Advertisement

ಆರೋಗ್ಯ ಕ್ಷೇತ್ರದ ಸಂಶೋಧನೆಗೆ ಒತ್ತು

06:30 AM Feb 16, 2019 | |

ಬೆಂಗಳೂರು: ಇಪ್ಪತ್ತೂಂದನೇ ಶತಮಾನದಲ್ಲಿ ದೇಶದ ಎಲ್ಲಾ ನಾಗರಿಕರಿಗೂ ಉತ್ತಮ ಆರೋಗ್ಯ ಸೇವೆ ಕಲ್ಪಿಸುವುದು ದೊಡ್ಡ ಸವಾಲು. ಈ ಹಿನ್ನೆಲೆಯಲ್ಲಿ ಆಯುಷ್‌ ಚಿಕಿತ್ಸಾ ಕಮಗಳ ಮೂಲಕ ಪರಿಹಾರ ಸೂಚಿಸಲು ಸಂಶೋಧನೆಗೆ ಸರ್ಕಾರ ಒತ್ತು ನೀಡುತ್ತಿದೆ ಎಂದು ಕೇಂದ್ರ ಆಯುಷ್‌ ರಾಜ್ಯ ಸಚಿವ ಶ್ರೀಪಾದ್‌ ನಾಯ್ಕ ತಿಳಿಸಿದರು. 

Advertisement

ನಗರದ ಉತ್ತರಹಳ್ಳಿ ಮನವರ್ತಿ ಕಾವಲ್‌ನಲ್ಲಿ ಶುಕ್ರವಾರ ಪ್ರಾದೇಶಿಕ ಆಯುರ್ವೇದ ಚಯಾಪಚಯ ವಿಕಾರಗಳ ಸಂಶೋಧನಾ ಸಂಸ್ಥೆ ಆವರಣದಲ್ಲಿ ಆಸ್ಪತ್ರೆ ಮತ್ತು ಸಂಶೋಧನಾ ಘಟಕವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. 

ಮುಂದಿನ ಎರಡು ದಶಕಗಳಲ್ಲಿ ದೇಶದಲ್ಲಿ ವೃದ್ಧರ ಸಂಖ್ಯೆ ಹೆಚ್ಚಳವಾಗಲಿದೆ. ಈ ಮಧ್ಯೆ ಪ್ರಪಂಚದಲ್ಲಿ ಭಾರತವು ಅತಿ ಹೆಚ್ಚು ಮಧುಮೇಹಿಗಳನ್ನು ಒಳಗೊಂಡ ಎರಡನೇ ರಾಷ್ಟ್ರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಉತ್ತಮ ಆರೋಗ್ಯ ಕಲ್ಪಿಸುವುದು ಸವಾಲು. ಹಾಗೂ ಇದನ್ನು ಆದ್ಯತೆಯ ವಿಷಯವನ್ನಾಗಿ ಸರ್ಕಾರ ಪರಿಗಣಿಸಿದ್ದು, ಈ ಹಿನ್ನೆಲೆಯಲ್ಲಿ ಆಯುಷ್‌ ಚಿಕಿತ್ಸಾ ಕ್ರಮಗಳ ಕುರಿತ ಸಂಶೋಧನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು. 

ಗ್ರಾಮೀಣ ಪ್ರದೇಶದ ಜನರಿಗೆ ಪ್ರಾಥಮಿಕ ಆರೋಗ್ಯ ಮತ್ತು ಸುಲಭ ದರದಲ್ಲಿ ಔಷಧಗಳನ್ನು ಒದಗಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಕರ್ನಾಟಕದಲ್ಲಿ ಆಯುರ್ವೇದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಒಟ್ಟು 56 ಆಯುರ್ವೇದ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು. 

ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ ಮಾತನಾಡಿ, ರಾಜ್ಯ ಸರ್ಕಾರ ಆಯುಷ್‌ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವುದು ಸರ್ಕಾರ ಆದ್ಯತೆಯಾಗಿ ಪರಿಗಣಿಸಿದ್ದು, ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಆಸ್ಪತ್ರೆಗಳನ್ನು ತೆರೆಯಲು ಆಯುಷ್‌ ಇಲಾಖೆಗೆ ನೂರು ಕೋಟಿ ಅನುದಾನ ನೀಡಿದೆ ಎಂದರು. 

Advertisement

ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಸಾಮಾನ್ಯವಾಗಿದೆ. ಮಾಸಿಕ ಎರಡು ಲಕ್ಷ ರೂ. ವೇತನ ನೀಡಿದರೂ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಮುಂದೆಬರುತ್ತಿಲ್ಲ. ಉತ್ತಮ ಜೀವನಶೈಲಿಯಿಂದ ಎಲ್ಲರೂ ಆರೋಗ್ಯವಂತರಾಗಬಹುದಾಗಿದೆ. ಆದ್ದರಿಂದ ಶಾಲಾ ಹಂತದಿಂದಲೇ ಮಕ್ಕಳಿಗೆ ಆರೋಗ್ಯ ರಕ್ಷಣೆ ಮತ್ತು ಜೀವನ ಶೈಲಿಗಳ ಬಗ್ಗೆ ತಿಳಿಸಿಕೊಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಸಿಸಿಆರ್‌ಎಎಸ್‌ನ ಮಹಾ ನಿರ್ದೇಶಕ ಪ್ರೊ. ವೈದ್ಯ ಕೆ.ಎಸ್‌. ಧೀಮಾನ್‌ ಮಾತನಾಡಿ, ನಮ್ಮ ಸಂಸ್ಥೆಯ ಸುಮಾರು ಒಂದೂವರೆ ಎಕರೆ ಜಾಗ ವಿವಾದದಿಂದ ಕೂಡಿದ್ದು, ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕು. ಸಂಸ್ಥೆಯ ಮೇಲೆ ಹೈ-ಟೆನÒನ್‌ ವಿದ್ಯುತ್‌ ಮಾರ್ಗ ಹಾದುಹೋಗಿದ್ದು, ಇದರ ಮಾರ್ಗ ಬದಲಾವಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಹಾಗೂ ಸಂಸ್ಥೆಗೆ ಅಗತ್ಯ ಸಾರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿನ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೇಂದ್ರ ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ, ಶಾಸಕ ಎಸ್‌.ಟಿ. ಸೋಮಶೇಖರ್‌, ಬಿಬಿಎಂಪಿ ಸದಸ್ಯ ಆರ್ಯ ಶ್ರೀನಿವಾಸ್‌, ಸಂಸ್ಥೆಯ ಪ್ರಭಾರ ಸಹಾಯಕ ನಿರ್ದೇಶಕ ಡಾ.ಬಿ.ಕೆ. ಭರಾಲಿ ಉಪಸ್ಥಿತರಿದ್ದರು.

ಸಂಸ್ಥೆಯಲ್ಲಿ ಏನೇನಿದೆ?: ಪ್ರಾದೇಶಿಕ ಆಯುರ್ವೇದ ಚಯಾಪಚಯ ವಿಕಾರಗಳ ಸಂಶೋಧನಾ ಸಂಸ್ಥೆಯಲ್ಲಿ 30 ಹಾಸಿಗೆಗಳ ಒಳರೋಗಿ ವಿಭಾಗ, ಹೊರರೋಗಿ ವಿಭಾಗ, ಪಂಚಕರ್ಮ ವಿಭಾಗ, ಪ್ರಕೃತಿ ಚಿಕಿತ್ಸಾಲಯ, ಆಯುರ್ವೇದ ಆಧಾರಿತ ಜೀವನಶೈಲಿ ಮತ್ತು ಆಹಾರ ಪರಾಮರ್ಶೆ ಕೇಂದ್ರ, ಪ್ರಯೋಗಾಲಯ ಸೇರಿದಂತೆ ಹಲವು ಆತ್ಯಾಧುನಿಕ ಸೌಲಭ್ಯಗಳು ಇಲ್ಲಿವೆ. 

Advertisement

Udayavani is now on Telegram. Click here to join our channel and stay updated with the latest news.

Next