ಬೆಂಗಳೂರು: ಕ್ಯಾಲಿಫೋರ್ನಿಯಾ ಹಾಗೂ ಸ್ಯಾನ್ ಫ್ರಾನ್ಸಿಸ್ಕೋ ಸಿಲಿಕಾನ್ ವ್ಯಾಲಿ ಮಾದರಿಯಲ್ಲಿ ರಾಜ್ಯದ ರಾಜಧಾನಿಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂಗಿತ ವ್ಯಕ್ತಪಡಿಸಿದ್ದಾರೆ.
ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ 73ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಭಿವೃದ್ಧಿಯ ಕನಸು ಬಿಚ್ಚಿಟ್ಟಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ರಾಜಧಾನಿಯ ಸರ್ವತೋಮುಖ ಅಭಿವೃದ್ಧಿಗಾಗಿ ಬೆಂಗಳೂರು ಅಭಿವೃದ್ಧಿ ಕಾರ್ಯಪಡೆಯನ್ನು ಇನ್ನಷ್ಟು ಬಲಗೊಳಿಸಲಾಗುತ್ತದೆ ಎಂದು ಹೇಳಿದರು.
ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಬಣ್ಣಿಸಲಾಗುತ್ತದೆ. ನಿಜ ಅರ್ಥದಲ್ಲಿ ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿಯಾಗಿ ರೂಪಿಸುವುದು ನನ್ನ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಕ್ಯಾಲಿಫೋರ್ನಿಯಾ ಹಾಗೂ ಸ್ಯಾನ್ ಫ್ರಾನ್ಸಿಸ್ಕೋ ಸಿಲಿಕಾನ್ ವ್ಯಾಲಿಗಳಂತೆ ನಮ್ಮ ಬೆಂಗಳೂರು ಅಭಿವೃದ್ಧಿಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯವು ಜಾಗತಿಕ ತಂತ್ರಜ್ಞಾನ ಭೂಪಟದಲ್ಲಿ ಪ್ರಾಮುಖ್ಯತೆ ಗಳಿಸಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ರಫ್ತಿನ ಶೇ.30ಕ್ಕೂ ಅಧಿಕ ಪಾಲು ಕರ್ನಾಟಕದ್ದಾಗಿದೆ. ಏಳು ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್‌ಗ್ಳ ತವರೂರಾಗಿರುವ ಬೆಂಗಳೂರು ದೇಶದ ಸ್ಟಾರ್ಟ್‌ಅಪ್ ರಾಜಧಾನಿ ಎಂದು ಬಣ್ಣಿಸಿದರು. ಇಂದು ನಗರೀಕರಣ ವ್ಯಾಪಕವಾಗಿದೆ.
ಉದ್ಯೋಗ ಸಹಿತವಾಗಿ ವಿವಿಧ ಕಾರಣಗಳಿಗಾಗಿ ನಗರ ಪ್ರದೇಶಗಳಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದೆ. ನಗರ ಪ್ರದೇಶಗಳಿಗೆ ಮೂಲಸೌಕರ್ಯ ಒದಗಿಸುವ ಮೂಲಕ ನಗರ ಪ್ರದೇಶದ ಬೆಳವಣಿಗೆಯನ್ನು ವ್ಯವಸ್ಥಿತವಾಗಿ ನಿಯಂತ್ರಿಸುವುದು ಅತಿ ಅಗತ್ಯವಾಗಿದೆ. ಹೀಗಾಗಿ ಸರ್ಕಾರವು ಬೆಂಗಳೂರು ಸಹಿತವಾಗಿ ಎಲ್ಲ ಪ್ರಮುಖ ನಗರಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ನಿರ್ವಹಣೆಗೆ ವ್ಯವಸ್ಥಿತರ ರೂಪ ನೀಡಲಿದೆ ಎಂದು ಹೇಳಿದರು.