ಧಾರವಾಡ: ಹೊರ ರಾಜ್ಯಗಳಿಂದ ಬರುತ್ತಿರುವವರ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಕೋವಿಡ್ ಲಕ್ಷಣಗಳಿರುವ ಜನರನ್ನು ತಪಾಸಣೆಗೊಳಪಡಿಸಲು ಮೂಗು-ಗಂಟಲು ದ್ರವ ಸಂಗ್ರಹಣಾ ಕೇಂದ್ರಗಳನ್ನು ಹೆಚ್ಚು ಸ್ಥಾಪಿಸಲು ಒತ್ತು ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊರ ಜಿಲ್ಲೆಗಳಿಂದಲೂ ಈಗ ಮುಕ್ತ ಪ್ರವೇಶ ಅವಕಾಶ ಇರುವುದರಿಂದ ಕೆಮ್ಮು, ನೆಗಡಿ, ಜ್ವರ, ತೀವ್ರ ಉಸಿರಾಟದ ತೊಂದರೆಗಳ ಲಕ್ಷಣಗಳಿರುವ ಜನರನ್ನು ಕೋವಿಡ್ ಪರೀಕ್ಷೆಗೊಳಪಡಿಸಲು, ಹುಬ್ಬಳ್ಳಿ ಧಾರವಾಡ ಅವಳಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಮೂಗು ಮತ್ತು ಗಂಟಲು ದ್ರವ ಸಂಗ್ರಹಣಾ ಕೇಂದ್ರಗಳನ್ನು ಹೆಚ್ಚು ಸ್ಥಾಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಮೊಬೈಲ್ ಸ್ವಾಬ್ ಸಂಗ್ರಹಣಾ ಕೇಂದ್ರ ಸೇರಿ 11 ಘಟಕಗಳಿದ್ದು, ಇವುಗಳ ಸಂಖ್ಯೆ ಕನಿಷ್ಠ 20 ಕ್ಕೆ ಏರಿಕೆಯಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ನಗರ ಆರೋಗ್ಯ ಕೇಂದ್ರಗಳು ಮತ್ತು ಗ್ರಾಮೀಣ ಭಾಗದ ಸಮುದಾಯ ಆರೋಗ್ಯ ಕೇಂದ್ರಗಳನ್ನು ಗುರುತಿಸಿ, ಅಗತ್ಯ ಉಪಕರಣಗಳನ್ನು ಒದಗಿಸಬೇಕು ಎಂದು ಸೂಚಿಸಿದರು.
ಕಿಮ್ಸ್ ಹಾಗೂ ಡಿಮ್ಹಾನ್ಸ್‌ನಲ್ಲಿರುವ ಕೋವಿಡ್ -19 ಪ್ರಯೋಗಾಲಯಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಅವುಗಳ ಸಾಮರ್ಥ್ಯ ಹೆಚ್ಚಿಸಲು ಅಗತ್ಯವಾಗಿರುವ ಬಯೋ ಸೇಪ್ಟಿ ಕ್ಯಾಬಿನೆಟ್ ಸೇರಿದಂತೆ ಆಧುನಿಕ ಉಪಕರಣಗಳು ಮತ್ತು ತರಬೇತಿ ಹೊಂದಿದ ಮಾನವ ಸಂಪನ್ಮೂಲ ಒದಗಿಸಲಾಗುವುದು
ಎಂದರು.
ಸೇವಾಸಿಂಧು ವೆಬ್ ಪೋರ್ಟಲ್ ಮೂಲಕ ಹೊರ ರಾಜ್ಯಗಳಿಂದ ಜಿಲ್ಲೆಗೆ ಬರಲು ನೋಂದಣಿ ಮಾಡಿಕೊಂಡವರು,ಈಗಾಗಲೇ ಬಂದಿರುವವರ ಸಮಗ್ರ ಪರಿಶೀಲನೆ ಮಾಡಬೇಕೆಂದು ಸೂಚಿಸಿದರು. ಜಿಪಂ ಸಿಇಒ ಡಾ|ಬಿ.ಸಿ.ಸತೀಶ್ ಮಾತನಾಡಿ, ಮುಂಬರುವ ದಿನಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾದರೂ ಸಹ ಎಲ್ಲರಿಗೂ ಸಮರ್ಪಕ ಚಿಕಿತ್ಸೆ ದೊರೆಯಬೇಕು. ಈ ನಿಟ್ಟಿನಲ್ಲಿ ಈಗಲೇ ನಿಗದಿತ ಕೋವಿಡ್ ಆಸ್ಪತ್ರೆಗಳನ್ನು ಗುರುತಿಸಿ, ಕೋವಿಡ್ ಪ್ರಕರಣಗಳ ಚಿಕಿತ್ಸೆಗಾಗಿ ಹಾಸಿಗೆಗಳನ್ನು ಮೀಸಲಿಡುವ ಏರ್ಪಾಟು ಮಾಡಿಕೊಳ್ಳಬೇಕು ಎಂದರು.
ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ|ಸುರೇಶ ಇಟ್ನಾಳ, ಅಪರ ಜಿಲ್ಲಾ ಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಯಶವಂತ ಮದೀನಕರ್, ಕಿಮ್ಸ್ ತಜ್ಞವೈದ್ಯ ಡಾ|ಲಕ್ಷ್ಮೀಕಾಂತ ಲೋಕರೆ ಇದ್ದರು.