Advertisement

ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು: ಶೆಟ್ಟರ

01:41 PM Aug 17, 2020 | Suhan S |

ಹುಬ್ಬಳ್ಳಿ: ಎರಡನೇ ಸ್ತರದ ನಗರಗಳಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಸರಕಾರ ಹೆಚ್ಚು ಮಹತ್ವ ನೀಡಿದೆ. ಮುಂದಿನ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಉದ್ಯಮ ಕ್ಷೇತ್ರದಲ್ಲಿ ಭಾರಿ ಬದಲಾವಣೆಯಾಗಲಿದ್ದು, ರಾಜ್ಯದ ಭವಿಷ್ಯದ ನಗರವಾಗಿ ರೂಪುಗೊಳ್ಳಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ಇಲ್ಲಿನ ನೃಪತುಂಗ ಬೆಟ್ಟದಲ್ಲಿ ಅರಣ್ಯ ಇಲಾಖೆ ಹಾಗೂ ನೃಪತುಂಗ ಬೆಟ್ಟ ವಾಯು ವಿಹಾರಿಗಳ ಸಂಘದ ಸಹಯೋಗದಲ್ಲಿ ರವಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು. ನೃಪತುಂಗ ಬೆಟ್ಟ ಹುಬ್ಬಳ್ಳಿ ನಗರಕ್ಕೆ ವರದಾನವಾಗಿದೆ. ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿ ಬೆಟ್ಟವನ್ನು ಅಭಿವೃದ್ಧಿ ಪಡಿಸಲಾಗುವುದು. 1994ರಲ್ಲಿ ನೃಪತುಂಗ ಬೆಟ್ಟ ಅಭಿವೃದ್ಧಿ ಪಡಿಸಲು ಪ್ರಯತ್ನಿಸಿದಾಗ ಹಲವು ಜನರು ವ್ಯಂಗ್ಯ ಮಾಡಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿ ಬೆಟ್ಟ ಅಭಿವೃದ್ಧಿ ಪಡಿಸಲಾಗಿದೆ. ಕಲ್ಲು-ಗುಡ್ಡದ ಜಾಗದಲ್ಲಿ ಸಸಿಗಳನ್ನು ನೆಟ್ಟು ಮರಗಳನ್ನಾಗಿ ಬೆಳೆಸಲಾಗಿದೆ. ವಿಶೇಷ ಅನುದಾನದಡಿ ಮೂಲಭೂತ ಸೌಕರ್ಯ ಹೆಚ್ಚಿಸಲಾಗಿದೆ ಎಂದರು.

ನೃಪತುಂಗ ಬೆಟ್ಟದಿಂದ ಉಣಕಲ್ಲ ಕೆರೆವರೆಗೆ ರೋಪ್‌ ವೇ ನಿರ್ಮಿಸಲು ಯೋಚಿಸಿ ತಜ್ಞರ ಅಭಿಪ್ರಾಯ ಪಡೆಯಲಾಗಿತ್ತು. ಆದರೆ ಯೋಜನೆಯ ಅನುಷ್ಠಾನಕ್ಕೆ ತಾಂತ್ರಿಕ ಕಾರಣಗಳು ಎದುರಾಗಿದ್ದರಿಂದ ಅದನ್ನು ಕೈಬಿಡಲಾಯಿತು. ಮಹಾನಗರ ಪಾಲಿಕೆ ಆಯುಕ್ತರು ನೃಪತುಂಗ ಬೆಟ್ಟದಿಂದ ಸಾಯಿ ಮಂದಿರದವರೆಗೆ ರೋಪ್‌ ವೇ ನಿರ್ಮಾಣದ ಸಾಧ್ಯತೆ ಬಗ್ಗೆ ತಜ್ಞರ ನೇತೃತ್ವದಲ್ಲಿ ಯೋಜನೆ ತಯಾರಿಸಿದರೆ ಸಿಎಸ್‌ಆರ್‌ ನಿಧಿಯಡಿ ಹಣ ಒದಗಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ನೃಪತುಂಗ ಬೆಟ್ಟದಲ್ಲಿ ನೃಪತುಂಗೋತ್ಸವ ಆಯೋಜನೆ, ಪ್ರವಾಸಿಗರಿಗೆ ವಾಹನ ವ್ಯವಸ್ಥೆ, ಸುಸಜ್ಜಿತ ಮಲ್ಟಿಜಿಮ್‌, ಕ್ಯಾಂಟೀನ್‌ ಸೇರಿದಂತೆ ಇತರೆ ಮೂಲಭೂತ ಸೌಕರ್ಯ ಒದಗಿಸುವಂತೆ ನೃಪತುಂಗ ಬೆಟ್ಟ ವಾಯು ವಿಹಾರಿಗಳ ಸಂಘದಿಂದ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಅರಣ್ಯ ಸಂರಕ್ಷಣಾಧಿಕಾರಿ ಯಶ ಪಾಲ್‌, ವಾಯು ವಿಹಾರಿ ಸಂಘದ ಗೌರವಾಧ್ಯಕ್ಷ ಡಾ|ಗೋವಿಂದ ಮಣ್ಣೂರ, ಕಾರ್ಯಾಧ್ಯಕ್ಷ ಬಿ.ಎಫ್‌. ಬಿಜಾಪುರ, ಪ್ರಧಾನ ಕಾರ್ಯದರ್ಶಿ ಸಿದ್ದು ಮೊಗಲಿಶೆಟ್ಟರ, ಎಸ್‌ .ವಿ.ಅಂಗಡಿ, ಲಿಂಗರಾಜ ಪಾಟೀಲ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next