ಹೊಳಲ್ಕೆರೆ: ಪಟ್ಟಣದ ಒಂದನೇ ವಾರ್ಡ್ ಅಭಿವೃದ್ಧಿಗೆ 3.25 ಕೋಟಿ ರೂ., ಬಯಲು ಗಣಪತಿ ದೇವಸ್ಥಾನದ ರಸ್ತೆ ಅಭಿವೃದ್ಧಿಗೆ 200 ಲಕ್ಷ ರೂ., ಚರಂಡಿ ಕಾಮಗಾರಿಗೆ 75 ಲಕ್ಷ ರೂ., ಸಿಸಿ ರಸ್ತೆ ನಿರ್ಮಾಣಕ್ಕೆ 50 ಲಕ್ಷ ಅನುದಾನ ನೀಡಲಾಗಿದೆ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.
ಪಟ್ಟಣದ ಬಯಲು ಗಣಪತಿ ದೇವಸ್ಥಾನದ ಬಳಿ ರಸ್ತೆ ಆಗಲೀಕರಣ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಐತಿಹಾಸಿಕ ದೇವಸ್ಥಾನಕ್ಕೆ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಪ್ರವಾಸಿ ಕ್ಷೇತ್ರವಾಗಿರುವ ಇಲ್ಲಿಗೆ ಬಂದು ಹೋಗುವ ಭಕ್ತರಿಗೆ ರಸ್ತೆ ಸೌಲಭ್ಯ ಕಲ್ಪಿಸಲು ರಸ್ತೆ ಆಗಲಿಕರಣದ ಜತೆ ಏಕಮುಖ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಗಣಪತಿ ದೇವಸ್ಥಾನದಿಂದ ಪಿಎಲ್‌ಡಿ ಬ್ಯಾಂಕ್ ಹತ್ತಿರದಲ್ಲಿರುವ ಶಿವಮೊಗ್ಗ ರಸ್ತೆಗೆ ಲಿಂಕ್ ಮಾಡಲು ದೇವಸ್ಥಾನದ ಹಿಂಬದಿಯಲ್ಲಿ ರಸ್ತೆಯನ್ನು ನಿರ್ಮಾಣ ಮಾಡುತ್ತಿದ್ದೇವೆ ಎಂದರು.
ಕೋಟೆ ಜನವಸತಿ ಪ್ರದೇಶದಿಂದ ಕೊಳಚೆ ನೀರು ಹರಿಯಲು ಉತ್ತಮ ಚರಂಡಿ ಸೌಲಭ್ಯವಿಲ್ಲದೆ ಕೊಳಚೆ ನೀರು ಗುಂಡಿಗಳಲ್ಲಿ ತುಂಬಿಕೊಂಡು ಜನಜೀವನಕ್ಕೆ ತೊಂದರೆಯಾಗಿದೆ. ಕೊಳಚೆ ನಿಂತು ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳಬಹುದು. ಹಾಗಾಗಿ ಕೊಳಚೆ ಗುಂಡಿಗಳನ್ನು ಮುಚ್ಚಿ ವ್ಯವಸ್ಥಿತವಾದ ಚರಂಡಿ ನಿರ್ಮಿಸಿಕೊಡಬೇಕೆಂದು ವಾರ್ಡ್ ಸದಸ್ಯೆ ಎಚ್.ಆರ್. ನಾಗರತ್ನ ವೇದಮೂರ್ತಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಏಕಮುಖ ಸಿಸಿ ರಸ್ತೆ, ಒಳಚರಂಡಿ, ರಸ್ತೆಯ ಎರಡು ಬದಿ ವಿದ್ಯುತ್ ದೀಪದ ಕಂಬಗಳನ್ನು ಅಳವಡಿಸುತ್ತಿರುವುದಾಗಿ ತಿಳಿಸಿದರು.
ಒಂದನೇ ವಾರ್ಡ್‌ನಲ್ಲಿರುವ ಬಡವರಿಗೆ 65 ಮನೆಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಡಲಾಗಿದೆ. ತಲಾ 5 ಲಕ್ಷ ರೂ.ಅನುದಾನ ನೀಡಿದ್ದು, ಆರ್‌ಸಿಸಿ ಮನೆಯನ್ನು ನಿರ್ಮಿಸಿಕೊಡಲಾಗುತ್ತಿದೆ. ವಾರ್ಡ್ ನಲ್ಲಿರುವ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ಮಾಡಲಾಗುತ್ತದೆ. ಗಣಪತಿ ದೇವಸ್ಥಾನದ ಮುಂದಿನ ಕಲ್ಯಾಣಮಂಟಪ ರಸ್ತೆಯ ಮಟ್ಟದಿಂದ 5 ಅಡಿ ತಗ್ಗಿನಲ್ಲಿದೆ. ಮಳೆಗಾಲದಲ್ಲಿ ನೀರು ಕಲ್ಯಾಣಮಂಟಪಕ್ಕೆ ನುಗ್ಗುತ್ತವೆ. ತಗ್ಗನ್ನು ಭರ್ತಿ ಮಾಡಿ ಕಲ್ಯಾಣಮಂಟಪದ ಸುತ್ತಲಿನ ಆವರಣಕ್ಕೆ ಕಾಂಕ್ರಿಟ್ ಹಾಕಲಾಗುತ್ತದೆ ಎಂದರು.
ಗುತ್ತಿಗೆದಾರ ರಾಜಣ್ಣ, ಪಪಂ ಸದಸ್ಯರಾದ ಮಲ್ಲಿಕಾರ್ಜುನ್, ಸುಧಾ ಬಸವರಾಜ್, ಮುರುಗೇಶ್, ಎಪಿಎಂಸಿ ನಿರ್ದೇಶಕ ಮರುಳಸಿದ್ದೇಶ್ವರ, ಬಸವರಾಜ್, ದೇವಸ್ಥಾನದ ಸಮಿತಿ ಸದಸ್ಯರಾದ ರಾಘವೇಂದ್ರ, ನಟರಾಜ್ ಆಚಾರ್ ಮತ್ತಿತರರು ಇದ್ದರು.