Advertisement

ಅಲ್ಪಸಂಖ್ಯಾತರ ಅಭಿವೃದ್ಧಿಗೆ ಒತ್ತು ನೀಡಿ

09:02 PM Feb 03, 2020 | Lakshmi GovindaRaj |

ತುಮಕೂರು: ಅಲ್ಪಸಂಖ್ಯಾತರ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿರುವುದರಿಂದ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಅನುದಾನ ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಜಾರ್ಜ್‌ ಕುರಿಯನ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಧಾನಮಂತ್ರಿ 15 ಅಂಶಗಳ ಹಾಗೂ ಪ್ರಧಾನಮಂತ್ರಿ ಜನ ವಿಕಾಸ್‌ ಕಾರ್ಯಕ್ರಮ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆ ಜಾರಿಗೊಳಿಸುತ್ತಿದೆ.

ಅಲ್ಪಸಂಖ್ಯಾತರ ಅಭಿವೃದ್ಧಿಗೆ 308 ಜಿಲ್ಲೆಗಳನ್ನು ಮೂಲಸೌಕರ್ಯ ಕಲ್ಪಿಸುವ ಕಾರ್ಯಕ್ರಮದಡಿ ಈಗಾಗಲೇ ಆಯ್ಕೆ ಮಾಡಿದ್ದು, ಈ ಪೈಕಿ ತುಮಕೂರು ಜಿಲ್ಲೆಯೂ ಒಂದಾಗಿದೆ. ಇನ್ನೂ ಅಲ್ಪಸಂಖ್ಯಾತರರು ಹೆಚ್ಚಿರುವ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ 5 ಕಿ.ಮೀ ವ್ಯಾಪ್ತಿಗೊಳಪಡುವ ಗ್ರಾಮಗಳ ಕ್ಲಸ್ಟರ್‌ ಗ್ರಾಮವನ್ನಾಗಿ ರಚಿಸಿ ಅಲ್ಪಸಂಖ್ಯಾತರಿಗೆ ಶೌಚಗೃಹ, ಹೆಲ್ತ್‌ ಸೆಂಟರ್‌ ಸೇರಿ ಮೂಲಸೌಕರ್ಯ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಫ‌ಲಾನುಭವಿಗಳ ಪಟ್ಟಿ ಸಿದ್ಧ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್‌,ನಟರಾಜ್‌ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪೂರಕ ಪೌಷ್ಟಿಕ ಆಹಾರ ಯೋಜನೆಯಡಿ 20,091 ಫ‌ಲಾನುಭವಿಗಳು ಈ ಸೌಲಭ್ಯ ಪಡೆದಿದ್ದಾರೆ. ಅಲ್ಲದೇ ಅಲ್ಪಸಂಖ್ಯಾತ ಮಹಿಳೆಯರಿಗೆ ಸಾಲ ನೀಡುವ ಸೌಲಭ್ಯದ ಫ‌ಲಾನುಭವಿಗಳ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗಿದೆ. ಮತ್ತು ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ಡಾ. ರಾಕೇಶ್‌ಕುಮಾರ್‌ ಮಾತನಾಡಿ, ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಸುಮಾರು 53 ಉರ್ದು ಶಾಲೆಗಳಿದ್ದು, ಅತಿಥಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಅಲ್ಲದೇ ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಜಿಲ್ಲೆಗೆ ಹಾಸ್ಟೆಲ್‌ಗ‌ಳ ಅವಶ್ಯಕತೆ ಅಗತ್ಯವಾಗಿದೆ ಎಂದು ತಿಳಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಕೋ.ನ.ವಂಶಿಕೃಷ್ಣ, ಪಾಲಿಕೆ ಆಯುಕ್ತ ಟಿ.ಭೂಬಾಲನ್‌, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಮೂಲಸೌಕರ್ಯ ಕಲ್ಪಿಸಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಡೆಸುತ್ತಿರುವ ಶಾಲಾ-ಕಾಲೇಜುಗಳಿಗೆ ಅಗತ್ಯವಿರುವ ಕ್ರೀಡಾಂಗಣ, ಸ್ಮಾರ್ಟ್‌ಕ್ಲಾಸ್‌ ರೂಂ, ಶೌಚಗೃಹ ಸೇರಿ ಮೂಲಸೌಕರ್ಯ ಕಲ್ಪಿಸಬೇಕು. ಅಲ್ಲದೇ ಜಿಲ್ಲೆಗೆ ಅಗತ್ಯವಿರುವ ಹಾಸ್ಟೆಲ್‌ ಇನ್ನಿತರೆ ಸೌಲಭ್ಯಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಿ, ಪ್ರಧಾನಮಂತ್ರಿ ಜನವಿಕಾಸ್‌ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅನುದಾನ ಬಿಡುಗಡೆಯಾಗುತ್ತಿದೆ. ಇದರ ಸೌಲಭ್ಯ ಫ‌ಲಾನುಭವಿಗಳಿಗೆ ತಲುಪಬೇಕು ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಜಾರ್ಜ್‌ ಕುರಿಯನ್‌ ತಿಳಿಸಿದರು.

ಅಲ್ಪಸಂಖ್ಯಾತರ ಇಲಾಖೆ ಯೋಜನೆಯಡಿ 31,323 ಮೆಟ್ರಿಕ್‌ ಪೂರ್ವ, 7,100 ಮೆಟ್ರಿಕ್‌ ನಂತರ ಹಾಗೂ ಮೆರಿಟ್‌ ಆಧಾರದ ಮೇರೆಗೆ 7,060 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಅಲ್ಲದೇ ಜಿಲ್ಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಪಿಎಚ್‌ಡಿ ಫೆಲೋಶಿಪ್‌ ಪಡೆಯುತ್ತಿದ್ದಾರೆ.
-ಜಾವೇದ್‌ ಕರಂಗಿ, ಅಲ್ಪಸಂಖ್ಯಾತರ ಇಲಾಖೆ ಕಲ್ಯಾಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next