Advertisement

ಇಎಸ್‌ಐ ಕಾಯಿದೆಯಲ್ಲೊಂದು ಲೋಪ

02:54 AM Aug 02, 2019 | mahesh |

2017ರ ಸೆಪ್ಟೆಂಬರ್‌ ತಿಂಗಳ ಕೊನೆಯಲ್ಲೊಂದು ದಿನ. ಮಂಗಳೂರಿನ ಒಂದು ಸುಪ್ರಸಿದ್ಧ ವೈದ್ಯಕೀಯ ಸಂಸ್ಥೆಯ ಸಿಬ್ಬಂದಿ ವ್ಯವಸ್ಥಾಪಕರು (ಎಚ್.ಆರ್‌. ಮೆನೇಜರ್‌) ಬಂದು ಸಮಸ್ಯೆಯೊಂದನ್ನು ನನ್ನ ಮುಂದಿಟ್ಟರು. 2011ರ ಮೇ ತಿಂಗಳಲ್ಲಿ ಮಂಗಳೂರು ಸೇರಿದಂತೆ ಕರ್ನಾಟಕದ ಹಲವಾರು ಕೇಂದ್ರಗಳಲ್ಲಿ ಇ.ಎಸ್‌.ಐ. ಕಾಯಿದೆಯ (Employees State Insurance Act, 1948) ವ್ಯಾಪ್ತಿಯನ್ನು ವೈದ್ಯಕೀಯ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ವಿಸ್ತರಿಸಲಾಗಿತ್ತು. ಅದಕ್ಕನುಗುಣವಾಗಿ ಪ್ರಸಕ್ತ ವೈದ್ಯಕೀಯ ಸಂಸ್ಥೆಯಲ್ಲಿಯೂ ನೌಕರರನ್ನು ಇ.ಎಸ್‌.ಐ. ಕಾಯಿದೆಯಡಿಯಲ್ಲಿ ನೋಂದಾಯಿಸಿ ಇ.ಎಸ್‌.ಐ. ವಂತಿಗೆಯನ್ನು ನಿಯಮಗಳಿಗನುಸಾರವಾಗಿ ಪಾವತಿ ಮಾಡಿಕೊಂಡು ಬರಲಾಗಿತ್ತು. ಸಂಸ್ಥೆಯ ಮಹಿಳಾ ನೌಕರರ ಪೈಕಿ ನಾಲ್ವರಿಗೆ 2017ರ ಏಪ್ರಿಲ್/ಮೇಯಲ್ಲಿ ಹೆರಿಗೆಯಾಗಿದೆ. ಇ.ಎಸ್‌.ಐ. ಕಾಯಿದೆಯಲ್ಲಿ ವಿಧಿಸಿರುವ ಪ್ರಕಾರ ಹೆರಿಗೆ ಭತ್ತೆಗೆ (Maternity Benefit) ಕ್ಲೇಮ್‌ಗಳನ್ನು ಸಲ್ಲಿಸಲಾಗಿತ್ತು. ಅಲ್ಲದೆ, ವಾರ್ಡ್‌ಬಾಯ್‌ ಒಬ್ಬರು ಮೇ 28ರಿಂದ ಆಗಸ್ಟ್‌ 31ರ ವರೆಗೆ ವೈದ್ಯಕೀಯ ಚಿಕಿತ್ಸೆಯಲ್ಲಿದ್ದು, ಕಾಯಿಲೆ ಭತ್ತೆ (Sickness Benefit) ಗಾಗಿ ಕ್ಲೇಮ್‌ ಸಲ್ಲಿಸಿದ್ದರು. ಈ ಐದೂ ಕ್ಲೇಮುಗಳನ್ನು ಇ.ಎಸ್‌.ಐ. ನಿಗಮದ ಮಂಗಳೂರು ಶಾಖೆ ತಿರಸ್ಕರಿಸಿತ್ತು. ಕೇಳಲಾದ ಹಿತಲಾಭಗಳನ್ನು (Benefit) ನಿರಾಕರಿಸಲಾಗಿತ್ತು. ನಿಮಗೆ ಸಂಬಂಧಿಸಿದ ಹಿತಲಾಭದ ಅವಧಿ (Benefit Period)ಅಕ್ಟೋಬರ್‌ ಒಂದರಂದಷ್ಟೇ ಆರಂಭವಾಗಲಿದೆ ಎಂಬುದಾಗಿ ಕ್ಲೇಮುಗಳನ್ನು ತಿರಸ್ಕರಿಸಲು ನಿಗಮದ ಶಾಖೆ ನೀಡಿದ ಕಾರಣ. ಈ ಕಾರಣ ನಿಸ್ಸಂದೇಹವಾಗಿ ಕಾನೂನು ಬಾಹಿರವಾಗಿತ್ತು. ಅಂತೂ ಇಂತೂ ದೆಹಲಿಯಲ್ಲಿರುವ ನಿಗಮದ ಪ್ರಧಾನ ಕಚೇರಿಯೂ ಸೇರಿದಂತೆ ಹಲವು ಕಚೇರಿಗಳನ್ನು ಮನವಿಗಳ ಮೂಲಕ ಮತ್ತೆ ಮತ್ತೆ ಸಂಪರ್ಕಿಸಿದ ಬಳಿಕ ಕೇಳಲಾಗಿದ್ದ ಹಿತಲಾಭಗಳು ಡಿಸೆಂಬರ್‌ 2018ರಿಂದ ಮಾರ್ಚ್‌ 2019ರ ಅವಧಿಯಲ್ಲಿ, ಅಂದರೆ 15ರಿಂದ 18 ತಿಂಗಳುಗಳ ಬಳಿಕ ಕ್ಲೇಮುದಾರರ ಕೈ ಸೇರಿದುವು.

Advertisement

ವಿಮಾದಾರ ಕಾರ್ಮಿಕರು ಹಿತಲಾಭಕ್ಕಾಗಿ ಸಲ್ಲಿಸುವ ಕ್ಲೇಮುಗಳನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಿ, ಹಿತಲಾಭಗಳನ್ನು ಸಕಾಲದಲ್ಲಿ ಪಾವತಿಸಬೇಕಾದ ಕರ್ತವ್ಯ ನಿಗಮದ ಶಾಖೆಯ ಸಿಬ್ಬಂದಿ ವರ್ಗದ ಮೇಲಿದೆ. ಈ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿನಾಕಾರಣ ಒಂದು ದಿನ ವಿಳಂಬವಾದರೂ ಅದು ಕರ್ತವ್ಯಚ್ಯುತಿಯಾಗುತ್ತದೆ. ಹಿತಲಾಭವನ್ನು ವಿನಾಕಾರಣ ನಿರಾಕರಿಸಿದರೆ ಅದು ಇನ್ನಷ್ಟು ಗಂಭೀರ ಸ್ವರೂಪದ ಕರ್ತವ್ಯಚ್ಯುತಿಯಲ್ಲವೆ? ಹೀಗಿರುವಾಗ Internet, E-mail, Mobile Phoneಗಳ ಈ ಯುಗದಲ್ಲಿ ನಿಗಮದ ದೆಹಲಿಯಲ್ಲಿನ ಪ್ರಧಾನ ಕಚೇರಿಯಿಂದ ಮಂಗಳೂರಿನಲ್ಲಿರುವ ಶಾಖೆಗೆ ನಿರ್ದೇಶನಗಳು ಹರಿದು ಬಂದು ಕಾನೂನು ಬದ್ಧ ಹಿತಲಾಭವನ್ನು ವಿತರಿಸುವಲ್ಲಿ ಇಷ್ಟೊಂದು ವಿಳಂಬವಾದಲ್ಲಿ ಅದು ನಿಗಮದ ಲಾಂಛನಕ್ಕೂ ಕಾಯಿದೆಯಲ್ಲಿರುವ ಪ್ರಸ್ತಾವನೆಗೂ (premble) ಮಾಡಿರುವ ಅವಮಾನವೆಂದರೆ ತಪ್ಪಾಗಲಾರದು.

ಕಾಯಿದೆಯ ಪ್ರಸ್ತಾವನೆಯಲ್ಲಿ ಘೋಷಿಸಿರುವಂತೆ ಕಾಯಿಲೆಯ, ಹೆರಿಗೆಯ ಮತ್ತು ಔದ್ಯೋಗಿಕ ಅಪಘಾತದ ಸಂದರ್ಭಗಳಲ್ಲಿ ಕಾರ್ಮಿಕರಿಗೆ ಹಲವು ನಿರ್ದಿಷ್ಟ ಹಿತಲಾಭಗಳನ್ನು ಒದಗಿಸುವುದು ಹಾಗೂ ಅವುಗಳಿಗೆ ಪ್ರಾಸಂಗಿಕವಾಗಿ ಸಂಬಂಧಿಸಿದ ಇತರ ನಿರ್ದಿಷ್ಟ ವಿಷಯಗಳನ್ನು ಯೋಜಿಸಿಕೊಳ್ಳುವುದು ಇ.ಎಸ್‌. ಐ. ಕಾಯಿದೆಯ ಗುರಿಯಾಗಿದೆ. ನಿಗಮದ ಲಾಂಛನವು ‘ಸಾಮಾಜಿಕ ಭದ್ರತೆ’ ಎಂದು ಸಾರುತ್ತದೆ. ನಿಗಮದ ಜಾಹೀರಾತುಗಳಲ್ಲಿ ಹಾಗೂ ನಿಗಮವು ಹೊರತಂದಿರುವ ಕಾರ್ಮಿಕರ ಕೈಪಿಡಿಯಲ್ಲಿ ‘ಇ.ಎಸ್‌.ಐ.ಸಿ.’ ಎಂದರೆ ‘ಚಿಂತೆಯಿಂದ ಮುಕ್ತಿ’ ಎಂಬ ಧ್ಯೇಯೋಕ್ತಿಯಿದೆ. ಹೀಗಿರುವಾಗ ವಿಮಾದಾರರನ್ನು ನಿಗಮದ ವ್ಯವಸ್ಥೆಯು ನಡೆಸಿಕೊಂಡ ರೀತಿ ಅಕ್ಷಮ್ಯ.

ಈ ವಿಷಯಕ್ಕೆ ಇನ್ನೊಂದು ಮುಖವೂ ಇದೆ. ಎಲ್ಲಾ ನಾಗರಿಕರಿಗಿರುವ ಮೂಲಭೂತ ಹಕ್ಕುಗಳಲ್ಲಿ ಗೌರವಯುತ ಬದುಕು ಕೂಡ ಒಂದು ಎಂದು ನಮ್ಮ ಸಂವಿಧಾನ‌ ಪ್ರತಿಪಾದಿಸುತ್ತದೆ. ಈ ದೃಷ್ಟಿಯಲ್ಲಿ ನೋಡಿದರೆ ಪ್ರಸಕ್ತ ಕ್ಲೇಮುದಾರರನ್ನು ಹಿತಲಾಭಗಳಿಂದ ವಂಚಿತರನ್ನಾಗಿಸಿ ಅವರ ಹಾಗೂ ಆಗಷ್ಟೆ ಹುಟ್ಟಿದ ಹಸುಳೆಗಳೂ ಸೇರಿದಂತೆ ಅವರ ಕುಟುಂಬ ಸದಸ್ಯರ ದೈನಂದಿನ ಬಾಳನ್ನು ದುಸ್ತರವಾಗಿಸಿರುವುದು ಮಾನವ ಹಕ್ಕಿನ ಉಲ್ಲಂಘನೆಯಲ್ಲವೇ? ಈ ಬಗ್ಗೆಯೂ ವಿಸ್ತೃತ ಚರ್ಚೆಯ ಅಗತ್ಯವಿದೆ. Protection of Human Rights Actನ ಸೆಕ್ಷನ್‌ 2 (1) (d) ಯಲ್ಲಿ ‘human rights’ ಪದಪುಂಜಕ್ಕೆ ಕೊಟ್ಟಿರುವ ಅರ್ಥವು ಸಂವಿಧಾನದಲ್ಲಿ ಹೇಳಿರುವುದಕ್ಕೆ ಪೂರಕವಾಗಿದೆ.

ಅದೇನೇ ಇರಲಿ, ಇಲ್ಲಿ ಬೆಳಕಿಗೆ ಬಂದ ಐದು ಪ್ರಕರಣಗಳಲ್ಲಿ ತಕ್ಕ ಹಿತಲಾಭಗಳನ್ನು ಪಾವತಿಸುವಲ್ಲಿ ಅಸಾಧರಣ, ದೀರ್ಘ‌ ವಿಳಂಬ ಏಕಾಗಿ ಆಯಿತು. ಅದಕ್ಕೆ ಯಾರು ಹೊಣೆ ಎಂದೆಲ್ಲವನ್ನು ಬೊಟ್ಟು ಮಾಡುವುದು ಈ ಲೇಖನದ ಉದ್ದೇಶವಲ್ಲ. ಅದು ನಿಗಮದ ಕಾರ್ಯ ವ್ಯಾಪ್ತಿಯ ವಿಚಾರ. ನಿಗಮವು ಇ.ಎಸ್‌.ಐ. ಕಾಯಿದೆಯಲ್ಲಿ ರೂಪಿಸಲಾಗಿರುವ ವಂತಿಗೆಗಳ ಹಾಗೂ ಹಿತಲಾಭಗಳ ಯೋಜನೆಯನ್ನು ಕಾರ್ಯ ಗತಗೊಳಿಸುವ ಸಲುವಾಗಿ ಹುಟ್ಟು ಹಾಕಲಾಗಿರುವ ಸಂಸ್ಥೆ. ಈ ನಿಟ್ಟಿನಲ್ಲಿ ನಿಗಮವು ಕಾಯಿದೆಯ ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳಿಂದ ವಂತಿಗೆಯನ್ನು ಸಂಗ್ರಹಿಸುತ್ತದೆ. ಕಾರ್ಮಿಕರು ಹಾಗೂ ಉದ್ಯೋಗದಾತರು ನಿಗಮಕ್ಕೆ ಪಾವತಿಸಬೇಕಾದ ಒಟ್ಟು ಮೊತ್ತ ವಂತಿಗೆ (Contribution) ಎನಿಸುತ್ತದೆ. ಕಾಯಿದೆಯ ಅಡಿಯಲ್ಲಿ ರಚಿತವಾಗಿರುವ ವಿನಿಮಯಗಳ ಪ್ರಕಾರ ಈ ವಂತಿಗೆಯನ್ನು ಆಯಾ ತಿಂಗಳ ಕೊನೆಯಿಂದ 15 ದಿನಗಳ ಒಳಗೆ ಪಾವತಿಸಬೇಕಾಗುತ್ತದೆ (ವಿನಿಮಯ 31) ಅಲ್ಲದೆ, ಈ ವಂತಿಗೆಯನ್ನು ಪ್ರಥಮತಃ ಉದ್ಯೋಗದಾತರೇ ಪಾವತಿಸತಕ್ಕದ್ದು (ಕಾಯಿದೆಯ ಪ್ರಕರಣ 40.1). ವಂತಿಗೆಯಲ್ಲಿ ಕಾರ್ಮಿಕರ ಪಾಲಿನ ಮೊತ್ತವನ್ನು ಕಾರ್ಮಿಕರ ವೇತನದಿಂದ ಕಡಿತಮಾಡಿಕೊಳ್ಳುವ ಅಧಿಕಾರ ಉದ್ಯೋಗದಾತರಿಗಿದೆ (ಪ್ರ.40.2). ವಂತಿಗೆಯನ್ನು ಸಕಾಲದಲ್ಲಿ ಪಾವತಿಸದಿದ್ದಲ್ಲಿ ಉದ್ಯೋಗದಾತರು ಬಡ್ಡಿ ತೆರಬೇಕಾಗುತ್ತದೆ. (ಪ್ರ. 39.5); ದಂಡ ಭರಿಸಬೇಕಾದ ಪ್ರಮೇಯವೂ (ಪ್ರ.85) ಬರಬಹುದು. ಇದಲ್ಲದೆ ಕ್ರಿಮಿನಲ್ ಪ್ರಾಸಿಕ್ಯೂಶನ್‌ನನ್ನು ಎದುರಿಸಬೇಕಾಗಲೂಬಹುದು (ಪ್ರ. 85), ನಮೂದಿಸಿರುವ ವಂತಿಗೆಯನ್ನು ಸಕಾಲದಲ್ಲಿ ಪಾವತಿಸುವಂತೆ ಉದ್ಯೋಗದಾತರನ್ನು ಪ್ರೋತ್ಸಾಹಿಸಿ, ಒಪ್ಪಿಸಲ್ಪಟ್ಟ ಹೊಣೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ನಿಗಮಕ್ಕೆ ಸಾಧ್ಯವಾಗಿಸಲು ಈ ಎಲ್ಲಾ ನಿಯಮಗಳನ್ನು ಕಾಯಿದೆಯಲ್ಲಿ ಒದಗಿಸಿರುವುದು ಸಹಜವೇ ಆಗಿದೆ.

Advertisement

ಹಿತಲಾಭಗಳಿಗೆ ಸಂಬಂಧಿಸಿದಂತೆ ವಿಮಾದಾರ ಕಾರ್ಮಿಕರ ಕಟ್ಟುಪಾಡು/ಹಕ್ಕುಗಳ ಬಗ್ಗೆ ಹೇಳುವುದಾದರೆ, ಕಾಯಿದೆಯಲ್ಲಿ ಎರಡು ಪ್ರಮುಖ ವಿಧಿಗಳಿವೆ. ನಿಯಮ 45 ಕ್ಲೇಮುಗಳನ್ನು ಎಂದು ಸಲ್ಲಿಸಬಹುದೆಂದೂ, ನಿಯಮ 77 ಸದ್ರಿ ದಿನದಿಂದ ಒಂದು ವರ್ಷದೊಳಗೆ ಸಲ್ಲಿಸತಕ್ಕದ್ದೆಂದೂ ಹೇಳುತ್ತದೆ. ಸಲ್ಲಿಸಲಾದ ಕ್ಲೇಮುಗಳನ್ನು ಎಷ್ಟು ದಿನಗಳೊಳಗೆ ನಿರ್ಣಯಿಸಿ ಪರಿಹರಿಸ ತಕ್ಕದ್ದೆಂದು ನಿಯಮ 52 ವಿಧಿಸುತ್ತದೆ. ಕ್ಲೇಮುಗಳನ್ನು ನಿಗಮದ ಶಾಖೆಗೆ ಸಲ್ಲಿಸುವ ವಿಚಾರದಲ್ಲಿ ಐದೂ ಕ್ಲೇಮುದಾರರು ಯಾವುದೇ ಲೋಪ ಎಸಗಿರಲಿಲ್ಲ. ಸೂಕ್ತ ವೈದ್ಯಕೀಯ ಪ್ರಮಾಣ ಪತ್ರಗಳ ಸಹಿತ ನಿಗಮದ ಮಂಗಳೂರು ಶಾಖೆಯಲ್ಲಿ ಕ್ಲೇಮುಗಳನ್ನು ಸಕಾಲದಲ್ಲಿ ಹಾಗೂ ನಿಗದಿತ ನಮೂನೆಯಲ್ಲಿ ಸಲ್ಲಿಸಲಾಗಿತ್ತು. ಆದರೆ ನಿಗಮದ ಶಾಖೆಯು ಕ್ಲೇಮುದಾರರಿಗೆ ದಯಪಾಲಿಸಿದ್ದು ತಿರಸ್ಕಾರ, ನಿರಾಶೆ ಹಾಗೂ ಬೇಗುದಿಯಾಗಿತ್ತು. ಐದು ಕ್ಲೇಮುದಾರರ ಪೈಕಿ ಹೆರಿಗೆ ಭತ್ತೆಗೆ (Maternity Benefit) ಕೋರಿಕೆಯಿಟ್ಟ ಮಹಿಳಾ ನೌಕರರನ್ನು ಗುರಿಯಾಗಿಸಿದ ಅನ್ಯಾಯ ಇನ್ನಷ್ಟು ಕ್ರೂರವಾಗಿತ್ತು ಎನ್ನಬೇಕು. ಅವರ ಕ್ಲೇಮುಗಳ ತಿರಸ್ಕಾರ ಈ ಕೆಳಗಿನ ಕರುಣಾಜನಕ ಪರಿಸ್ಥಿತಿಗೆ ಎಡೆಮಾಡಿತ್ತು.

ಕ್ಲೇಮುದಾರರು ಕೋರಿಕೆಯಿಟ್ಟದ್ದು ಅವರಿಗೆ ನ್ಯಾಯವಾಗಿ, ಶಾಸನಾತ್ಮಕವಾಗಿ ಸಲ್ಲತಕ್ಕ ಹಿತಲಾಭಕ್ಕಾಗಿ. ಆದರೆ ಅವರಿಗೆ ಅದರ ಅಗತ್ಯ ಎಂದು ಇತ್ತೋ ಆಗ ಸಿಗಲಿಲ್ಲ. ಇನ್ನಷ್ಟು ಕೆಡುಕೆನಿಸುವ ವಿಚಾರವೇನೆಂದರೆ, ಮಹಿಳಾ ನೌಕರರಿಗೆ ಕಾನೂನಾತ್ಮಕವಾಗಿ 26 ವಾರಗಳ ಹಿತಲಾಭಸಹಿತ ಹೆರಿಗೆ ರಜೆಗೆ ಹಕ್ಕಿದ್ದರೂ ಆರ್ಥಿಕ ಸಂಕಷ್ಟ ಎದುರಾಗಿದ್ದು, ಬರಬೇಕಾದ ಹಿತಲಾಭವೂ ಇಲ್ಲ ಎಂಬ ನಕಾರಾತ್ಮಕ ಉತ್ತರದ ಹೊಡೆತವನ್ನು ತಾಳಿಕೊಳ್ಳಲಾಗದೆ ಹೆರಿಗೆಯಾಗಿ 12 ವಾರದಲ್ಲೇ ಕೆಲಸಕ್ಕೆ ಹಾಜರಾಗಲು ಅನಿವಾರ್ಯವಾಗಿ ಮುಂದಾದರು. ಹೀಗಾಗಿ ಕೊನೆಗೆ ಅವರಿಗೆ 14 ವಾರಗಳ ಹಿತಲಾಭವೂ ನಷ್ಟವಾಯಿತು. ಓರ್ವ ಪ್ರಜ್ಞಾವಂತ ಉದ್ಯೋಗದಾತರು ವಂತಿಗೆ ಪಾವತಿಸಿ ತಮ್ಮ ಕೆಲಸವಾಯಿತಲ್ಲ ಎಂದು ಕೈ ತೊಳೆದುಕೊಂಡು ಬಿಡದೆ ಹಿತಲಾಭ ವಂಚಿತ ನೌಕರರ ಪರವಾಗಿ ಕಾನೂನು ಸಲಹೆ ಪಡೆಯಲು ಮುಂದಾದ ಕಾರಣ ಈ ಐದೂ ಪ್ರಕರಣಗಳು ಬೆಳಕಿಗೆ ಬಂದವು. ರಾಷ್ಟ್ರಮಟ್ಟದಲ್ಲಿ ಪರಿಶೀಲಿಸಿದರೆ ಇಂತಹ ಮೌನರೋದನದಲ್ಲೇ ಕೊನೆಗೊಂಡು ತೆರೆಮರೆಗೆ ಸರಿದಿರಬಹುದಾದ ಇನ್ನೆಷ್ಟೋ ಪ್ರಕರಣಗಳು ಹೊರಬರಬಹುದು.

ದುರಂತವೆಂದರೆ ಉದ್ಯೋಗದಾತರು ವಂತಿಗೆ ಪಾವತಿಸದೆ ನುಣುಚಿಕೊಳ್ಳುವುದನ್ನು ತಪ್ಪಿಸಲು ಹಾಗೂ ಪಾವತಿಸುವಲ್ಲಿ ವಿಳಂಬವಾದರೆ ನಿಗಮಕ್ಕೆ ಆಗುವ ನಷ್ಟಗಳನ್ನು ತುಂಬಿಸುವ ಸಲುವಾಗಿ ಹಲವಾರು ದಂಡನೆಯ ನಿಯಮಗಳಿವೆ. ಆದರೆ ಹಿತಲಾಭಗಳಿಗಾಗಿ ಸಲ್ಲಿಸಲಾಗುವ ಕ್ಲೇಮುಗಳ ವಿಲೇವಾರಿಯಲ್ಲಾಗುವವಿಳಂಬವನ್ನು ತಡೆಯುವಂತಹ, ವಿಲೇವಾರಿಯ ಕಾರ್ಯವಿಧಾನದಲ್ಲಿ ಕಂಡು ಬರುವ ಉತ್ಸಾಹಶೂನ್ಯ ಪ್ರಕ್ರಿಯೆಯನ್ನು ತಿದ್ದಿತೀಡುವ ಗುರಿಯಿರುವ ಯಾವುದೇ ನಿಬಂಧನೆ ಕಾಯಿದೆಯಲ್ಲಿಲ್ಲ. ಮಾತ್ರವಲ್ಲ ಇ.ಎಸ್‌.ಐ. ಕಾಯಿದೆ ಅಸ್ತಿತ್ವಕ್ಕೆ ಬಂದು 71 ವರ್ಷಗಳೇ ಕಳೆದು ಹೋದರೂ ಕ್ಲೇಮುಗಳ ವಿಲೇವಾರಿಯಲ್ಲಾಗುವ ಅಸಮರ್ಥನೀಯ ವಿಳಂಬ ದಿಂದಾಗಿ ಕ್ಲೇಮುದಾರ ನೌಕರರಿಗಾಗುವ ಆರ್ಥಿಕ ನಷ್ಟವನ್ನು ಭರಿಸುವ ಗುರಿಯಿರುವ ಯಾವುದೇ ನಿಬಂಧನೆಯೂ ಇ.ಎಸ್‌.ಐ. ಕಾಯಿದೆ ಯಲ್ಲಿಲ್ಲ. ಬಹುಕಾಲದಿಂದಿರುವ ಈ ಲೋಪವನ್ನು ತೊಡೆದು ಹಾಕಿ, ಯಾವುದೇ ಹಿತಲಾಭದ ಪಾವತಿಯಲ್ಲಿ ವಿಳಂಬವಾದರೆ ವಿಳಂಬಕ್ಕೆ ಕಾರಣ ಯಾವುದೇ ಇರಲಿ, ವಿಳಂಬದ ಅವಧಿ ಎಷ್ಟೇ ಇರಲಿ , ಫ‌ಲಾನುಭವಿಗೆ ಹಿತಲಾಭದೊಡನೆ ಕಡ್ಡಾಯವಾಗಿ ಬಡ್ಡಿಯನ್ನೂ ಪಾವತಿಸತಕ್ಕದ್ದೆಂಬ ಶಾಸನಾತ್ಮಕ ವಿಧಿಯನ್ನು ಇ.ಎಸ್‌.ಐ. ಕಾಯಿದೆ ಯೊಳಗೆ ಈಗಲಾದರೂ ತರಲು ಕೇಂದ್ರ ಸರಕಾರ ಮುಂದಾಗಬೇಕಿದೆ.

• ಮುಳಿಯ ಗೋಪಾಲಕೃಷ್ಣ ಭಟ್ಟ

Advertisement

Udayavani is now on Telegram. Click here to join our channel and stay updated with the latest news.

Next