ಚಿಕ್ಕಬಳ್ಳಾಪುರ: ಸರ್ಕಾರದ ಆದೇಶದಂತೆ ಗ್ರಾಪಂ ನೌಕರರಿಗೆ ಐಎಫ್ಎಂಎಸ್ ಮೂಲಕ ಕನಿಷ್ಟ ವೇತನ ನೀಡುವುದು ಸೇರಿದಂತೆ ಹಲ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಗ್ರಾಪಂ ನೌಕರರ ಸಂಘದ (ಸಿಐಟಿಯು) ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲೆಯ ನೂರಾರು ಗ್ರಾಪಂ ನೌಕರರು ಜಿಪಂ ಇರುವ ಜಿಲ್ಲಾಡಲಿತ ಭವನದ ಎದುರು ಪ್ರತಿಭಟನೆ ನಡೆಸಿದರು.
ನಗರದ ಅಣಕನೂರಿನಿಂದ ಜಿಲ್ಲಾ ಡಳಿತದ ಭವನದವರೆಗೂ ಪ್ರತಿಭಟನಾ ರ್ಯಾಲಿ ನಡೆಸಿದ ಗ್ರಾಪಂ ನೌಕರರು ಸರ್ಕಾರ ಆದೇಶಿಸಿದರೂ ಕನಿಷ್ಟ ವೇತನ ಕೊಡಲು ಮೀನಾ ಮೇಷ ಎಣಿ ಸುತ್ತಿರುವ ಗ್ರಾಪಂ ಅಧಿಕಾರಿಗಳ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಅಲ್ಲದೇ ಆಗಸ್ಟ್ 9ರೊಳಗೆ ನಮ್ಮ ಬೇಡಿಕೆಗಳನ್ನು ಸಮರ್ಪಕವಾಗಿ ಈಡೇರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಗ್ರಾಪಂ ನೌಕರರು ಎಚ್ಚರಿಸಿದರು.
ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ನಿರಂತರವಾಗಿ ಹೋರಾಟ ನಡೆಸಿ, ಗ್ರಾಪಂ ನೌಕರರಿಗೆ ಕನಿಷ್ಟ ವೇತನ ಕೊಡಿಸುವಲ್ಲಿ ನಮ್ಮ ಸಂಘಟನೆ ಸಾಕಷ್ಟು ಶ್ರಮಿಸಿದೆ. ಕಳೆದ ಕಾಂಗ್ರೆಸ್ ಸರ್ಕಾರ ಇದ್ದಾಗ ಸಿಎಂ ಸಿದ್ದರಾಮಯ್ಯ ಇದ್ದಾಗ ಒತ್ತಡ ಹೇರಿ ವೇತನವನ್ನು ಜಾರಿಗೊಳಿಸಿದವು ಎಂದರು.
ಅಧಿಕಾರಿಗಳಿಗೆ ಮನವಿ ಸಲ್ಲಿಕೆ: ಗ್ರಾಪಂ ನೌಕರರಿಗೆ ಪಿಂಚಣಿ, ವೈದ್ಯಕೀಯ ವೆಚ್ಚ, ಭವಿಷ್ಯ ನಿಧಿ ಸಿಗುವಂತೆ ಆದೇಶಿಸಬೇಕು. ನಗರಾಭಿವೃದ್ಧಿ ಇಲಾಖೆಯ ಮಾದರಿಯಲ್ಲಿ ಗ್ರಾಪಂ ನೌಕರರಿಗೆ ಸೇವಾ ನಿಯಮಾವಳಿ ರಚಿಸುವುದು ಪ್ರಗತಿಯಲ್ಲಿದೆ. ಇದಕ್ಕೆ ಸೂಕ್ತ ಆದೇಶ ಹೊರಡಿಸಬೇಕು ಎಂದು ಪ್ರತಿಭಟನಾಕಾರರು ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮಿನಾರಾಯಣ್‌ಗೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಗ್ರಾಪಂ ನೌಕರರ ಸಂಘದ ಗೌರವಾಧ್ಯಕ್ಷ ಜಿ.ಸಿದ್ಧಗಂಗಪ್ಪ, ಜಿಲ್ಲಾಧ್ಯಕ್ಷ ಗೋವಿಂದರೆಡ್ಡಿ, ಬಿ.ಎನ್. ಮುನಿಕೃಷ್ಣಪ್ಪ, ಪಾಪಣ್ಣ, ಸುದರ್ಶನ್, ಚಿಂತಾಮಣಿ ನಾಗರಾಜ್, ಕೆ.ಎನ್ .ನಾರಾಯಣಸ್ವಾಮಿ, ರವಿಕುಮಾರ್, ಜನಾರ್ದನ್, ನಾರಾಯಣಪ್ಪ, ಮುನಿತಿಮ್ಮಯ್ಯ ಹಾಜರಿದ್ದರು.