ಹಾಸನ: ಅಕ್ಷರ ದಾಸೋಹ ಯೋಜನೆ ಖಾಸಗೀಕರಣಗೊಳಿಸುವ ಸರ್ಕಾರದ ಕ್ರಮ ವಿರೋಧಿಸಿ ಮತ್ತು ಬಿಸಿಯೂಟದ ನೌಕರರಿಗೆ ಕನಿಷ್ಠ ವೇತನ ನೀಡಬೇಕೆಂದು ಒತ್ತಾಯಿಸಿ ಡಿ.26 ರಿಂದ ಬಿಸಿಯೂಟ ನೌಕರರು ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಿದ್ದಾರೆ ಎಂದು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಎಂ.ಬಿ.ಪುಷ್ಪಾತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 7ನೇ ವೇತನ ಆಯೋಗ ಮಾಸಿಕ 18 ಸಾವಿರ ರೂ.ಗಳಿಗಿಂತ ಕಡಿಮೆ ವೇತನಕ್ಕೆ ಯಾರಿಂದಲೂ ದುಡಿಸಬಾರದೆಂದು ಹೇಳಿದೆ. ಕಳೆದ 10 ವರ್ಷಗಳಿಂದ ದುಡಿಯುತ್ತಿರುವ ನೌಕರರ ವೇತನದಲ್ಲಿ ಹೆಚ್ಚಳ ಮಾಡಿಲ್ಲ. ಬಿಸಿಯೂಟ ನೌಕರರಿಗೆ ಮಾಸಿಕ 21 ಸಾವಿರ ರೂ. ವೇತನ ನೀಡಬೇಕೆಂಬ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ. ಈಗ ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ಅನುದಾನ ಕಡಿತ ಮಾಡಿ ಈ ಯೋಜನೆಯನ್ನು ಕೇಂದ್ರೀಕೃತ ಅಡುಗೆ ಕೇಂದ್ರಗಳನ್ನಾಗಿ ಮಾಡುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಹುನ್ನಾರ ಬಿಡಿ: ಮಂಡ್ಯ-ಮೈಸೂರು ಜಿಲ್ಲೆಯಲ್ಲಿ ಅಕ್ಷಯಪಾತ್ರೆ ಫೌಂಡೇಷನ್ ಸಂಸ್ಥೆಯಿಂದ ಬಿಸಿಯೂಟ ನೀಡಲು ಚಿಂತನೆ ನಡೆಸಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಖಾಸಗಿಯವರಿಗೆ ಬಿಸಿಯೂಟ ಯೋಜನೆ ವಹಿಸುವ ಹುನ್ನಾರವನ್ನು ಸರ್ಕಾರ ಮಾಡುತ್ತಿದೆ ಎಂದು ದೂರಿದರು. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪೂರಕವಾಗಿರುವ ಬಿಸಿಯೂಟ ಯೋಜನೆಯನ್ನು ಕೆಲ ಜಿಲ್ಲೆಗಳಲ್ಲಿ ಧಾರ್ಮಿಕ ಸಂಸ್ಥೆಗಳಿಗೆ ನೀಡಬಾರದು. ಸರ್ಕಾರವೇ ಈ ಯೋಜನೆ ನಡೆಸಬೇಕು. ಬಿಸಿಯೂಟ ನೌಕರರಿಗೆ ಕನಿಷ್ಟ ವೇತನ ಹೆಚ್ಚಳ ಮಾಡಿ, ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆ ತನಕ ಶಾಲೆಯಲ್ಲಿ ದಿನಕ್ಕೆ 6 ಗಂಟೆಗಿಂತಲೂ ಹೆಚ್ಚು ಕೆಲಸ ಮಾಡಿದರೂ ಆದೇಶದಲ್ಲಿ ಕೇವಲ 4 ಗಂಟೆ ಎಂದು ನಮೂದಿಸಲಾಗುತ್ತಿದೆ.
ಕೆಲಸದ ಅವಧಿಯನ್ನು 6 ಗಂಟೆ ಎಂದೇ ನಮೂದಿಸ ಬೇಕು. ಅಡುಗೆ ಕೆಲಸದ ಜೊತೆಗೆ ಶಾಲೆಗಳಲ್ಲಿ “ಡಿ’ ಗ್ರೂಪ್ ನೌಕರರು ಇಲ್ಲದಿರುವುದರಿಂದ ಆ ಕೆಲಸವನ್ನು ಪರೋಕ್ಷವಾಗಿ ಅಡುಗೆಯವರಿಂದಲೇ ಮಾಡಿಸಲಾಗುತ್ತದೆ. ಆದ್ದರಿಂದ “ಡಿ’ ಗ್ರೂಪ್ ಕೆಲಸಗಳನ್ನು ಅಧಿಕೃತವಾಗಿ ಬಿಸಿಯೂಟ ನೌಕರರಿಗೆ ಜವಾಬ್ದಾರಿ ವಸಬೇಕು ಎಂದು ಆಗ್ರಹಿಸಿದರು.
ಶೀಘ್ರ ತೀರ್ಮಾನ ಕೈಗೊಳ್ಳಲಿ: ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಕೈದೋಟ ಮಾಡಲು ಅವಕಾಶವಿರುವುದರಿಂದ ಆ ಕೆಲಸವನ್ನು ಅಡುಗೆ ಸಿಬ್ಬಂದಿಯಿಂದಲೇ ಮಧ್ಯಾಹ್ನದ ನಂತರ ಮಾಡಿಸಿದರೆ ಉದ್ಯೊಗ ಖಾತ್ರಿಯಲ್ಲಿ ಕೊಡುವ 249 ರೂ. ಕನಿಷ್ಟ ಕೂಲಿ ಅಡುಗೆಯವರಿಗೆ ಕೊಡಲು ಸಾಧ್ಯ. ಈ ಅಂಶಗಳ ಕುರಿತು ಶಿಕ್ಷಣ ಇಲಾಖೆ ಮತ್ತು ರಾಜ್ಯ ಸರ್ಕಾರ ಕೂಡಲೇ ತೀರ್ಮಾನ ತೆಗೆದುಕೊಳ್ಳಬೇಕು. ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಡಿ.26 ರಿಂದ ಮುಷ್ಕರ ಆರಂಭಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಕಾರ್ಯಾಧ್ಯಕ್ಷೆ ಉಷಾ, ಪ್ರಧಾನ ಕಾರ್ಯದರ್ಶಿ ಅರವಿಂದ್, ಉಪಾಧ್ಯಕ್ಷರಾದ ಯೋಶೋಧಾ, ಮೀನಾಕ್ಷಿ, ಕಲಾವತಿ ಇದ್ದರು.