ನರಗುಂದ: ವಿಶಾಲವಾದ 102 ಎಕರೆ ಪ್ರದೇಶ ವ್ಯಾಪ್ತಿ ಹೊಂದಿರುವ ಪಟ್ಟಣದ ಎಪಿಎಂಸಿ ಪ್ರಾಂಗಣ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಅವಕಾಶ ನೀಡಿದೆ. ಅಲ್ಲದೇ ಈ ಪ್ರಾಂಗಣವನ್ನು ಕಾಡಿನ ರೂಪದಲ್ಲಿ ಪರಿವರ್ತಿಸಲು ಹೆಚ್ಚೆಚ್ಚು ಸಸಿ ನೆಟ್ಟು ಪೋಷಿಸುವ ಮೂಲಕ ಹಸಿರು ಕ್ರಾಂತಿಗೆ ಮುನ್ನುಡಿಯಾಗಲಿ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಡಬ್ಲ್ಯೂಐಎಫ್ ಯೋಜನೆಯಡಿ 2 ಕೋಟಿ ವೆಚ್ಚದಲ್ಲಿ 500 ಮೆಟ್ರಿಕ್ ಟನ್ ಸಾಮರ್ಥ್ಯದ 5 ಗೋದಾಮು ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಅರಣ್ಯ ಇಲಾಖೆಯಿಂದ ಸಾಕಷ್ಟು ಸಸಿಗಳನ್ನು ಪಡೆದುಕೊಂಡು ಪ್ರಾಂಗಣ ಸಂಪೂರ್ಣ ಹಸಿರುಮಯವಾಗಿ ಗೋಚರಿಸುವಂತೆ ಇಲ್ಲಿ ವನಮಹೋತ್ಸವ ಆಚರಿಸಿ ಎಂದು ಶಾಸಕ ಪಾಟೀಲ ಎಪಿಎಂಸಿ ಆಡಳಿತ ಮಂಡಳಿಗೆ ಮನವಿ ಮಾಡಿದರು.
5 ಕೋಟಿ ಅನುದಾನ: ಎಪಿಎಂಸಿ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರಕ್ಕೆ 8 ಕೋಟಿ ರೂ. ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದು, ಅದರಲ್ಲಿ ಈಗಾಗಲೇ 5 ಕೋಟಿ ರೂ. ಬಿಡುಗಡೆಯಾಗಿದ್ದು, ತಾಂತ್ರಿಕ ಅನುಮೋದನೆ ಹಂತದಲ್ಲಿದೆ. ಸ್ವಚ್ಛತೆಗೂ ಪ್ರಾಂಗಣದಲ್ಲಿ ಹೆಚ್ಚು ಗಮನ ಹರಿಸಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಸೂಚಿಸಿದರು.
ಹರಾಜುಕಟ್ಟೆ ಉದ್ಘಾಟನೆ: ಇದೇ ಸಂದರ್ಭದಲ್ಲಿ ಎಪಿಎಂಸಿ ಪ್ರಾಂಗಣದಲ್ಲಿ ಆರ್‌ಕೆವಿವೈ ಹಾಗೂ ಸಮಿತಿ ನಿಧಿ (50:50) ಯೋಜನೆಯಡಿ 1.20 ಕೋಟಿ ರೂ. ವೆಚ್ಚದಲ್ಲಿ 4 ಮುಚ್ಚು ಹರಾಜು ಕಟ್ಟೆಗಳನ್ನು ಶಾಸಕ ಸಿ.ಸಿ.ಪಾಟೀಲ ಉದ್ಘಾಟಿಸಿದರು. ಎಪಿಎಂಸಿ ಅಧ್ಯಕ್ಷ ಹನಮಂತಪ್ಪ ಹದಗಲ್ಲ, ಸದಸ್ಯರಾದ ಎನ್.ವಿ. ಮೇಟಿ, ಶಂಕರಗೌಡ ಯಲ್ಲಪ್ಪಗೌಡ್ರ, ಸಣ್ಣಫಕೀರಪ್ಪ ತಳವಾರ, ಗುರುನಾಥಗೌಡ ಹುಡೇದಮನಿ, ಮಲ್ಲಪ್ಪ ಭೋವಿ, ಕಾರ್ಯದರ್ಶಿ ಎಂ.ಆರ್.ನದಾಫ್, ಉಪ ಕಾರ್ಯದರ್ಶಿ ಎಸ್.ಎಂ. ಗುಳೇದ, ಮಾಜಿ ಅಧ್ಯಕ್ಷ ಎಸ್.ಬಿ. ಕರಿಗೌಡ್ರ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಬಿ. ಐನಾಪುರ, ಬಿಜೆಪಿ ಜಿಲ್ಲಾ ಪ್ರ.ಕಾ. ಚಂದ್ರಶೇಖರ ದಂಡಿನ, ಪುರಸಭೆ ಸದಸ್ಯೆ ಕವಿತಾ ಅರ್ಭಾಣದ, ರೇಣವ್ವ ಕಲ್ಲಾರಿ, ಸಂಭಾಜಿ ಕಾಶಿದ, ಮಂಜುನಾಥ ಆನೇಗುಂದಿ, ರಾಜುಗೌಡ ಪಾಟೀಲ, ಬಸು ಪಾಟೀಲ ಮುಂತಾದವರಿದ್ದರು.