ಹೊಸದಿಲ್ಲಿ: ದೇಶದ ಆಡಳಿತದಲ್ಲಿ ಮತ್ತಷ್ಟು ಸುಧಾರಣೆ ಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಮಹದಾಸೆ. ಅದಕ್ಕಾಗಿ ಹಲವು ಸಂದರ್ಭಗಳಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಕೂಡ ಮಾತನಾಡಿದ್ದರು.
ಕೇಂದ್ರ ಸಚಿವ ಸಂಪುಟದ ಸದಸ್ಯರಿಗೆ 2014 ಮತ್ತು 2019ರಲ್ಲಿ ಚುನಾವಣೆ ಸಂದರ್ಭದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ವಾಗ್ಧಾನ ಮಾಡಿದ್ದ ಅಂಶಗಳ ಬಗ್ಗೆ ಅಧ್ಯಯನ ನಡೆಸಿ, ಕ್ಷಿಪ್ರವಾಗಿ ಆಯಾ ಸಚಿವಾಲಯದ ಸಚಿವರು ತಮ್ಮ ವ್ಯಾಪ್ತಿಯಲ್ಲಿ ಯಾವ ರೀತಿಯಲ್ಲಿ ಸುಧಾರಣೆ ಗಳನ್ನು ತರಬಹುದು ಎಂಬ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದಾರೆ.
ಇತ್ತೀಚೆಗೆ ನಡೆದ ಕೇಂದ್ರ ಸಂಪುಟ ಪುನಾರಚನೆಯ ಬಳಿಕ ನಡೆದಿದ್ದ ಎರಡು ಸಂಪುಟ ಸಭೆಗಳಲ್ಲಿ ಪ್ರಧಾನಿ ಮೋದಿ ಸಹೋದ್ಯೋಗಿಗಳಿಗೆ ಈ ಕೆಲಸ ನೀಡಿದ್ದಾರೆ. ವಿಶೇಷವಾಗಿ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವರಾಗಿರುವ ಮುಖಂಡರಿಗೆ 2014, 2019ರ ಪ್ರಣಾಳಿಕೆ ಅಧ್ಯಯನ ನಡೆಸಲೂ ಆದೇಶಿಸಿದ್ದಾರೆ. ಆಡಳಿತಾತ್ಮಕ, ಪೊಲೀಸ್ ಮತ್ತು ನ್ಯಾಯಾಂಗ ಕ್ಷೇತ್ರದ ಸುಧಾರಣೆ ಬಗ್ಗೆ ಬಿಜೆಪಿಯಲ್ಲಿ ಹೆಚ್ಚಿನ ಪ್ರಮಾಣದ ಪರಾ ಮರ್ಶೆಗಳು ನಡೆದಿವೆ ಎಂದು ಮೂಲಗಳನ್ನು ಉಲ್ಲೇಖೀಸಿ “ದ ನ್ಯೂ ಇಂಡಿಯನ್ ಎಕ್ಸ್ ಪ್ರಸ್’ ವರದಿ ಮಾಡಿದೆ.
ನಾಗರಿಕ ಸೇವೆಗಳ ಬಗ್ಗೆ ಆದ್ಯತೆ: 2019ರ ದಿಕ್ಸೂಚಿ ದಾಖಲೆಗಳ ಪ್ರಕಾರ ನಾಗರಿಕ ಸೇವೆಗಳಲ್ಲಿ ಆಮೂಲಾಗ್ರ ಬದಲಾವಣೆ ಮಾಡಲು ಉದ್ದೇಶಿಸಲಾಗಿದೆ. ಕೆಲವೊಂದು ಸಚಿವಾಲಯಗಳ ವಿಲೀನ, ಕನಿಷ್ಠ ಆಡಳಿತ; ಗರಿಷ್ಠ ಕೆಲಸದ ಬಗ್ಗೆಯೂ ಪ್ರಸ್ತಾಪಿಸಲಾಗಿತ್ತು. ಸೋಂಕಿನ 2ನೇ ಅಲೆ ನಿರ್ವಹಿಸುವಲ್ಲಿ ಕೇಂದ್ರ ಎಡವಿರುವ ಕಾರಣ ಆಡಳಿತಾತ್ಮಕ ಸುಧಾರಣೆಗಳನ್ನು ಜಾರಿಗೊಳಿಸುವ ಅನಿ ವಾರ್ಯತೆ ಕೇಂದ್ರಕ್ಕಿದೆ. ಲೋಕಸಭೆ, ವಿಧಾನಸಭೆಗೆ ಚುನಾವಣೆ, 2023ರ ಒಳಗಾಗಿ ರೈತರ ಆದಾಯ ದ್ವಿಗುಣ, 2022ರಲ್ಲಿ ಸರಕು ಸಾಗಣೆಗಾಗಿ ವಿಶೇಷ ರೈಲು ಮಾರ್ಗ ಸ್ಥಾಪನೆ ಸರಕಾರದ ಮುಂದೆ ಇರುವ ಆದ್ಯತೆಯ ವಿಚಾರಗಳಾಗಿವೆ.