ಗದಗ: ಜಿಲ್ಲೆ ಸಮಗ್ರ ಅಭಿವೃದ್ಧಿ ಮತ್ತು ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಆಯಾ ಇಲಾಖೆ ಅಧಿಕಾರಿಗಳು ಹೆಚ್ಚಿನ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಪಂ ಅಧ್ಯಕ್ಷ ಎಸ್.ಪಿ. ಬಳಿಗಾರ ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಪ್ರಾರಂಭವಾಗಿದ್ದು, ರೈತರಿಗೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ವಿತರಣೆ ಹಾಗೂ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಕೇಂದ್ರ ಸರ್ಕಾರವು ಬರಗಾಲದಿಂದ ಸಂಕಷ್ಟ ಎದುರಿಸುತ್ತಿರುವ ಜಿಲ್ಲೆಗಳನ್ನು ಗುರುತಿಸಿ ಅಂತಹ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅರಣ್ಯೀಕರಣ, ಅಂತರ್ಜಲ ಪುನಶ್ಚೇತನ, ಮಳೆ ನೀರು ಸಂಗ್ರಹಣೆ ಕುರಿತಾಗಿ ಗ್ರಾಮೀಣ ಜನರಲ್ಲಿ ಅರಿವು ಮೂಡಿಸುವ ಜಲಶಕ್ತಿ ಯೋಜನೆ ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕೆರೆಗಳ ಮಾಹಿತಿಯನ್ನು ಜಿ.ಪಂ.ಗೆ ಸಲ್ಲಿಸುವಂತೆ ಸಿಇಒ ಮಂಜುನಾಥ ಚವ್ಹಾಣ ತಿಳಿಸಿದರು.
ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ವಿರೂಪಾಕ್ಷರೆಡ್ಡಿ ಮಾದಿನೂರು ಮಾತನಾಡಿ, ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಕ್ಷಯ ರೋಗಿಗಳ ನಿಯಂತ್ರಣಕ್ಕೆ ಪ್ರತಿ ತಿಂಗಳು ಸಮುದಾಯ ಮಟ್ಟದ ಸಭೆ, ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಲು ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರೊಂದಿಗೆ ಸಮೀಕ್ಷೆ ನಡೆಸಿ ಅಗತ್ಯವಿದ್ದಲ್ಲಿ ಟೆಮಿಸಾಸ್ ರಾಸಾಯನಿಕ ಸಿಂಪಡಣೆ, ಡಿಡಿಟಿ ಪೌಡರ್ ಸಿಂಪರಣೆ ಮಾಡಲಾಗುವುದು ಎಂದು ಸಭೆಗೆ ಉತ್ತರಿಸಿದರು.
Advertisement
ಇಲ್ಲಿನ ಜಿಲ್ಲಾಡಳಿತ ಭವನದ ಜಿ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಿಲ್ಲೆಯಲ್ಲಿ ರಸ್ತೆ, ಚೆಕ್ ಡ್ಯಾಂ ನಿರ್ಮಾಣ, ಕೆರೆ ಸ್ವಚ್ಛತೆ ಮತ್ತು ದುರಸ್ತಿ, ನಿರ್ವಹಣೆ, ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಬಿಡುಗಡೆಯಾದ ಅನುದಾನ, ಖರ್ಚು ಕುರಿತು ವಿವರವಾದ ವರದಿ ಸಲ್ಲಿಸುವಂತೆ ಆಯಾ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
Related Articles
Advertisement
ಪ್ರಾಥಮಿಕ ಹಾಜರಾತಿಯನ್ನು ಹೆಚ್ಚಿಸಲು ಮೇ 30ರಂದು ಅಕ್ಷರ ಗುಡಿ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ಜಿಲ್ಲೆಯ ಎಲ್ಲ ಶಾಲಾ ಮಕ್ಕಳಿಗೆ ಯೋಗದ ಕುರಿತು ಅರಿವು ಮೂಡಿಸುವ ಸಲುವಾಗಿ ಜೂ. 21ರಂದು ಎಲ್ಲ ಶಾಲೆಗಳಲ್ಲಿ ಯೋಗ ಕಾರ್ಯಕ್ರಮ ನಡೆಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್. ನಾಗೂರ ಸಭೆಗೆ ತಿಳಿಸಿದರು.
ಜಿ.ಪಂ. ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ಶಿಕ್ಷಣ ಮತ್ತು ಆರೋಗ್ಯ ಸಮಿತಿ ಅಧ್ಯಕ್ಷ ಶಿವಕುಮಾರ್ ನೀಲಗುಂದ, ಕೃಷಿ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷ ಈರಪ್ಪ ನಾಡಗೌಡ್ರ, ಜಿ.ಪಂ. ಯೋಜನಾ ನಿರ್ದೇಶಕ ಟಿ. ದಿನೇಶ, ಜಿ.ಪಂ. ಉಪಕಾರ್ಯದರ್ಶಿ ಪ್ರಾಣೇಶ ರಾವ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಕುರಿತು ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಪ್ರಚಾರ ಮಾಡಲಾಗಿದ್ದು, ಈಗಾಗಲೇ 1,32,549 ರೈತರ ಸ್ವಯಂ ಘೋಷಣೆಗಳನ್ನು ಪಡೆದು ಆನ್‌ಲೈನ್‌ನಲ್ಲಿ ನೋಂದಾಯಿಸಲಾಗಿದೆ. ಸಿರಿ ಧಾನ್ಯ ಬೆಳೆಗೆ ಪ್ರೋತ್ಸಾಹಿಸಲು ಒಂದು ಕುಟುಂಬಕ್ಕೆ ಪ್ರತಿ ಹೆಕ್ಟೇರ್‌ಗೆ 10,000 ರೂ. ನೀಡಲಾಗುತ್ತಿದೆ. • ಟಿ.ಎಸ್. ರುದ್ರೇಶ, ಜಂಟಿ ಕೃಷಿ ನಿರ್ದೇಶಕ