ಚಿತ್ರದುರ್ಗ: 2006ಕ್ಕಿಂತ ಮೊದಲು ನೇಮಕಾತಿ ಹೊಂದಿ 2008ರ ನಂತರ ಅನುದಾನಕ್ಕೆ ಒಳಪಟ್ಟಿರುವ ಖಾಸಗಿ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಕಾಲ್ಪನಿಕ ವೇತನ ಮತ್ತು ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಹಲವು ನೌಕರರು ಸೇವಾ ಅವಧಿಯಲ್ಲಿಯೇ ಮರಣ ಹೊಂದಿದ್ದಾರೆ. ಕೆಲವರು ನಿವೃತ್ತಿಯಾಗಿದ್ದಾರೆ. ಮತ್ತೆ ಕೆಲವರು ನಿವೃತ್ತಿಯ ಅಂಚಿನದ್ದಾರೆ. ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಮಾಡದಿದ್ದರೆ ನಾವೆಲ್ಲರೂ ಇಳಿವಯಸ್ಸಿನಲ್ಲಿ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ತಿಳಿಸಿದರು.
2006ರ ನಂತರ ನೇಮಕವಾಗಿರುವ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ವ್ಯವಸ್ಥೆ (ಎನ್.ಪಿ.ಎಸ್) ಇದೆ. ಆದರೆ ಖಾಸಗಿ ಅನುದಾನಿತ ಶಾಲಾ ಕಾಲೇಜುಗಳ ನೌಕರರು 2006ರ ಪೂರ್ವದಲ್ಲಿಯೇ ನೇಮಕವಾಗಿದ್ದರೂ ಯಾವುದೇ ಸೌಲಭ್ಯವಿಲ್ಲದೇ ವಂಚಿತರಾಗಿದ್ದಾರೆ.
ಈಗಾಗಲೇ 20, 25 ಹಾಗೂ 30ವರ್ಷಗಳ ಸೇವೆ ಸಲ್ಲಿಸಿದ್ದರೂ ಸಹ ಸರ್ಕಾರದಿಂದ ವೇತನ ಪಡೆದಿರುವುದು ಕೇವಲ 7-8 ವರ್ಷಗಳಿಂದ ಮಾತ್ರ. ಇನ್ನು ಜೀವನ ರೂಪಿಸಿಕೊಳ್ಳಲು ಆರಂಭಿಸುತ್ತಿದ್ದಂತೆ ನಿವೃತ್ತಿಯಾಗಿ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಯ ನಮ್ಮ ನೌಕರರು ಜಿಲ್ಲಾಕಾರಿ ಮುಂದೆ ಸಂಕಷ್ಟವನ್ನು ನಿವೇದನೆ ಮಾಡಿದ್ದು, ರಾಜ್ಯ ಸರ್ಕಾರ ನಮ್ಮ ನೋವಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು. ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ, ಕಾರ್ಯದರ್ಶಿ ಜಿ.ಎಸ್. ತಿಪ್ಪೇಸ್ವಾಮಿ, ದುರುಗೇಶ್ ಇತರರು ಮನವಿ ಸಲ್ಲಿಸಿದರು.