Advertisement
ಇತ್ತೀಚೆಗೆ ಪ್ರಧಾನಮಂತ್ರಿ ನರೆಂದ್ರ ಮೋದಿಯವರು ಸ್ವಸ್ಥ ಭಾರತಕ್ಕಾಗಿ ಹಮ್ “ಫಿಟ್ ಹೈ ತೋ ಇಂಡಿಯಾ ಫಿಟ್’ ಎನ್ನುವ ಅಭಿಯಾನವನ್ನು ಪ್ರಾರಂಭಿಸಿದರು. ತಮ್ಮ ಬೆಳಗಿನ ವ್ಯಾಯಾಮದ ದಿನಚರಿಯ ವಿಡಿಯೊ ತುಣುಕನ್ನು ಜಾಲತಾಣಗಳಿಗೆ ಅಪ್ ಲೋಡ್ ಮಾಡುವ ಮೂಲಕ ಜನತೆಯ ಮುಂದಿಟ್ಟರು. ತಮ್ಮಂತೆ ಇತರರೂ ತಮ್ಮ ವ್ಯಾಯಾಮದ ವಿಡಿಯೋ ಕ್ಲಿಪ್ಪಿಂಗ್ ಅಪ್ ಲೋಡ್ ಮಾಡುವಂತೆ ವಿನಂತಿಸಿದರು. ಪ್ರಧಾನಮಂತ್ರಿಯವರ ಫಿಟ್ ನೆಸ್ ಕುರಿತಾದ ಜಾಗೃತಿ ಕಾರ್ಯಕ್ರಮದಲ್ಲಿ ರಾಜ್ಯವರ್ಧನ್ ರಾಠೊಡ್, ಕಿರಣ್ ರಿಜಿಜು ಮೊದಲಾದ ಕೇಂದ್ರೀಯ ಮಂತ್ರಿಗಳು, ಕ್ರಿಕೆಟ್ ಮತ್ತು ಸಿನಿಮಾ ಜಗತ್ತಿನ ತಾರೆಯರು ಕೈ ಜೋಡಿಸಿದರು. ಮಾಜಿ ಪ್ರಧಾನಿ ದೇವೇಗೌಡರು ಈ ಇಳಿ ವಯಸ್ಸಿನಲ್ಲಿ ತಾವಿನ್ನೂ ಫಿಟ್ ಆಗಿರುವ ಸಂದೇಶ ನೀಡಿದರು.
ಈ ಮೂರು-ನಾಲ್ಕು ದಶಕಗಳಲ್ಲಿ ನಮ್ಮ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಜಾಗತೀಕರಣ ನಗರಗಳ ಜನರ ಜೀವನವನ್ನಷ್ಟೇ ಅಲ್ಲ ಗ್ರಾಮೀಣರ ಬದುಕಿನಲ್ಲೂ ಸಾಕಷ್ಟು ಸ್ಥಿತ್ಯಂತರವನ್ನು ಹುಟ್ಟು ಹಾಕಿದೆ. ಸಮಯದ ಬೇಡಿಕೆಗ ನುಗುಣವಾಗಿ ಕೃಷಿಯ ಮೇಲೆ ಅವಲಂಬನೆಯಾಗಿದ್ದ ಹೆಚ್ಚುವರಿ ಜನಸಂಖ್ಯೆಯನ್ನು ಔದ್ಯೋಗಿಕ ಕ್ಷೇತ್ರದತ್ತ ವರ್ಗಾಯಿಸುವುದೇನೋ ಅನಿವಾರ್ಯ ನಿಜ. ಆದರೆ ಈ ರೀತಿ ಕೃಷಿಯನ್ನು ಬಿಟ್ಟು ಅನ್ಯ ಉದ್ಯೋಗಗಳಿಗೆ ಶರಣಾದ ಜನ ತಮ್ಮ ಜೀವನಶೈಲಿಯಲ್ಲಿ ಸಾಂಪ್ರದಾಯಿಕವಾಗಿ ತಮಗರಿವಲ್ಲದೇ ಹಾಸುಹೊಕ್ಕಾಗಿದ್ದ ಆರೋಗ್ಯಕರ ಕ್ರಿಯೆಗಳಿಂದ ದೂರವಾದರು. ಇದರೊಂದಿಗೆ ಪಾಶ್ಚಾತ್ಯ ಆಹಾರ ಶೈಲಿಯ ಮೈದಾ ಬಳಕೆಯ ತಿಂಡಿ ತಿನಿಸುಗಳ ಸೇವನೆಯಲ್ಲಿ ಹೆಚ್ಚಳ, ಧೂಮಪಾನ, ತಂಬಾಕು ಸೇವನೆಯೇ ಮುಂತಾದವುಗಳಿಂದಾಗಿ ಸ್ಥೂಲ ಕಾಯರಾಗಿ ನಾನಾ ರೀತಿಯ ಆರೊಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿದೆ. ವಾಹನಗಳ ಸೌಕರ್ಯದಲ್ಲಿ ಹೆಚ್ಚಳ, ದೈನಂದಿನ ಕೆಲಸಗಳಲ್ಲಿ ಯಂತ್ರಗಳ ಬಳಕೆಯಲ್ಲಿ ವೃದ್ಧಿ, ತಡರಾತ್ರಿಯವರೆಗೆ ಅಥವಾ ರಾತ್ರಿ ಪಾಳಿ ದುಡಿತವೂ ಕೊಂಚ ಮಟ್ಟಿಗೆ ಆರೋಗ್ಯದ ಏರುಪೇರುಗಳಿಗೆ ಕಾರಣವಾಗುತ್ತಿದೆ.
Related Articles
ಖೇದಕರವೇನೆಂದರೆ ದೈಹಿಕ ಶಿಕ್ಷಣಕ್ಕೆ ನಮ್ಮ ಶಾಲೆ ಕಾಲೇಜುಗಳಲ್ಲಿ ಕನಿಷ್ಠ ಪ್ರಾಮುಖ್ಯತೆ ನೀಡಲಾಗುತ್ತದೆ. ಮಗುವಿಗೆ ಸಣ್ಣ ವಯಸ್ಸಿನಲ್ಲಿ ಆರೋಗ್ಯದ ಕುರಿತು ಅರಿವು ಮೂಡಿಸುವ ಅಗತ್ಯವಿದೆ. Sound mind in sound body ಅರ್ಥಾತ್ ಸ್ವಸ್ಥ ಶರೀರದಲ್ಲಿ ಮಾತ್ರ ಸ್ವಸ್ಥ ಮನಸ್ಸು ಇರಲು ಸಾದ್ಯ. ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯರಾಗಿರಬೇಕಾದರೆ ಅವರು ಆರೋಗ್ಯವಂತರೂ, ಶಾರೀರಕವಾಗಿ ಸರಿಯಾಗಿ ಬೆಳವಣಿಗೆ ಹೊಂದುತ್ತಿರುವವರೂ ಆಗಿರಬೇಕಾಗುತ್ತದೆ. ಮಕ್ಕಳ ಅಂಗಾಂಗಗಳು ಸರಿಯಾದ ವ್ಯಾಯಾಮ, ಆಟೋಟಗಳಿಂದ ಚೈತನ್ಯ ಪಡೆಯುತ್ತದೆ. ಶಾಲಾ ಕಾಲೇಜುಗಳಲ್ಲಿ ಪಡೆದ ದೈಹಿಕ ಶಿಕ್ಷಣ ವಿಧ್ಯಾರ್ಥಿಗಳ ಬದುಕಿನಲ್ಲಿ ಗಾಢ ಪ್ರಭಾವ ಬೀರುತ್ತದೆ. ಭವಿಷ್ಯದ ಬದುಕಿನಲ್ಲಿ ಅವರು ತಮ್ಮ ಆರೋಗ್ಯದ ಕುರಿತು ಹೆಚ್ಚು ಎಚ್ಚರಿಕೆಯಿಂದಿರುತ್ತಾರೆ. ಇಂದಿನ ವಯಸ್ಕರ ಅನೇಕ ಆರೋಗ್ಯ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಾಲ್ಯದಲ್ಲಿ ಅವರಿಗೆ ಸರಿಯಾದ ಆರೋಗ್ಯಕರ ಕ್ರಿಯೆಗಳ ಪರಿಚಯ ಮಾಡಿಸದೇ ಇರುವುದೇ ಕಾರಣ ಎಂದು ಗೊತ್ತಾಗುತ್ತದೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎನ್ನುವಂತೆ ಬಾಲ್ಯದಲ್ಲಿ ಆರೋಗ್ಯದ ಅರಿವು ಮೂಡಿಸದಿರುವುದರಿಂದಲೆ ವಯಸ್ಕರು ಅನಿಯಮಿತ (irregular) ಜೀವನ ಕ್ರಮಕ್ಕೆ ಕಟ್ಟು ಬೀಳುತ್ತಾರೆ.
Advertisement
ಸರಕಾರ ಇಂದು ಜನರ ಸ್ವಾಸ್ಥ್ಯಕ್ಕಾಗಿ ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಆದರೆ ದೈಹಿಕ ಶಿಕ್ಷಣ ಅಸಡ್ಡೆಗೊಳಗಾಗಿದೆ. ದೈಹಿಕ ಶಿಕ್ಷಕರ ತರಬೇತಿ ಪಡೆದ ಸಾವಿರಾರು ಯುವಕರು ಇಂದು ನಿರುದ್ಯೋಗಿಗಳಾಗಿದ್ದಾರೆ. ದೈಹಿಕ ಶಿಕ್ಷಣಕ್ಕೆ ಪ್ರಾಧಾನ್ಯತೆಯಿಲ್ಲದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ದೈಹಿಕ ಶಿಕ್ಷಕರು ನಿಲ್ಯìಕ್ಷಕ್ಕೊಳಗಾಗಿದ್ದಾರೆ. ಶಾಲಾ ಶಿಕ್ಷಣದಲ್ಲಿ ದೈಹಿಕ ಶಿಕ್ಷಣವನ್ನು ಕಡ್ಡಾಯವಾಗಿ ಮತ್ತು ಪರಿಣಾಮಕಾರಿಯಾಗಿ ಕಲಿಸುವುದರಿಂದ, ಇಂದಿನ ಮಕ್ಕಳೇ ಮುಂದಿನ ಜನಾಂಗ ಎನ್ನುವಂತೆ ಭವಿಷ್ಯದ ನಾಗರಿಕರ ಆರೋಗ್ಯ ಸ್ಥಿತಿಗತಿಯಲ್ಲಿ ಗುಣಾತ್ಮಕ ಬದಲಾವಣೆ ನಿರೀಕ್ಷಿಸಬಹುದು. ಇಷ್ಟೆ ಅಲ್ಲದೆ ಭಾರೀ ಜನಸಂಖ್ಯೆಯುಳ್ಳ ದೇಶವಾಗಿಯೂ ಅಂತಾರಾಷ್ಟ್ರೀಯ ಪಂದ್ಯಾಟಗಳ ಪದಕ ಪಟ್ಟಿಯಲ್ಲಿ ನಮ್ಮ ದೇಶದ ನಿರಾಶಾಜನಕ ಸ್ಥಿತಿಯಲ್ಲೂ ಸುಧಾರಣೆ ಕಾಣಬಹುದು. ಪ್ರಾಚೀನ ಭಾರತದ ನಮ್ಮ ಅಮೂಲ್ಯ ಜ್ಞಾನ ಸಂಪತ್ತೆನಿಸಿದ ಯೋಗವನ್ನು ವಿಶ್ವಕ್ಕೇ ಪರಿಚಯಿಸುತ್ತಿರುವ ಈ ಹೊತ್ತಿನಲ್ಲಿ ಶಾಲಾ ಕಾಲೇಜುಗಳಲ್ಲಿ ಯೋಗ ಮತ್ತು ದೈಹಿಕ ಶಿಕ್ಷಣದ ತರಬೇತಿಯನ್ನು ಪಠ್ಯಕ್ರಮದ ಅಭಿನ್ನ ಅಂಗವಾಗಿ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುವ ಕುರಿತು ಯೋಚಿಸಲಿ.
ಬೈಂದೂರು ಚಂದ್ರಶೇಖರ ನಾವಡ