ಚೇಳೂರು: ಗ್ರಾಮದ ಹೃದಯ ಭಾಗದಲ್ಲಿ ಸರ್ಕಾರಿ ಗುಂಡು ತೋಪುನ್ನು ಅತಿಕ್ರಮಿಸಿಕೊಂಡಿರುವುದನ್ನು ತೆರವುಗೊಳಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅವರು ಹೇಳಿಕೆ ನೀಡಿ ಚೇಳೂರು ಗ್ರಾಮದ 1-21 ಗುಂಟೆ ಸರ್ಕಾರಿ ಜಮೀನು ಗುಂಡು ತೋಪಿದ್ದು, ಇದರಲ್ಲಿ ನಿರ್ಗತಿಕ ಬಡವರಿಗಾಗಿ ಮನೆಗಳು ನಿರ್ಮಿಸಿಕೊಳ್ಳಲು ನಿವೇಶನಗಳನ್ನು ನೀಡಲು ಅಂದಿನ ಜಿಲ್ಲಾಧಿಕಾರಿ ಪಿಡಿನಂ.74/52-53ರ ಆದೇಶದಂತೆ 1951ರಲ್ಲಿ 0-23 ಗುಟೆ ಜಮೀನು ಪ್ರದೇಶ ಬಡವರಿಗೆ ನೀಡಿದ್ದಾರೆ.
ಉಳಿದ 38 ಗುಂಟೆ ಜಮೀನು ಪ್ರದೇಶವನ್ನು ಪ್ರಭಾವಿಗಳು ಆಕ್ರಮಿಸಿದ್ದಾರೆ. ಸುಮಾರು 100 ಕೋಟಿ ರೂ. ಬೆಲೆ ಬಾಳುವ ಜಾಗಗಳಿದ್ದು ಈ ಕುರಿತು ಒಂದು ವರ್ಷದ ಹಿಂದೆ ಜಿಲ್ಲಾಧಿಕಾರಿಗಳಿಗೆ ವಿವಿಧ ಸ.ನಂ.ಗಳೊಂದಿಗೆ ಮನವಿ ಮಾಡಿದಾಗ ಸರ್ವೆ ಮಾಡಿ ಅತಿಕ್ರಮಣ ಮಾಡಿದವರಿಗೆ ಕಾಟಚಾರದ ನೋಟಿಸ್ ನೀಡಿ ಕೈ ತೊಳೆದುಕೊಂಡ ಅಧಿಕಾರಿಗಳು ಶ್ರೀಮಂತ ರೊಂದಿಗೆ ಕೈಜೋಡಿಸಿ ಸರ್ಕಾರದ ಸ್ವತ್ತನ್ನು ಅನ್ಯರ ಪಾಲು ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇಲ್ಲೇ ನೂತನ ತಾಲೂಕಿಗೆ ಮಿನಿ ವಿಧಾನಸೌಧ ನಿರ್ಮಾಣ ಮಾಡಬಹುದೆಂದು ಈ ಹಿಂದೆ ಆರೋಗ್ಯ ಸಚಿವ ಸಿ.ಸುಧಾಕರ್ ರವರಿಗೆ ಮನವಿ ಪತ್ರದಲ್ಲಿ ತಿಳಿಸಲಾಗಿತ್ತು. ಮನವಿ ಪತ್ರ ಸ್ವೀಕರಿಸಿದ ಆರೋಗ್ಯ ಸಚಿವರು ಅಂದು ಮಾತನಾಡಿ, ಎಷ್ಟೆ ರಾಜಕೀಯ ಬಲವಿದ್ದರೂ ಕಾನೂನು ಯಾರ ಸ್ವತ್ತು ಅಲ್ಲ ಮುಲಾಜಿಲ್ಲದೇ ಕಾನೂನು ರೀತಿ ಕ್ರಮ ಜರುಗಿಸಿ ತೆರವುಗೊಳಿಸಲು ಜಿಲ್ಲಾಧಿಕಾರಿ ಆರ್.ಲತಾ ರವರಿಗೆ ಸೂಚಿಸಿದ್ದರು ಆದರೂ ಒತ್ತುವರಿ ತೆರವು ಕಾರ್ಯ ಇನ್ನು ಆಗದಿರುವ ಬಗ್ಗೆ ಅನುಮಾಗಳು ವ್ಯಕ್ತವಾಗಿವೆ. ಆದಷ್ಟು ಶೀಘ್ರವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.