ಬಾದಾಮಿ: ಓದುವ ಆಂದೋಲನ ಕಾರ್ಯಕ್ರಮ ರಾಷ್ಟ್ರದಾದ್ಯಂತ ಜ.1 ರಿಂದ ಆರಂಭವಾಗಿದ್ದು, ಏ. 10ರವರೆಗೆ ನಡೆಯಲಿದೆ. ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಬಿರಾದಾರ ಉಸ್ತುವಾರಿ ಅಧಿಕಾರಿಗಳಿಗೆ ಸೂಚಿಸಿದರು.
ಯಂಕಂಚಿ ಮಣಿನಾಗರ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ 100 ದಿನಗಳ ಓದು ಆಂದೋಲನ ಕಾರ್ಯಕ್ರಮ
ಉದ್ಘಾಟಿಸಿ ಮಾತನಾಡಿದರು. ಡೈಟ್ ಉಪನಿರ್ದೇಶಕ (ಅಭಿವೃದ್ಧಿ) ಬಿ.ಕೆ.ನಂದನೂರ ಮಾತನಾಡಿ, ಓದುವ ಆಂದೋಲನದ ಮೂಲಕ ಮಕ್ಕಳಲ್ಲಿ 14 ವಾರಗಳ ಕಾಲ 14 ಚಟುವಟಿಕೆ ಮಾಡುವ ಮೂಲಕ ಓದುವ ಮತ್ತು ಕಲಿಕೆಗೆ ಒತ್ತು ನೀಡಲು ಅನುಕೂಲವಾಗುತ್ತದೆ.
ಮೇಲ್ವಿಚಾರಣಾ ಕಾರಿಗಳು ಶಾಲೆಗಳಲ್ಲಿ ಓದುವ ಆಂದೋಲನ ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಲು ಸೂಚಿಸಿದರು. ಶಿಕ್ಷಕರು ಸಕಾರಾತ್ಮಕ ಚಿಂತನೆ ಮಾಡಬೇಕಿದೆ. ಮಗುವಿನ ಪ್ರತಿಭೆ ಬಳಕೆಯಾಗಬೇಕು. ನಿಗದಿತ ಸಮಯದಲ್ಲಿ ಎಲ್ಲ ಚಟುವಟಿಕೆಗಳು ನಡೆಯುವಂತೆ ಮೇಲ್ವಿಚಾರಣೆ ಮಾಡಬೇಕೆಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ದಾನಿಗಳಾದ ವಿ.ಪಿ.ಭಿಕ್ಷಾವತಿಮಠ, ಸುಭಾಸ ಬದಾಮಿ, ಸುಭಾಸ ಹೊಸಮನಿ ಇವರು ಕೊಡಮಾಡಿದ ಸಂಗೀತ ಸಾಮಗ್ರಿ ಮತ್ತು ಗ್ರೀನ್ ಬೋರ್ಡ್ ಮತ್ತು ಎಲ್.ಸಿ.ಡಿ. ಪ್ರೊಜೆಕ್ಟರ್‌ಗಳನ್ನು ಲೋಕಾರ್ಪಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ದಾನಿಗಳನ್ನು ಮತ್ತು ನೂತನ ಬಿಇಒ ಆರೀಫ್ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಜಾಸ್ಮಿನ್ ಕಿಲ್ಲೇದಾರ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಪಿ.ಮಾಗಿ, ಡೈಟ್ ಉಪನ್ಯಾಸಕ ಎಚ್.ಎಸ್. ಪಾಟೀಲ, ವಿಷಯ ಪರಿವೀಕ್ಷಕ ಎಂ.ಎ.ಬಾಳಿಕಾಯಿ, ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಆರ್.ಎಸ್.ಆದಾಪುರ, ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ಆರ್.ಪಾಟೀಲ, ಬಸವರಾಜ ಹಳಗೇರಿ, ಮುಖ್ಯಶಿಕ್ಷಕಿ ಬಸಮ್ಮಾ ನರಸಾಪುರ ಹಾಜರಿದ್ದರು. ಸಮೂಹ ಸಂಪನ್ಮೂಲ ವ್ಯಕ್ತಿ ಆರ್. ವಿ.ಗೌಡಪ್ಪಗೌಡರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಶಿಕ್ಷಣ ಸಂಯೋಜಕರು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳು, ಸಮೂಹ ಸಂಪನ್ಮೂಲ ವ್ಯಕ್ತಿಗಳು, ಶಾಲಾ ಶಿಕ್ಷಕರು, ಸಿಬ್ಬಂದಿಗಳು ಹಾಜರಿದ್ದರು.