ಕುಂದಾಪುರ: ಕೋವಿಡ್ 19 ತಡೆಗಾಗಿ ಲಾಕ್‌ಡೌನ್ ಆದಾಗಿನಿಂದ ಅಕ್ಷರದಾಸೋಹ ನೌಕರರನ್ನು ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಅವರ ಕುಟುಂಬಗಳನ್ನು ನಿರ್ಲಕ್ಷಿಸಿದ್ದಾರೆ.
ಬಿಸಿಯೂಟ ನೌಕರರಿಗೆ ಕೆಲಸವೂ ಇಲ್ಲ.ಕಳೆದ 3 ತಿಂಗಳಿನಿಂದ ನೀಡಲಾಗುತ್ತಿದ್ದ ಕೇವಲ 2,700 ರೂ. ವೇತನವೂ ಇಲ್ಲದಿರುವುದರಿಂದಾಗಿ ಸಂಕಷ್ಟದಲ್ಲಿದ್ದಾರೆ ಎಂದು ಕುಂದಾಪುರ ತಾಲೂಕು ಅಕ್ಷರದಾಸೋಹ ನೌಕರರ ಸಂಘವು ರಾಜ್ಯವ್ಯಾಪಿ ಪ್ರತಿಭಟನೆಯ ಭಾಗವಾಗಿ ಕುಂದಾಪುರದಲ್ಲಿಯೂ ಉಪತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ನೀಡಲಾಯಿತು.
ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ಕೊಡುವ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಆದರೆ ಅವರ ಕುಟುಂಬ ಮತ್ತು ಅವರ ಮಕ್ಕಳನ್ನೇ ಸರಕಾರ ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ. ಅಸಂಘಟಿತ ಕಾರ್ಮಿಕರಿಗೆ ಕೊಡುತ್ತಿರುವ ಪರಿಹಾರ ಧನವನ್ನು ಬಿಸಿಯೂಟ ನೌಕರರಿಗೂ ಕೊಡಬೇಕೆಂದು ಒತ್ತಾಯಿಸಲಾಯಿತು. ಎಪ್ರಿಲ್ ತಿಂಗಳಿನಿಂದ ಪುನಃ ಶಾಲಾ ಆರಂಭವಾಗುವವರೆಗೂ ಸಂಪೂರ್ಣ ವೇತನ ನೀಡಬೇಕು. ಬಿಸಿಯೂಟ ನೌಕರರಿಗೆ ಎಲ್‌ಐಸಿ ಆಧಾರಿತ ಪಿಂಚಣಿ ನೀಡಬೇಕು. ಬಿಸಿಯೂಟ ನೌಕರರನ್ನು ಖಾಯಂಗೊಳಿಸಬೇಕು. ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರವೇಶ ಶುಲ್ಕ, ಇತರೆ ಶುಲ್ಕಗಳಿಂದ ಸಂಪೂರ್ಣ ವಿನಾಯಿತಿ ನೀಡಬೇಕು.
ಬಿಸಿಯೂಟ ನೌಕರರ ಮತ್ತು ಅವರ ಕುಟುಂಬಗಳಿಗೆ ಉಚಿತ ಆರೋಗ್ಯ ಸೌಲಭ್ಯಗಳು ನೀಡಬೇಕು. ಬಾಕಿ ಇರುವ ವೇತನ ಕೂಡಲೇ ನೀಡಬೇಕು. ಈ ವೇಳೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಜಿಲ್ಲಾ ಉಪಾಧ್ಯಕ್ಷ ಮಹಾಬಲವಡೇರ ಹೋಬಳಿ, ಅಕ್ಷರದಾಸೋಹ ನೌಕರರ ಸಂಘದ ತಾಲೂಕು ಮುಖಂಡರಾದ ನಾಗರತ್ನ, ಕೆ. ವಿನೋದ, ಗೀತಾ, ರಾಖೀ, ಮೀನಾಕ್ಷಿ, ರಾಧಿಕಾ ಉಪಸ್ಥಿತರಿದ್ದರು.