರು ಆಗುತ್ತೇವೆ. ಇಲ್ಲವಾದರೆ ಧರಣಿ ನಿರಂತರ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

ನೀರು ಸರಬರಾಜು ಇಂದಿನಿಂದ ಎಲ್‌ ಆ್ಯಂಡ್‌ ಟಿಗೆ ಹಸ್ತಾಂತರ:

Advertisement

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ ಒಟ್ಟು 82 ವಾರ್ಡ್‌ ಗಳಲ್ಲಿ ನೀರು ಸರಬರಾಜು ಕಾರ್ಯವನ್ನು ಜಲಮಂಡಳಿಯಿಂದ ಎಲ್‌ ಆ್ಯಂಡ್‌ ಟಿ ಕಂಪೆನಿಗೆ ಏ.26ರಿಂದ ಹಸ್ತಾಂತರಿಸಲಾಗುತ್ತಿದೆ. ಅವಳಿನಗರದಲ್ಲಿ ಇಲ್ಲಿಯವರೆಗೆ ಕರ್ನಾಟಕ ನಗರ ನೀರು ಸರಬರಾಜು-ಒಳಚರಂಡಿ ಮಂಡಳಿಯಿಂದ ನಿರ್ವಹಿಸಲಾಗುತ್ತಿತ್ತು. ಅವಳಿ ನಗರದ ಸಾರ್ವಜನಿಕರಿಗೆ ನೀರಿನ ಕೊರತೆಯಾಗದಂತೆ ಇನ್ನೂ ಹೆಚ್ಚಿನ ಸೌಲಭ್ಯವನ್ನು ಕಲ್ಪಿಸಲು 24/7 ಒತ್ತಡಪೂರಿತ ನಿರಂತರ ನೀರು ಸರಬರಾಜು ಯೋಜನೆಯನ್ನು ಜಾರಿಗೊಳಿಸಲು ಅನುಮೋದನೆಯಾಗಿ ಈಗಾಗಲೇ ಚೆನ್ನೈನ ಮೆ| ಎಲ್‌ ಆ್ಯಂಡ್‌ ಟಿ ಕಂಪೆನಿಗೆ ಕಾರ್ಯಾದೇಶ ನೀಡಲಾಗಿದೆ.

ಈ ಪ್ರಕ್ರಿಯೆ ಸುಗಮವಾಗಿ ಹಸ್ತಾಂತರವಾಗುವವರೆಗೆ ನೀರು ಸರಬರಾಜಿನಲ್ಲಿ ಅಡೆ ತಡೆಗಳು ಉಂಟಾದಲ್ಲಿ ಸಾರ್ವಜನಿಕರು ತಾಳ್ಮೆ ಕಳೆದುಕೊಳ್ಳದೆ ಸಹಕರಿಸಲು ಹಾಗೂ ನೀರು ಸರಬರಾಜಿಗೆ ಸಂಬಂಧಿಸಿದಂತೆ ದೂರುಗಳನ್ನು ಆಲಿಸಲು ಮೇ| ಎಲ್‌ ಆ್ಯಂಡ್‌ ಟಿ ಪ್ರತಿನಿಧಿ ಗೋವಿಂದರಾಜನ್‌ ಮೊ: 919488744344, ಅಭಿಜಿತ ದಾಸ ಮೊ: 917506518032 ಹಾಗೂ ವಿ.ಟಿ. ಗುಡಿ ಕಾರ್ಯ ನಿರ್ವಾಹಕ ಅಭಿಯಂತರು(ಹುಬ್ಬಳ್ಳಿ) ಮೊ: 91 9606098435/ 9606098401 ಹುಬ್ಬಳ್ಳಿ, ಕಾರ್ಯ ನಿರ್ವಾಹಕ ಅಭಿಯಂತರು(ಧಾರವಾಡ) ಮೊ: 91 9449846000 ಸಂಪರ್ಕಿಸಲು ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next