Advertisement

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು: ಎಂ.ಕೃಷ್ಣಪ್ಪ

08:57 AM May 01, 2023 | Team Udayavani |

ಬೆಂಗಳೂರು: ಕೋವಿಡ್‌ ಸಂಕಷ್ಟದ ವೇಳೆ ಅನ್ನ, ಆಹಾರ, ಔಷಧ ನೀಡಿ ಬಡಜನರ ಕಣ್ಣೀರು ಒರೆಸಿದ್ದೇನೆ. ರಸ್ತೆ ಅಗಲೀಕರಣ, ಕೆರೆಗಳ ಅಭಿವೃದ್ಧಿ , 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ದುಡಿದಿದ್ದೇನೆ. ಹೀಗಾಗಿ, ಈ ಬಾರಿ ಕ್ಷೇತ್ರದಲ್ಲಿ ಜನರು ಮತ್ತೆ ಕಮಲ ಅರಳಿಸಲಿದ್ದಾರೆ ಎಂಬ ಅಚಲವಾದ ನಂಬಿಕೆ ಇದೆ.

Advertisement

ಇದು ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಂ.ಕೃಷ್ಣಪ್ಪ ಅವರ ಮಾತು.’ ಉದಯವಾಣಿ’ಗೆ ನೀಡಿರುವ ಸಂದರ್ಶನದಲ್ಲಿ ಈಗಾಗಲೇ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದು ಮತ್ತೂಮ್ಮೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತಾರೆ.

 ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಹೇಗಿದೆ?

ಐದು ವರ್ಷಗಳಿಂದ ಕ್ಷೇತ್ರದಲ್ಲಿ ಚುನಾವಣೆ ರೀತಿಯಲ್ಲೆ ಕೆಲಸ ಮಾಡುತ್ತಿದ್ದೆ. ಹಾಗಾಗಿ ನನಗೆ ಚುನಾವಣೆ ರೀತಿ ಎನಿಸುವುದೇ ಇಲ್ಲ. ಆದರೆ, ಈಗ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿರು ವುದನ್ನು ಈಗ ಜನರಿಗೆ ತಲುಪಿಸುವ ಕೆಲಸವನ್ನು ಮಾಡಿದ್ದೇನೆ. ಜತೆಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಕೆರೆ, ಪಾರ್ಕ್‌ ಮತ್ತು ಸಮುದಾಯ ಭವನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆ ಮಾಡಲಾಗಿದ್ದು, ಎಲ್ಲೆಲ್ಲಿ ರುದ್ರಭೂಮಿಗೆ ಜಾಗ ಅವಶ್ಯಕತೆ ಇದೆಯೋ ಅಲ್ಲಲ್ಲಿ ಭೂ ಮಂಜೂರು ಮಾಡಲಾಗಿದೆ.

 ಆರೋಗ್ಯ, ಶಿಕ್ಷಣ ವಿಚಾರದಲ್ಲಿ ನಿಮ್ಮ ಸಾಧನೆ?

Advertisement

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಕೆಲಸವಾಗಿದೆ. ಇಎಸ್‌ಐ ಆಸ್ಪತ್ರೆಗೆ ಜಾಗ ಮಂಜೂರು ಮಾಡಲಾಗಿದೆ. ಡಿಪ್ಲೋಮಾ ಮತ್ತು ಐಟಿಐ ಕಾಲೇಜುಗಳ ಸ್ಥಳ ಮಂಜೂರಾತಿ ದೊರೆತಿದೆ. ಕಾನ್ವೆಂಟ್‌ ಶಾಲೆಗೆ ಸರಿ ಸಮಾನ ರೀತಿ ಯಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಕೆಲಸ ಕ್ಷೇತ್ರದ ಹಲವು ಕಡೆಗಳಲ್ಲಿ ನಡೆದಿದೆ. ಚುಂಚನಘಟ್ಟ, ಆರ್‌ಬಿಐ ಲೇಔಟ್‌ನಲ್ಲಿ ಶಾಲೆಗಳ ನಿರ್ಮಾಣ ಮಾಡಲಾಗಿದೆ. ಜತೆಗೆ ಬೇಗೂರು ಶಾಲೆಯಲ್ಲಿ ಆಟದ ಮೈದಾನ ನಿರ್ಮಾಣ ಮಾಡಲಾಗಿದೆ. ಶಾಲೆಗಳನ್ನು ಹಂತ-ಹಂತವಾಗಿ ಮೇಲ್ದರ್ಜೆಗೆ ಏರಿಸುವ ಕೆಲಸ ನಡೆದಿದೆ.

 ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆಯಾ?

ಕ್ಷೇತ್ರದಲ್ಲಿ ರಸ್ತೆಗಳ ಅಗಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದೇನೆ. ಮೀನಾಕ್ಷಿ ದೇವಸ್ಥಾನ ರಸ್ತೆಯಿಂದ ಹೊಸೂರು ರಸ್ತೆ ವರೆಗೆ ಉತ್ತಮ ರೀತಿಯ ಡಬಲ್‌ ರಸ್ತೆಗಳನ್ನ ನಿರ್ಮಾಣ ಮಾಡಲಾಗಿದೆ. ಬೇಗೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆಗಳ ಅಗಲೀ ಕರಣ ಕೆಲಸ ನಡೆದಿದೆ. ಬಡಜನರಿಗೆ ವಸತಿ ನೀಡುವ ಕೆಲಸವೂ ಸಾಗಿದೆ. ಹೌಸ್‌ ಬೋರ್ಡ್‌ಗಳಿಂದ ಮನೆಗಳನ್ನು ನಿರ್ಮಾಣ ಮಾಡುವ ಕೆಲಸ ನಡೆದಿದೆ. ಕೆಲವು ಹಳ್ಳಿಗಳಲ್ಲಿ ಬಹು ಅಂತಸ್ಥಿನ ಮನೆ ನಿರ್ಮಾಣ (ಜಿ2) ಮಾಡುವ ಕೆಲಸ ನಡೆದಿದೆ.

 ಕ್ಷೇತ್ರದಲ್ಲಿ ಜನರ ಸ್ಪಂದನೆ ಹೇಗಿದೆ?

ಉತ್ತಮವಾಗಿದೆ. ನಾನು ಮೂರು ಬಾರಿ ಶಾಸಕನಾಗಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಶೇ.90 ಬಿಜೆಪಿ ಪರ ಅಲೆ ಇದೆ.

 ನಿಮ್ಮನ್ನು ಯಾಕೆ ಪುನರಾಯ್ಕೆ ಮಾಡಬೇಕು?

ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಕ್ಷೇತ್ರದ ಜನತೆಗೆ ಸಮಸ್ಯೆಗಳಿಗೆ ಸದಾ ಸ್ಪಂದಿಸಿದ್ದೇನೆ. ಹೀಗಾಗಿ, ಮತ್ತೂಮ್ಮೆ ಅವಕಾಶ ಕೊಡಲು ಮನವಿ ಮಾಡುತ್ತಿದ್ದೇನೆ.

Advertisement

Udayavani is now on Telegram. Click here to join our channel and stay updated with the latest news.

Next