ಕಲಬುರಗಿ: ವೇತನ ಬಾಕಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಜೆಸ್ಕಾಂ ಹಾಗೂ ಎಸ್ಕಾಂ ಗುತ್ತಿಗೆ ನೌಕರರ ಸಂಘದ ಕಾರ್ಯಕರ್ತರು ಗುಲಬರ್ಗಾ ವಿದ್ಯುತ್ ಪ್ರಸರಣಾ ನಿಗಮದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜೆಸ್ಕಾಂ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರು, ಜೆಸ್ಕಾಂನಲ್ಲಿ ಕಲಬುರಗಿ, ಯಾದಗಿರಿ ಹಾಗೂ ಬೀದರ ಜಿಲ್ಲೆಗಳ 33/11 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳ ನೂರಾರು ಹೊರ ಗುತ್ತಿಗೆ ನೌಕರರಿಗೆ ವೇತನ ಹೆಚ್ಚಳ ಮಾಡಿಲ್ಲ. ಕೂಡಲೇ ನೌಕರರ ಖಾತೆಗೆ ವೇತನ ಜಮೆ ಮಾಡಬೇಕು.
ಹೆಚ್ಚಳವಾದ ವೇತನದ ಬಾಕಿ ನೀಡಬೇಕು ಎಂದು ಒತ್ತಾಯಿಸಿದರು. ವೇತನ ಚೀಟಿ, ಭವಿಷ್ಯ ನಿಧಿ ಸಂದಾಯದ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಕೂಡಲೇ ಮಾಹಿತಿ ನೀಡಬೇಕು. ರಜಾ ಸೌಲಭ್ಯ, ಸಮವಸ್ತ್ರ, ಶೂ, ಸುರಕ್ಷತಾ ಸಾಧನಗಳು, ನೇಮಕಾತಿ ಪತ್ರ ಮುಂತಾದ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ಗುತ್ತಿಗೆ ನೌಕರರ ವೇತನ ಕೂಡಲೇ ಹೆಚ್ಚಿಸಿ ರಿಟೆಂಡರ್ ಪ್ರಕ್ರಿಯೆ ಆರಂಭಿಸಬೇಕು. ಬಾಕಿಯಿರುವ ವೇತನ ಕೂಡಲೇ ಪಾವತಿಸಬೇಕು. ನಿಗದಿತ ವೇತನಕ್ಕಿಂತ ಕಡಿಮೆ ವೇತನ ನೀಡಿ ಅನ್ಯಾಯ ಮಾಡುವುದು ನಿಲ್ಲಿಸಬೇಕು. ನೌಕರರ ಬ್ಯಾಂಕ್ ಖಾತೆಗೆ ವೇತನ ಜಮಾ ಮಾಡಬೇಕು. ವಿದ್ಯುತ್ ಗುತ್ತಿಗೆ ನೌಕರರನ್ನು ಸೇವೆಯಿಂದ ವಜಾಗೊಳಿಸಬಾರದು.
ಗುತ್ತಿಗೆದಾರರು ಬದಲಾದರೂ ಅವರ ಸೇವೆ ಮುಂದುವರಿಸಬೇಕು. ವಿದ್ಯುತ್ ಗುತ್ತಿಗೆ ನೌಕರರಿಗೆ ಬೋನಸ್, ಇಎಸ್‌ಐ, ರಜೆ, ಪಿಎಫ್, ರಾತ್ರಿ ಪಾಳಿ ಭತ್ಯೆ ಸೇರಿದಂತೆ ಇತರ ಸೌಲಭ್ಯ ಖಚಿತಪಡಿಸಬೇಕು. ಎಜೆನ್ಸಿಯವರು ಕಾರ್ಮಿಕ ಕಾಯ್ದೆಯಂತೆ ಈಗ ಸೇವೆಯಲ್ಲಿರುವ ನೌಕರರಿಗೆ ನೇಮಕ ಪತ್ರ, ನಿಗದಿತ ವೇತನ, ಪಿಎಫ್, ಸಮವಸ್ತ್ರ ರಜೆ ಇತ್ಯಾದಿ ಒದಗಿಸಬೇಕು ಎಂದು ಒತ್ತಾಯಿಸಿದರು.
ಎಸ್.ಎಂ. ಶರ್ಮಾ, ವೀರೇಶ ಎನ್.ಎಸ್. ಹಾಗೂ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.