ಬಾಗೇಪಲ್ಲಿ: ಮನೆ ಎಂಬ ಮೊದಲ ಪಾಠ ಶಾಲೆಯಲ್ಲಿ ಭಾಷೆಯಲ್ಲಿ ಸ್ಪಷ್ಟತೆ ಇದ್ದಾಗ ವ್ಯಾಕರಣ ದೋಷಗಳು ಬಹುತೇಕ ಇಲ್ಲವಾಗುತ್ತವೆ ಎಂದು ಸಾಹಿತಿ ಓಂಕಾರ ಪ್ರಿಯ ಬಾಗೇಪಲ್ಲಿ ತಿಳಿಸಿದರು.
ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-7 ರ ನಾರೇಪಲ್ಲಿ ಟೋಲ್‌ಫ್ಲಾಜಾದ ಬಳಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಬಹುತೇಕ ಮನೆಗಳಲ್ಲಿ ಮನೆಯ ಅಲಂಕಾರಕ್ಕೆ ನೀಡುವ ಒತ್ತು ಭಾಷೆಯ ಅಲಂಕಾರಕ್ಕೆ ನೀಡುವುದಿಲ್ಲ ಎಂದು ವಿಷಾದಿಸಿದರು.
ಭಾಷೆ ಎಂದಿಗೂ ಕಲುಷಿತ ಆಗಬಾರದು. ಇದರಿಂದ ಮುಂದಿನ ದಿನಗಳಲ್ಲಿ ಭಾಷೆ ಬಹು ದೊಡ್ಡ ಅಪಾಯ ಎದುರಿಸಬೇಕಾಗುತ್ತದೆ. ಕಲುಷಿತವಾದ ಭಾಷೆಯೇ ಸರಿ ಎಂಬ ಪರಿಸ್ಥಿತಿ ಎದುರಾಗುತ್ತದೆ. ಇದು ಕೇವಲ ಭಾಷೆಗೆ ಅಷ್ಟೇ ಸೀಮಿತವಲ್ಲ, ಬದಲಿಗೆ ಕಲೆ ಸಾಹಿತ್ಯಕ್ಕೂ ಅನ್ವಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾಷೆಯ ಬಳಕೆಯ ಸಂದರ್ಭದಲ್ಲಿ ಎಚ್ಚರಿಕೆ ಅಗತ್ಯವಾಗಿರಬೇಕು ಎಂದು ತಿಳಿಸಿದರು.
ಕನ್ನಡ ಹಾಗೂ ಕನ್ನಡತನಗಳು ಒಂದು ಸೀಮಿತ ಅವಧಿಗೆ ಮೀಸಲಾಗಬಾರದು. ಅವುಗಳು ಉದ್ವೇಗ ಅಥವಾ ರೋಮಾಂಚನಗಳ ಸ್ವರೂಪಗಳೂ ಪಡೆದುಕೊಳ್ಳಬಾರದು. ನಮ್ಮ ಜೀವನವಾಗಬೇಕು. ಬದುಕಿನ ಅನ್ನಕ್ಕೆ ಆಧಾರವಾಗಬೇಕು. ಹಾಗೆ ಆದಾಗ ಮಾತ್ರ ಈ ನಾಡಿನಲ್ಲಿ ಕನ್ನಡ ನಿತ್ಯೋತ್ಸವವಾಗಲು ಸಾಧ್ಯ ಎಂದರು.
ಪ್ರಾಂಶುಪಾಲ ಪೊ›.ವೈ.ನಾರಾಯಣ ಮಾತನಾಡಿ, ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯಗಳು ಇಡೀ ದೇಶದಲ್ಲಿಯೇ ಅನನ್ಯವಾದುದು. ಆಧುನಿಕ ಕರ್ನಾಟಕ ನಿರ್ಮಾಣವಾದರೂ ಹಿಂದಿನ ಪರಂಪರೆ, ಸಾಹಿತ್ಯ, ಕಲೆ, ಸಂಪ್ರದಾಯಗಳು, ಸಂಬಂಧಗಳು ಮರೆಯಾಗಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಕೆ.ಎಂ.ನಯಾಜ್‌ಅಹಮದ್, ಡಾ.ಬಿ.ಎನ್.ಪ್ರಭಾಕರ್, ಎಲ್.ಶ್ರೀನಿವಾಸ್, ಮನೋರಂಜನ್, ಪೂರ್ಣಂ ಕುವರ್, ಕರವೇ ತಾಲೂಕು ಅಧ್ಯಕ್ಷ ಹರೀಶ್ ಇತರರು ಉಪಸ್ಥಿತರಿದ್ದರು.