ಮೈಸೂರು: ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕ್ರೀಡೆಗಳನ್ನು ಏರ್ಪಡಿಸುವ ಕೆಲಸ ಆಗಬೇಕಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು. ಕರಾವಳಿ ಸಾಂಸ್ಕೃತಿಕ ಚಾವಡಿವತಿಯಿಂದ ವಿಜಯನಗರ 4ನೇ ಹಂತದಲ್ಲಿ ಕೆಸರು ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಸಂಸ್ಕೃತಿಯ ಪ್ರತೀಕವಾದ ಕಂಬಳಕ್ಕೆ ರಾಷ್ಟ್ರಪತಿ ಅಂಕಿತ ಹಾಕಿರುವುದು ಶ್ಲಾಘನೀಯ ಸಂಗತಿ. ತುಳು ಸಮುದಾಯದವರೆಲ್ಲರೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಒಂದೆಡೆ ಸೇರಿ ನಿಮ್ಮ ಸಂಸ್ಕೃತಿ ಬಿಂಬಿಸುವ ಆಟಗಳನ್ನು ಆಯೋಜಿಸಿರುವುದು ಸಂತೋಷದ ಸಂಗತಿ. ಪ್ರಾದೇಶಿಕ ನೆಲಗಟ್ಟಿನಲ್ಲಿ ಸ್ಪ$ರ್ಧೆಗಳನ್ನು ನೋಡದೆ ಎಲ್ಲವನ್ನೂ ನಮ್ಮ ರಾಜ್ಯದ ಕ್ರೀಡೆಗಳೆಂದು ತಿಳಿದುಕೊಳ್ಳುವಂತೆ ಕಿವಿಮಾತು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ. ಚಂದ್ರಹಾಸ ರೈ ಮಾತನಾಡಿ, ಮೈಸೂರು ಭಾಗದಲ್ಲಿ ನೆಲೆಸಿರುವ ತುಳು ಸಮುದಾಯದವರನ್ನು ಒಂದೆಡೆ ಸೇರಿಸಿ ಕರಾವಳಿ ಭಾಗದ ಕ್ರೀಡೆಗಳನ್ನು ಇಲ್ಲಿ ಅನಾವರಣಗೊಳಿಸುತ್ತಿರುವುದು ಶ್ಲಾಘನೀಯ. ಮುಂದಿನ ವರ್ಷದಿಂದ ಅಕಾಡೆಮಿಯ ಸಹಯೋಗದಲ್ಲಿ ಕಾರ್ಯಕ್ರಮ ನಡೆಸುವ ಮೂಲಕ ತಮಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಕರಾವಳಿ ಸಾಂಸ್ಕೃತಿಕ ಚಾವಡಿ ಅಧ್ಯಕ್ಷ ಕೆ.ಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಂಟರ ಸಂಘದ ಅಧ್ಯಕ್ಷ ಟಿ. ಪ್ರಭಾಕರ್ ಶೆಟ್ಟಿ, ಮ್ಯಾನೇಜಿಂಗ್ ಟ್ರಸ್ಟಿ ಕೆ. ಗಣೇಶ್ ನಾರಾಯಣ ಹೆಗ್ಡೆ, ಶ್ರೀ ಕಾಳಿಕಾಂಬ ದೇವಸ್ಥಾನದ ಅಧ್ಯಕ್ಷ ಚೆಲುವಾಚಾರ್, ಚಾವಡಿ ಗೌರವಾಧ್ಯಕ್ಷ ಡಾ. ದಿನೇಶ್ ಶೆಟ್ಟಿ, ಕಾರ್ಯದರ್ಶಿ ಸುಕುಮಾರ್, ಕೋಶಾಧಿಕಾರಿ ಪಿ. ಲಕ್ಷ್ಮಣ್ ಶೆಟ್ಟಿಗಾರ್ ಇತರರು ಇದ್ದರು.
ಕೆಸರುಗದ್ದೆಯಲ್ಲಿ ಆಟ: ಕೆಸರು ಗದ್ದೆಯಲ್ಲಿ ಒಂದು ದಿನ-2017 ಸ್ಪರ್ಧೆಯಲ್ಲಿ ಕರಾವಳಿ ಭಾಗದ ಕ್ರೀಡಾ ಸಂಸ್ಕೃತಿ ಅನಾವರಣವಾಯಿತು. ಒಂದ ರಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಒಬ್ಬರಿಗಿಂತ ಒಬ್ಬರು ವಿಭಿನ್ನ ಚಿತ್ರವನ್ನು ಬಿಡಿಸಿ ಗಮನ ಸೆಳೆದರೆ, ಕೆಸರುಗದ್ದೆ ಓಟದಲ್ಲಿ ಬಿದ್ದು-ಎದ್ದು ಓಡಿದ ಮಕ್ಕಳೇ ಹೆಚ್ಚಿದ್ದರು. ಹಲವರು ಗುರಿ ತಲುಪಲಾಗದೆ ನಿರಾಶರಾಗಿ ಕೆಸರಿನಲ್ಲೇ ಒದ್ದಾಡಿ ನಲಿದರು. ಪೋಷಕರು ತಮ್ಮ ಮಕ್ಕಳ ಕೆಸರುಗದ್ದೆ ಓಟವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಂಭ್ರಮಿಸಿದರು.