ಚೆನ್ನೈ: ಕಾರ್ಮಿಕ ಸಂಘಟನೆಗಳು, ವಿವಿಧ ವಲಯದ ಉದ್ಯೋಗಿಗಳ ಸಂಘಟನೆಗಳು ದೇಶಾದ್ಯಂತ ಬೇಕಾದಷ್ಟಿವೆ. ಆದರೆ ಸಾಫ್ಟ್ ವೇರ್ ವಲಯದಲ್ಲಿ?
ಈ ವರೆಗೂ ಅಂತಹದ್ದೊಂದು ಪ್ರಯತ್ನ ನಡೆದಿರಲಿಲ್ಲ. ಆದರೀಗ ತಮಿಳುನಾಡಿನಲ್ಲಿ ಸಾಫ್ಟ್ವೇರ್ ಉದ್ಯೋಗಿಗಳ ಸಂಘಟನೆಯೂ ಅಸ್ತಿತ್ವಕ್ಕೆ ಬಂದಿದೆ. ಆರಂಭದಲ್ಲೇ ಇದಕ್ಕೆ ನೂರಕ್ಕೂ ಹೆಚ್ಚು ಮಂದಿ ಐಟಿ ಉದ್ಯೋಗಿಗಳು ಸದಸ್ಯರಾಗಿದ್ದಾರೆ. “ಫೋರಂ ಫಾರ್ ಐಟಿ ಎಂಪ್ಲಾಯೀಸ್, ತಮಿಳುನಾಡು’ ಹೆಸರಿನ ಉದ್ಯೋಗಿಗಳ ಸಂಘ ಇದಾಗಿದೆ.
ಇತ್ತೀಚೆಗೆ ಖ್ಯಾತ ಐಟಿ ಕಂಪೆನಿ ಕಾಗ್ನಿಝೆಂಟ್ ಹಲವು ಉದ್ಯೋಗಿಗಳನ್ನು ಕೆಲಸದಿಂದ ಕೈ ಬಿಡಲು ಯೋಜಿಸಿದ್ದು, ಆ ಬಳಿಕ ಈ ಸಂಘಟನೆ ಜನ್ಮ ತಳೆದಿದೆ. ಮಹಿಳೆಯರ ಸುರಕ್ಷತೆ, ಕಾರ್ಮಿಕ ಕಾನೂನುಗಳು, ಸದಸ್ಯರ ರಕ್ಷಣೆ ವಿಚಾರದಲ್ಲಿ ನಮ್ಮ ಸಂಘಟನೆ ಕೆಲಸ ಮಾಡಲಿದೆ ಎಂದು ಐಟಿ ಉದ್ಯೋಗಿಗಳ ಸಂಘದ ಪಿ. ಪರಿಮಳಾ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಸುಮಾರು 4.5 ಲಕ್ಷ ಮಂದಿ ಐಟಿ ಉದ್ಯೋಗಿಗಳಿದ್ದಾರೆ. ಇವರಲ್ಲಿ ಹಲವರು ಸಂಘಟನೆ ಸೇರಲು ಹಿಂದೇಟು ಹಾಕುತ್ತಿದ್ದಾರೆ. ಕಂಪೆನಿಗಳು ತಮ್ಮನ್ನು “ತೊಂದರೆ ನೀಡುವವರು’ ಎಂದು ಪರಿಗಣಿಸುವುದರಿಂದ ಸೇರಲು ಹಿಂಜರಿಯುತ್ತಿರುವುದಾಗಿಹೇಳಿದ್ದಾರೆ.
ಆದರೆ ಉದ್ಯೋಗಿ ಸಂಘಟನೆ ಬಗ್ಗೆ ರಾಷ್ಟ್ರೀಯ ಚಾನೆಲ್‌ಗೆ ಪ್ರತಿಕ್ರಿಯಿಸಿರುವ, ಇನ್ಫೋಸಿಸ್ ಸಹಸಂಸ್ಥಾಪಕ ಮೋಹನ್‌ದಾಸ್ ಪೈ ಅವರು, ” ಈ ಸಂಘಟನೆ ಸೇರ್ಪಡೆಗೆ ಯಾರೂ ಮುಂದಾಗುವುದಿಲ್ಲ. ದೇಶದ ಐಟಿ ಉದ್ಯಮಕ್ಕೆ ಶೇ.96ರಷ್ಟು ಕೆಲಸ ವಿದೇಶಗಳಿಂದಲೇ ದೊರಕುತ್ತದೆ. ಇದು ಸ್ಥಳೀಯ ಚಟುವಟಿಕೆ ಅಲ್ಲ’ ಎಂದು ಹೇಳಿದ್ದಾರೆ.
ತಮಿಳುನಾಡು ಕಳೆದ ವರ್ಷ ಉದ್ಯೋಗಿಗಳ ಸಂಘ ಕಟ್ಟಲು ಕಾನೂನಿನಲ್ಲಿ ಅವಕಾಶ ಮಾಡಿಕೊಟ್ಟಿತ್ತು. ಕರ್ನಾಟದಲ್ಲಿ ಈಗಲೂ ಇದಕ್ಕೆ ಅನುಮತಿ ಇಲ್ಲ.