ಕೊಪ್ಪಳ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ವ್ಯಾಪ್ತಿಯ ರೈತರ 2ನೇ ಬೆಳೆಗೆ 113ನೇ ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯದಂತೆ ನೀರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದಲ್ಲದೇ, ನವಲಿ ಬಳಿ ಆದಷ್ಟು ಬೇಗ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ತಾಲೂಕಿನ ಮುನಿರಾ ಬಾದ್ ಕಾಡಾ ಕಚೇರಿಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದರು. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲು ರಾಜ್ಯಮಟ್ಟದ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ತುಂಗಭದ್ರಾ ಡ್ಯಾಂ ಅಭಿವೃದ್ಧಿಗಾಗಿ ಅಂತರ್‌ರಾಜ್ಯ ವ್ಯಾಪ್ತಿಯ ವಿಷಯಗಳ ಬಗ್ಗೆಯೂ ಇಂದು ಸಭೆಯಲ್ಲಿ ಚರ್ಚಿಸಲಾಗಿದ್ದು, ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಎಡದಂಡೆ ಕಾಲುವೆ ಸ್ಥಿತಿಗತಿ ಬಗ್ಗೆ ವರದಿ ಸಲ್ಲಿಸುವಂತೆ ಸಿಇಒಗಳಿಗೆ ಸೂಚನೆ ನೀಡಲಾಗಿದೆ. ಸಿಎಂ ಬಿಎಸ್‌ವೈ ಅವರ ನೇತೃತ್ವದ ಸರ್ಕಾರವು ರೈತ ಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಸದ್ಯ ಏತ ನೀರಾವರಿ ಯೋಜನೆಯಡಿ ಸುಮಾರು 5000 ಕೋಟಿ ರೂ. ಅನುದಾನ ನೀಡಿದೆ. ನೀರಾವರಿಗೆ ಇನ್ನೂ ಹೆಚ್ಚಿನ ಅನುದಾನವನ್ನು ನೀಡಲಿದೆ ಎಂದರು.
ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಮೂರು ಜಿಲ್ಲೆಗಳ ಜನ-ಜನುವಾರುಗಳಿಗೆ ತುಂಗಭದ್ರ ಜಲಾಶಯದ ನೀರನ್ನು ಒದಗಿಸಲಾಗುವುದು. ಜಲಾಶಯದಲ್ಲಿ ಇದ್ದ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಎರಡನೇ ಬೆಳೆಗೆ ಎಷ್ಟು ಪ್ರದೇಶಗಳಿಗೆ ನೀರನ್ನು ಕೊಡುವುದಕ್ಕೆ ಸಾಧ್ಯವಿದೆ ಎಂಬುದರ ಬಗ್ಗೆ ಚರ್ಚಿಸಿ, ಎರಡನೇ ಬೆಳೆಗೂ ಸಹ ನೀರನ್ನು ಬಿಡಲು ಅನುಕೂಲ ಮಾಡಿಕೊಡಲಾಗುವುದು. ನಮ್ಮ ಉದ್ದೇಶ ಈ ಭಾಗದಲ್ಲಿರುವ ತುಂಗಾಭದ್ರ ಅಚ್ಚುಕಟ್ಟು ಪ್ರದೇಶದ ರೈತರಿಗೆ ಯಾವುದೇ ರೀತಿ ತೊಂದರೆಯಾಗಬಾರದು ಮತ್ತು ನೀರು ಪೋಲಾಗಬಾರದು ಎಂಬುವುದಾಗಿದೆ ಎಂದರು.
ತುಂಗಭದ್ರಾ ಜಲಾಶಯಕ್ಕೆ ನವಲಿ ಗ್ರಾಮದಲ್ಲಿ ಸಮತೋಲನ ಜಲಾಶಯ ನಿರ್ಮಾಣ ಕುರಿತಂತೆ ಈ ಭಾಗದ ಶಾಸಕರು ನನ್ನನ್ನು ಭೇಟಿ ಮಾಡಿದ್ದಾರೆ. ಅಧಿ ಕಾರಿಗಳು ಈಗಾಗಲೇ ಪರಿಶೀಲನೆ ನಡೆಸಿದ್ದಾರೆ. ಇಂದು ಸಮತೋಲನ ಜಲಾಶಯದ ಸ್ಥಳ ಪರಿವೀಕ್ಷಣೆ ಮಾಡಿ ಎಲ್ಲವನ್ನೂ ಸರಿಪಡಿಸಿ ಆದಷ್ಟು ಬೇಗನೆ ಜಲಾಶಯ ನಿರ್ಮಾಣ ಮಾಡಿ ರೈತರಿಗೆ ಅರ್ಪಿಸಲಾಗುತ್ತದೆ. ತುಂಗಭದ್ರಾ ಜಲಾಶಯದಿಂದ ಕೈಗಾರಿಕೆಗಳು ನೀರು ಕದಿಯುತ್ತಿರುವ ಕುರಿತಂತೆ ಪರಿಶೀಲನೆ ನಡೆಸಲಾಗುವುದು. ರೈತರೂ ಉಳಿಯಬೇಕು, ಕಾರ್ಖಾನೆಗಳು ಉಳಿಯಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು ಸೂಕ್ತ ನಿರ್ಣಯ ತೆಗೆದುಕೊಳ್ಳಲಿದೆ. ನಾನು ನೀರಾವರಿ ಇಲಾಖೆ ಸಚಿವನಾದ ಬಳಿಕ ಬಳಿಕ ರಾಜ್ಯದ ನೀರಾವರಿ ನಿಗಮದ ಪರಿಶೀಲನೆ ಮಾಡಿದ್ದೇನೆ. ಈಗ ಈ ಭಾಗದ ಜಲಾಶಯದ ಪರಿಶೀಲನೆಗೆ ಬಂದಿದ್ದೇನೆ. ಸ್ಥಳೀಯ ಶಾಸಕರು, ಮುಖಂಡರೊಂದಿಗೆ ಚರ್ಚಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳುತ್ತೇವೆ ಎಂದರು.
ಸಭೆಯಲ್ಲಿ ಬಳ್ಳಾರಿ ಸಂಸದ ದೇವೇಂದ್ರಪ್ಪ, ಮುನಿರಾಬಾದ್ ಕಾಡಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಬಸವನಗೌಡ ತುರುವಿಹಾಳ, ಜಿಪಂ ಅಧ್ಯಕ್ಷ ಎಚ್. ವಿಶ್ವನಾಥರೆಡ್ಡಿ, ತಾಪಂ ಅಧ್ಯಕ್ಷ ಬಾಲಚಂದ್ರನ್, ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ, ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ವೆಂಕಟರಾವ್ ನಾಡಗೌಡ, ಗಣೇಶ ಸೇರಿದಂತೆ ಮುನಿರಾಬಾದ್ ಕಾಡಾ ಟಿಬಿಪಿ ಅಧಿಕಾರಿಗಳು ಉಪಸ್ಥಿತರಿದ್ದರು.