Advertisement

ಹಾಲಿನ ಗುಣಮಟ್ಟಕ್ಕೆ ಒತ್ತು ಕೊಡಿ

09:55 PM Sep 08, 2019 | Team Udayavani |

ಚಿಕ್ಕಬಳ್ಳಾಪುರ: ಬರಗಾಲಕ್ಕೆ ಸಿಲುಕಿರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತಾಪಿ ಜನಕ್ಕೆ ಹೈನೋದ್ಯಮ ವರದಾನವಾಗಿದ್ದು, ಹಾಲು ಉತ್ಪಾದಕರು ಗುಣಮಟ್ಟಕ್ಕೆ ಆದ್ಯತೆ ನೀಡಿದಾಗ ಮಾತ್ರ ಹಾಲು ಒಕ್ಕೂಟಗಳು ಆರ್ಥಿಕವಾಗಿ ಸಬಲವಾಗಿ ರೈತಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅನುಕೂಲವಾಗುತ್ತದೆ ಎಂದು ಕೋಚಿಮುಲ್‌ ನಿರ್ದೇಶಕ ಎನ್‌.ಸಿ.ವೆಂಕಟೇಶ್‌ ತಿಳಿಸಿದರು.

Advertisement

ನಗರದ ಹೊರ ವಲಯದ ಚದಲುಪುರದ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಹಮ್ಮಿಕೊಂಡಿದ್ದ ಸಂಘದ 2018-19ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು ಗುಣಮಕ್ಕೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.

ಹಲವು ಸೌಕರ್ಯ: ಹಾಲು ಒಕ್ಕೂಟ ಲಾಭದ ದೃಷ್ಟಿಯಿಂದ ಕೆಲಸ ಮಾಡುತ್ತಿಲ್ಲ. ಎರಡು ಜಿಲ್ಲೆಗಳ ಲಕ್ಷಾಂತರ ರೈತ ಕುಟುಂಬಗಳನ್ನು ಆರ್ಥಿಕವಾಗಿ ಸದೃಢಗೊಳಿಸುವ ಸಂಕಲ್ಪ ತೊಟ್ಟು ಕಾರ್ಯ ನಿರ್ವಹಿಸುತ್ತಿದ್ದು, ರೈತರಿಗೆ ಹಲವಾರು ರೀತಿಯ ಸೌಲಭ್ಯ, ಸೌಕರ್ಯಗಳನ್ನು ಒದಗಿಸುತ್ತಿದೆ. ರೈತರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ಜಿಲ್ಲೆಗೆ ಹೋಲಿಸಿಕೊಂಡರೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಹಾಲು ಉತ್ಪಾದನೆ ಹಾಗೂ ಗುಣಮಟ್ಟದಲ್ಲಿ ಮುಂದಿದ್ದು, ಈ ಭಾಗದ ರೈತರಿಗೆ ಇನ್ನಷ್ಟು ಅನುಕೂಲವಾಗುವ ಕಾರ್ಯಕ್ರಮಗಳನ್ನು ಒಕ್ಕೂಟ ರೂಪಿಸಲಿದೆ ಎಂದರು. ಹಾಲು ಉತ್ಪಾದಕರು ಗುಂಪುಗಾರಿಕೆಗೆ ಅವಕಾಶ ಕೊಡದೇ ಗ್ರಾಮಗಳ ಅಭಿವೃದ್ಧಿಗೆ ಆಸಕ್ತಿ ತೋರಬೇಕು. ಗ್ರಾಮದ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರ ಕೊಡಬೇಕೆಂದು ಸಲಹೆ ನೀಡಿದರು.

ರೈತರಲ್ಲಿ ಆರ್ಥಿಕ ಚೈತನ್ಯ: ಸಂಘದ ಅಧ್ಯಕ್ಷ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಚದಲುಪುರ ನಾರಾಯಣಸ್ವಾಮಿ ಮಾತನಾಡಿ, ಯಾವುದೇ ಶಾಶ್ವತ ನದಿ, ನಾಲೆಗಳು ಇಲ್ಲದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕ್ಷೀರ ಕ್ರಾಂತಿಯೇ ಜಿಲ್ಲೆಯ ರೈತರಲ್ಲಿ ಆರ್ಥಿಕ ಚೈತನ್ಯ ತುಂಬಿದೆ. ಸರ್ಕಾರಗಳು ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಬರದಿಂದ ಕಂಗೆಟ್ಟಿರುವ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸಬೇಕೆಂದು ಆಗ್ರಹಿಸಿದರು.

Advertisement

ಶಾಶ್ವತ ನೀರಾವರಿ ಕಲ್ಪಿಸಿ: ಸರ್ಕಾರ ರೈತರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದರೂ ಅವು ಸಮರ್ಪಕವಾಗಿ ರೈತರಿಗೆ ತಲುಪುತ್ತಿಲ್ಲ. ಕೃಷಿ, ರೇಷ್ಮೆ, ತೋಟಗಾರಿಕೆ ನಂಬಿರುವ ಜಿಲ್ಲೆಯ ರೈತರಿಗೆ ಸರ್ಕಾರ ಇನ್ನಷ್ಟು ಮೂಲ ಸೌಕರ್ಯಗಳನ್ನು ಒದಗಿಸಬೇಕು. ವಿಶೇಷವಾಗಿ ಶಾಶ್ವತವಾದ ನೀರಾವರಿ ಸೌಕರ್ಯ ಕಲ್ಪಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಸಿ.ಎಸ್‌.ನಾರಾಯಣ, 2018-19ನೇ ಸಾಲಿನ ಸಂಘದ ವಾರ್ಷಿಕ ವರದಿ ಹಾಗೂ ಆಯವ್ಯಯವನ್ನು ಮಂಡಿಸಿ ಸರ್ವ ಸದಸ್ಯರ ಒಪ್ಪಿಗೆ ಪಡೆದರು. ಈ ಸಂದರ್ಭದಲ್ಲಿ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಪಾಪೇಗೌಡ, ವಿಸ್ತರಣಾಧಿಕಾರಿ ಡಿ.ಮಂಜುನಾಥ ಸೇರಿದಂತೆ ಚದಲುಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನೂತನ ನಿರ್ದೇಶಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ತಾಲೂಕಿನಿಂದ ಆಯ್ಕೆಗೊಂಡ ಎನ್‌.ಸಿ.ವೆಂಕಟೇಶ್‌ರನ್ನು ಚದಲುಪುರ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಅಧ್ಯಕ್ಷ ಎನ್‌.ನಾರಾಯಣಸ್ವಾಮಿ ಸನ್ಮಾನಿಸಿ ಶುಭ ಕೋರಿದರು. ಈ ವೇಳೆ ಸನ್ಮಾನ ಸ್ವೀಕರಿಸಿ ಜಿಲ್ಲೆಯ ಹೈನೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next