ಹೊಸದಿಲ್ಲಿ: ಖಾಸಗಿ ಮತ್ತು ಸರಕಾರಿ ರಂಗದ ಉದ್ಯೋಗಿಗಳ ಭವಿಷ್ಯದ ಉಪಯೋಗಕ್ಕಾಗಿ ಇರುವ ಭವಿಷ್ಯ ನಿಧಿ ಖಾತೆಯಿಂದ ಲಾಕ್ ಡೌನ್ ಅವಧಿಯಲ್ಲಿ ಬರೋಬ್ಬರಿ 40 ಸಾವಿರ ಕೋಟಿ ರೂಪಾಯಿಗಳನ್ನು ಪಿ.ಎಫ್. ಖಾತೆದಾರರು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.
ಮಾರ್ಚ್ 25ರಿಂದ ಆಗಸ್ಟ್ 31ರ ಅವಧಿಯವರೆಗೆ ಇಷ್ಟು ಮೊತ್ತದ ಹಣ ಪಿ.ಎಫ್. ಖಾತೆಯಿಂದ ವಿದ್ ಡ್ರಾ ಆಗಿದೆ ಎಂಬ ಮಾಹಿತಿಯನ್ನು ಕಾರ್ಮಿಕ ಮತ್ತು ಉದ್ಯೋಗ ಖಾತೆಯ ರಾಜ್ಯ ಸಚಿವ (ಸ್ವತಂತ್ರ ಖಾತೆ) ಸಂತೋಷ್ ಕುಮಾರ್ ಗಂಗ್ವಾರ್ ಅವರು ಲೋಕಸಭೆಗೆ ನೀಡಿದ್ದಾರೆ.
ಮಹಾರಾಷ್ಟ್ರ ರಾಜ್ಯವೊಂದರಲ್ಲೇ 7,837.85 ಕೋಟಿ ರೂಪಾಯಿಗಳಷ್ಟು ಮೊತ್ತವನ್ನು ಪಿ.ಎಫ್. ಖಾತೆದಾರರು ಹಿಂಪಡೆದುಕೊಂಡಿದ್ದಾರೆ. ಆ ಬಳಿಕದ ಸ್ಥಾನದಲ್ಲಿ ಕರ್ನಾಟಕ ರಾಜ್ಯವಿದ್ದು ಇಲ್ಲಿ 5,743.96 ಕೊಟಿ ರೂಪಾಯಿಗಳಷ್ಟು ಮೊತ್ತವನ್ನು ಹಿಂಪಡೆದುಕೊಳ್ಳಲಾಗಿದೆ. ಇನ್ನುಳಿದಂತೆ ತಮಿಳುನಾಡು (4,984.51 ಕೋಟಿ ರೂಪಾಯಿಗಳು), ದೆಹಲಿ (2,940.97 ಕೋಟಿ ರೂಪಾಯಿಗಳು) ಮತ್ತು ತೆಲಂಗಾಣ (2,619.39 ಕೋಟಿ ರೂಪಾಯಿ) ಮೊತ್ತವನ್ನು ಪಿ.ಎಫ್. ಖಾತೆದಾರರು ತಮ್ಮ ಖಾತೆಗಳಿಂದ ಪಡೆದುಕೊಂಡಿದ್ದಾರೆ.
ಲಾಕ್ ಡೌನ್ ಬಳಿಕ ದೇಶದ ಉತ್ಪಾದನಾ ರಂಗಕ್ಕೆ ಚೇತರಿಕೆ ನಿಡಲು ಮತ್ತು ಉದ್ಯೋಗಿಗಳ ಬೆಂಬಲಕ್ಕಾಗಿ ಕೇಂದ್ರ ಸರಕಾರ ಕೈಗೊಂಡಿರುವ ಕ್ರಮಗಳ ಕುರಿತಾಗಿಯೂ ಸಂತೋಷ್ ಕುಮಾರ್ ಅವರು ಲೋಕಸಭೆಗೆ ಮಾಹಿತಿ ನೀಡಿದರು.
ಇದರಲ್ಲಿ ಮುಖ್ಯವಾಗಿ ಹೆಚ್ಚೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡುವುದು, ಖಾಸಗಿ ರಂಗಕ್ಕೆ ಇನ್ನಷ್ಟು ಬಲ ತುಂಬುವುದು, ಹೂಡಿಕೆಗಳ ಉತ್ತೇಜನ ಸಹಿತ ನೆನಗುದಿಗೆ ಬಿದ್ದಿರುವ ವಿವಿಧ ಯೋಜನೆಗಳ ಶೀಘ್ರ ಅನುಷ್ಠಾನ, ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ, ನರೇಗಾ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆ ಮತ್ತು ದೀನ್ ದಯಾಳ್ ಅಂತ್ಯೋದಯ ಯೋಜನೆ ಸೇರಿದಂತೆ ಸರಕಾರದ ವಿವಿಧ ಯೋಜನೆಗಳಲ್ಲಿ ನಿಧಿ ಸದ್ಭಳಕೆಗೆ ಕ್ರಮ ಕೈಗೊಳ್ಳುವುದು ಇವುಗಳಲ್ಲಿ ಸೇರಿದೆ.
ಆದರೆ, ಭವಿಷ್ಯ ನಿಧಿ ಪ್ರಯೋಜನವನ್ನು ಪಡೆದುಕೊಳ್ಳುತ್ತಿರುವವರಿಗೆ ಸರಕಾರ ಸಾಮಾಜಿಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಯೋಚಿಸುತ್ತಿದೆ ಎಂಬ ಮಾಹಿತಿಯನ್ನು ಸಚಿವರು ನಿರಾಕರಿಸಿದ್ದಾರೆ ಮತ್ತು ಅಂತಹ ಯಾವುದೇ ಯೋಚನೆಗಳು ಕೇಂದ್ರ ಸರಕಾರದ ಮುಂದಿಲ್ಲ ಎಂದು ಅವರು ಲೋಕಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.