Advertisement

ಸಾಮಾಜಿಕ ಸಾಮರಸ್ಯಕ್ಕೆ ಒತ್ತು, ಅಸ್ಪ್ರಶ್ಯತೆ ವಿರುದ್ಧ ಹೋರಾಟ; ಸಂಸದ್‌

12:01 PM Nov 26, 2017 | Team Udayavani |

ಉಡುಪಿನ.25: ಸಾಮಾಜಿಕ ಸಾಮರಸ್ಯ ಕಾಪಾಡಲು ಮತ್ತು ಅಸ್ಪೃಶ್ಯತೆ ನಿವಾರಣೆಗೆ ಇನ್ನಷ್ಟು ತೀವ್ರಗತಿಯಲ್ಲಿ ಪ್ರಯತ್ನಿಸಲು ಧರ್ಮಸಂಸದ್‌ ಶನಿವಾರ ನಡೆದ ಗೋಷ್ಠಿಯಲ್ಲಿ ಸಾಧುಸಂತರು ನಿರ್ಧರಿಸಿದರು ಎಂದು ಪರ್ಯಾಯ ಪೇಜಾವರ ಶ್ರೀಗಳು ಮತ್ತು ವಿಹಿಂಪ ಅಂತಾರಾಷ್ಟ್ರೀಯ ಜಂಟಿ ಪ್ರ.ಕಾರ್ಯದರ್ಶಿ ಸುರೇಂದ್ರಕುಮಾರ್‌ ಜೈನ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Advertisement

ಡಾ|ಅಂಬೇಡ್ಕರ್‌ ಅವರು ಆರೆಸ್ಸೆಸ್‌ ಸರಸಂಘ ಚಾಲಕರಾಗಿದ್ದ ಗುರೂಜಿ ಗೋಳವಲ್ಕರ್‌ ಅವರನ್ನು ಭೇಟಿ ಮಾಡಿದ ಸಂದರ್ಭ ಸಂತರು ಅಸ್ಪೃಶ್ಯತೆ ವಿರುದ್ಧ ಸಮರ ಸಾರಿದರೆ ಫ‌ಲಕಾರಿಯಾಗುತ್ತದೆ ಎಂದಿದ್ದರು. 1969ರಲ್ಲಿ ಪೇಜಾವರ ಶ್ರೀಗಳ ನೇತೃತ್ವ ದಲ್ಲಿ ನಡೆದ ಪ್ರಥಮ ವಿಹಿಂಪ ಸಮ್ಮೇಳನದಲ್ಲಿ “ಹಿಂದುವಃ ಸೋದರಾಃ ಸರ್ವೇ’ ಎಂಬ ಘೋಷ ವಾಕ್ಯ ಹೊರಡಿಸಿ ಅಸ್ಪೃಶ್ಯತೆ ವಿರುದ್ಧ ಹೋರಾಟಕ್ಕೆ
ನಾಂದಿ ಹಾಡಿದರು. ಅಂದಿನಿಂದ ಪೇಜಾವರ ಶ್ರೀಗಳು ದಲಿತರ ಕೇರಿಗಳಿಗೆ ಪಾದಯಾತ್ರೆ ನಡೆಸಿದರು. ಬಳಿಕ ಆ ಪ್ರಯತ್ನ ಇತರ ಮಠಾಧೀಶರಿಂದ ನಡೆಯಿತು.

ಅಯೋಧ್ಯೆ ರಾಮಮಂದಿರಕ್ಕೆ ಕಾಮೇಶ್ವರ್‌ ಎಂಬ ದಲಿತ ಕಾರ್ಯಕರ್ತರಿಂದ ಶಿಲಾನ್ಯಾಸ ನಡೆಸಿದ್ದೆವು. ಈಗ ಮತ್ತೆ ಧರ್ಮಸಂಸದ್‌ ಅಧಿವೇಶನದಲ್ಲಿ ಸಂತರು ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಿರ್ಣಯಿಸಿದರು ಎಂದು ಸುರೇಂದ್ರಕುಮಾರ್‌ ಜೈನ್‌ ತಿಳಿಸಿದರು.

ಅಧಿವೇಶನದಲ್ಲಿದ್ದ ಬೌದ್ಧ ಬಿಕ್ಕು ರಾಹುಲ್‌ ಬೋಧಿಜೀ ಅವರು, ಡಾ|ಅಂಬೇಡ್ಕರ್‌ ಅವರು ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆಯನ್ನು ನಿವಾರಿ
ಸಲು ಆಗದ ಕಾರಣ ಬೌದ್ಧಧರ್ಮ ಸ್ವೀಕರಿಸಿದ್ದರು ಎಂಬುದನ್ನು ಉಲ್ಲೇಖೀಸಿದರು. ಈಗ ಸಂತರು ಅವರವರ ಮಠಮಂದಿರಗಳಲ್ಲಿ ಅಸ್ಪೃಶ್ಯತೆ
ಆಚರಣೆಯಾಗದಂತೆ ನೋಡಿಕೊಳ್ಳಬೇಕು ಎಂದು ನಿರ್ಧರಿಸಲಾಯಿತು ಎಂದು ಜೈನ್‌ ನುಡಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪೇಜಾವರ ಶ್ರೀಗಳು 1947ರಲ್ಲಿ ಸ್ವಾತಂತ್ರ್ಯ ಸಿಗುವಾಗ ಅಸ್ಪೃಶ್ಯತೆ ಇತ್ತು. ಬಳಿಕ ನಡೆದ ವಿವಿಧ ಪ್ರಯತ್ನಗಳಿಂದಾಗಿ ಸಾಕಷ್ಟು ಕಡಿಮೆಯಾಯಿತು. ಆದರೂ ಸಂಪೂರ್ಣ ಇಲ್ಲ ಎಂದು ಹೇಳುವಂತಿಲ್ಲ. ಪಂಕ್ತಿಭೇದ ವಿಷಯದಲ್ಲಿಯೂ ಕೆಲವು ಕಡೆ ಇದೆ ವಿನಾ ಎಲ್ಲ ಕಡೆ ಇಲ್ಲ. ಬಹುತೇಕ ಎಲ್ಲ ಕಡೆ ದಲಿತರ ಜೊತೆ ಊಟ ಮಾಡುವ ಸಹಪಂಕ್ತಿ ಜಾರಿಯಲ್ಲಿದೆ ಎಂದರು. ಅಂತರ್ಜಾತಿ ವಿವಾಹದ ಕುರಿತು ಪ್ರಶ್ನಿಸಿದಾಗ ಅಸ್ಪೃಶ್ಯತೆ ಬೇರೆ, ಅಂತರ್ಜಾತಿ ವಿಷಯ ಬೇರೆ. ಬಂಟರು, ಬಿಲ್ಲವರು, ಲಿಂಗಾಯತರು, ಗೌಡರು ಇತ್ಯಾದಿ ಬೇರೆ ಬೇರೆ ಜಾತಿಯವರನ್ನು ಯಾರೂ ಅಸ್ಪೃಶ್ಯರು ಎಂದು ಪರಿಗಣಿಸುವುದಿಲ್ಲ. ಆದ್ದರಿಂದ ಅಂತರ್ಜಾತಿ ವಿವಾಹದ ಪ್ರಶ್ನೆ ಅಸ್ಪೃಶ್ಯತೆಗೆ ಲಾಗು
ಆಗುವುದಿಲ್ಲ ಎಂದು ಸ್ವಾಮೀಜಿ ಹೇಳಿದರು.

Advertisement

ಸೆಕ್ಯುಲರ್‌ ಮಾಫಿಯ ಪ್ರಶ್ನೆಗೆ ಉತ್ತರಿಸಿದ ಜೈನ್‌, ಹಿಂದುತ್ವಕ್ಕೂ, ಬ್ರಾಹ್ಮಣಿಕೆಗೂ ತಳುಕು ಹಾಕುವವರು ಸೆಕ್ಯುಲರ್‌ ಮಾಫಿಯಗಳು. ಇದು ರಾಜಕಾರಣಿಗಳ ಒಡೆದು ಆಳುವ ನೀತಿ ಎಂದರೆ, ಸೆಕ್ಯುಲರ್‌ವಾದಿಗಳು ವಿಹಿಂಪ, ಬ್ರಾಹ್ಮಣರನ್ನು ದಲಿತ ವಿರೋಧಿಗಳೆಂದು
ಬಿಂಬಿಸುತ್ತಿದ್ದಾರೆಂದು ಹೇಳಿದರು.

ಮುಸ್ಲಿಮರು, ಕ್ರೈಸ್ತರ ಪೂರ್ವಜರು ಹಿಂದುಗಳೇ ಆಗಿದ್ದರು. ಬಹುತೇಕ ಮುಸ್ಲಿಮರು ತಮ್ಮ ಪೂರ್ವ ಜರು ಬಾಬರ್‌ ಅಲ್ಲ ಎನ್ನುತ್ತಿದ್ದಾರೆ ಎಂದರು.
ಹಿಂದೆ ಅನೇಕ ಮಾತುಕತೆಗಳು ಬಿದ್ದು ಹೋದ ಕಾರಣ, ಅಯೋಧ್ಯೆ ವಿಷಯದಲ್ಲಿ ರಾಜೀ ಸಂಧಾನ ಪರಿಣಾಮವಿಲ್ಲ ಎಂಬುದು ಧರ್ಮಸಂಸದ್‌
ಅಭಿಪ್ರಾಯ ಎಂದು ಜೈನ್‌ ಹೇಳಿದರೆ, “ನಾನು ಇಂದೂ ರವಿಶಂಕರ್‌ ಗುರೂಜಿ ಜತೆ ಮಾತನಾಡಿದ್ದು ಇಲ್ಲಿಗೆ ಆಗಮಿಸಲು ಕೋರಿದ್ದೇನೆ’ ಎಂದು ವಿಹಿಂಪ ನಾಯಕ ಎಂ.ಬಿ. ಪುರಾಣಿಕ್‌ ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next