ಹುಬ್ಬಳ್ಳಿ: ರೈಲ್ವೆ ಮಾರ್ಗಗಳನ್ನು ಖಾಸಗಿಯವರಿಗೆ ವಹಿಸುವ ಕೇಂದ್ರ ಸರಕಾರದ ನಿರ್ಧಾರ ಖಂಡಿಸಿ ನೈಋತ್ಯ ರೈಲ್ವೆ ವಲಯ ಮಜ್ದೂರ್ ಸಂಘದ ನೇತೃತ್ವದಲ್ಲಿ ರೈಲ್ವೆ ನೌಕರರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಗದಗ ರಸ್ತೆಯ ಡೀಸೆಲ್ ಶೆಡ್ ಮುಂಭಾಗದಲ್ಲಿ ಸಂಘದ ನೇತೃತ್ವದಲ್ಲಿ ರೈಲ್ವೆ ನೌಕರರು ಕೇಂದ್ರ ಸರಕಾರದ ನಿರ್ಧಾರ ಖಂಡಿಸಿ ಘೋಷಣೆ ಕೂಗಿದರು. ತೇಜಸ್ ಎಕ್ಸ್‌ಪ್ರೆಸ್ ಎರಡು ಐಷಾರಾಮಿ ರೈಲುಗಳನ್ನು ಲಕ್ನೋ-ದೆಹಲಿ ಹಾಗೂ ಮುಂಬೈ-ಆಹ್ಮದಾಬಾದ್ ನಡುವೆ ಕಾರ್ಯಾಚರಣೆ ಮಾಡಲು ಐಆರ್‌ಸಿಟಿಸಿಗೆ ಹಸ್ತಾಂತರಿಸಲಾಗಿದೆ.
ಅದೇ ರೀತಿಯಲ್ಲಿ ದೇಶದಾದ್ಯಂತ ಸುಮಾರು 150ಕ್ಕೂ ಹೆಚ್ಚು ಮಾರ್ಗಗಳನ್ನು ಖಾಸಗಿಯವರಿಗೆ ವಹಿಸಲು ಕೇಂದ್ರ ಸರಕಾರ ಮುಂದಾಗಿದೆ. ಸರಕಾರದ ಈ ನಡೆ ಪ್ರಯಾಣಿಕರ ಹಾಗೂ ಕಾರ್ಮಿಕರ ವಿರೋಧಿ ನೀತಿಯಾಗಿದೆ. ಕೂಡಲೇ ಈ ನಿರ್ಧಾರದಿಂದ
ಕೇಂದ್ರ ಸರಕಾರ ಹಿಂದೆ ಸರಿಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸಂಘದ ಅಧ್ಯಕ್ಷ ಆರ್.ಆರ್. ನಾಯ್ಕ ಮಾತನಾಡಿ, ಖಾಸಗಿಯವರಿಗೆ ನೀಡುವುದರಿಂದ ಅವರು ಸೇವೆಗೆ ಬದಲಾಗಿ ಲಾಭಕ್ಕಾಗಿ ರೈಲು ಓಡಿಸುತ್ತಾರೆ. ಇದರಿಂದ ವಿವಿಧ ರಿಯಾಯಿತಿ ಪಾಸ್‌ಗಳಿಗೆ ಕಡಿವಾಣ ಬೀಳಲಿದೆ. ಪ್ರಯಾಣ ದರದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಕೇಂದ್ರ ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ದೇಶದ್ಯಾಂತ ಹೋರಾಟ ಅನಿವಾರ್ಯ ಎಂದರು.
ಪ್ರಧಾನ ಕಾರ್ಯದರ್ಶಿ ಡಾ| ಎ.ಎಂ. ಡಿಕ್ರೋಜ್, ಸಹಾಯಕ ಪ್ರಧಾನ ಕಾರ್ಯದರ್ಶಿ ಕೆ. ವೆಂಕಟೇಶ, ಎಸ್.ಎಫ್. ಮಲ್ಲಾಡ, ವಿಭಾಗೀಯ ಪ್ರಧಾನ ಕಾರ್ಯದರ್ಶಿ ಅಲ್ಬರ್ಟ್ ಡಿಕ್ರೋಜ್, ಪ್ರವೀಣ ಪಾಟೀಲ, ಜಾಕೀರ್ ಸನದಿ, ವೈ. ಜಾಕೋಬ್, ಮಲ್ಲಿಕಾರ್ಜುನ ಸಿಂದಗಿ ಇನ್ನಿತರರಿದ್ದರು.