Advertisement

ಯುವಮತದಾರರ ನೋಂದಣಿಗೆ ಒತ್ತು: ಡಿಸಿ

01:00 AM Feb 25, 2019 | Team Udayavani |

ಮಂಗಳೂರು: ಹೆಸರು ನೋಂದಾಯಿಸದೇ ಇರುವ ಅರ್ಹ ಮತದಾರರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಯುವಮತದಾರರ ಸೇರ್ಪಡೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

2019ರ ಜ. 1ಕ್ಕೆ 18 ವರ್ಷ ತುಂಬಿದವರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲು ವಿಶೇಷ ಆಂದೋಲನ ಕೈಗೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಪ್ರಾಂಶುಪಾಲರ ಸಭೆ ನಡೆಸಲಾಗಿದೆ ಎಂದರು.

ಎಲ್ಲ ಮತಗಟ್ಟೆಗಳಲ್ಲಿ ಫೆ. 23 ಹಾಗೂ ಫೆ. 24ರಂದು ಮಿಂಚಿನ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಫೆ. 23ರಂದು ಒಟ್ಟು ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೆ 1,815 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಇದರಲ್ಲಿ 1,088 ಅರ್ಜಿಗಳು 18ರಿಂದ 19 ವಯೋಮಾನದವರದ್ದು. ಪಟ್ಟಿಯಿಂದ ಹೆಸರು ತೆಗೆಯಲು 785, ಬದಲಾವಣೆಗೆ 493 ಅರ್ಜಿಗಳು ಸೇರಿದಂತೆ ಒಟ್ಟು 3,097 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಮಾ. 2 ಹಾಗೂ 3ರಂದು ಕೂಡ ಮಿಂಚಿನ ನೋಂದಣಿ ನಡೆಯಲಿದೆ ಎಂದರು. 

ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ನಾಗರಿಕರ ಸಂಘಟನೆಗಳ ಸಹಯೋಗದೊಂದಿಗೆ ವಿಶೇಷ ಕಾರ್ಯಕ್ರಮಗಳನ್ನು ಸ್ವೀಪ್‌ ಮೂಲಕ ಹಮ್ಮಿಕೊಳ್ಳಲಾಗುತ್ತಿದೆ.

ನೋಂದಣಿಗೆ ದಾಖಲೆಗಳು
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ವಯಸ್ಸಿನ ಬಗ್ಗೆ ಶಾಲಾ ಪ್ರಮಾಣ ಪತ್ರ, ಎಸೆಸೆಲ್ಸಿ, ಪಿಯುಸಿ ಅಂಕ ಪಟ್ಟಿ, ಜನನ ಪ್ರಮಾಣ ಪತ್ರ, ಆಧಾರ್‌ ಕಾರ್ಡ್‌, ಪಾಸ್‌ಪೋರ್ಟ್‌, ವೈದ್ಯಕೀಯ ಪ್ರಮಾಣ ಪತ್ರಗಳಲ್ಲಿ ಯಾವುದಾದರೂ ಒಂದು ದಾಖಲೆ ಹಾಗೂ ವಾಸಸ್ಥಳದ ಬಗ್ಗೆ ಪಡಿತರ ಚೀಟಿ, ಆಧಾರ್‌ ಕಾರ್ಡ್‌, ಗ್ಯಾಸ್‌ ಸಿಲಿಂಡರ್‌ ಸ್ವೀಕೃತಿ ರಶೀದಿ, ವಿದ್ಯುತ್‌ ಬಿಲ್‌ ಪಾವತಿ, ಬ್ಯಾಂಕ್‌ ಪಾಸ್‌ಬುಕ್‌ ಪ್ರತಿ, ಬಾಡಿಗೆ ಕರಾರು ಪತ್ರಗಳಲ್ಲಿ ಯಾವುದಾದರೂ ಒಂದು ದಾಖಲೆಯನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಅರ್ಜಿ ಜತೆ ನೀಡಬೇಕು.

Advertisement

16.97 ಲಕ್ಷ ಮತದಾರರು
2019 ಜ. 16ರಂದು ಪ್ರಕಟಗೊಂಡ ಅಂತಿಮ ಮತದಾರರ ಪಟ್ಟಿಯಂತೆ ದ.ಕ. ಜಿಲ್ಲೆಯಲ್ಲಿ 8,33,719 ಪುರುಷರು ಹಾಗೂ 8,63,689 ಮಹಿಳೆಯರು ಸೇರಿ ಒಟ್ಟು 16,97,417 ಮತದಾರ ರಿದ್ದಾರೆ. ಜಿಲ್ಲೆಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ 1,861 ಮತಗಟ್ಟೆಗಳಿವೆ. ಇವಿಎಂ ಹಾಗೂ ವಿವಿಪ್ಯಾಟ್‌ಗಳ ಬಗ್ಗೆ ಮತದಾರರಿಗೆ ಹೆಚ್ಚಿನ ಮಾಹಿತಿ ನೀಡುವ ನಿಟ್ಟಿನಲ್ಲಿ ಪ್ರತಿಯೊಂದು ಬೂತ್‌ನಲ್ಲೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಸಹಾಯವಾಣಿ-1950
ಜಿಲ್ಲಾ ಮತದಾರರ ಸಹಾಯವಾಣಿ ಸಂಖ್ಯೆ 1950 ಆರಂಭವಾಗಿದ್ದು, ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ ಕಾರ್ಯಾಚರಿಸುತ್ತಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ಎಪಿಕ್‌ ಕಾರ್ಡ್‌ ಪಡೆಯುವುದು, ತೆಗೆದು ಹಾಕುವುದು ಮೊದಲಾದ ವಿಚಾರಗಳನ್ನು ಮಾಹಿತಿ ಪಡೆದುಕೊಳ್ಳಬಹುದು. ಮತದಾರರ ಗುರುತುಚೀಟಿ ಇದ್ದರೂ ಪಟ್ಟಿಯಲ್ಲಿ ಹೆಸರು ಇರುವ ಬಗ್ಗೆ ಮುಂಚಿತವಾಗಿ ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಬೇಕು. ceo.karnataka.kar.nic ಮೂಲಕವೂ  ತಿಳಿದುಕೊಳ್ಳಬಹುದು ಎಂದರು.

“ಸಿವಿಜಿಲ್‌ ಆ್ಯಪ್‌’
ಆಯೋಗವು ಸಿವಿಜಿಲ್‌ ಎಂಬ ಜನಸ್ನೇಹಿ ಆ್ಯಪ್‌ ಜಾರಿಗೆ ತಂದಿದ್ದು, ಮಾದರಿ ನೀತಿಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಜನರು ನೇರವಾಗಿ ಈ ಮೂಲಕ ದೂರು ಸಲ್ಲಿಸಬಹುದು ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next