ಗುರುವೇ ಮೆಚ್ಚಿರುವಿರೆಂಬುದನು ವಿದ್ಯೆ ಕರುಣಿಸಿರಲ್ಕೆ…, ಸಾಕು ಕೊಯ್ಯದಿರು ಕೈ ಬೆರಳ ಸಾಧಕರ ಏಕೆ ಪರೀಕ್ಷೆಗೈಯುವುದು?,ಆರು ಗುರುಭಕ್ತಿಯಲಿ ನಿನ್ನಮ್ ಮೀರಿಸರು ಭವಾಗಲೆಂದಾ…ಅಪರೂಪಕ್ಕೊಮ್ಮೆ ಬಳಸುವ ಕಲ್ಯಾಣ ವಸಂತ,ವಾಸಂತಿ,ಮತ್ತು ರೀತಿಗೌಳ ರಾಗದಲ್ಲಿ ಭಾವುಕ ಸನ್ನಿವೇಶ ಸೃಷ್ಟಿಸುವ ಹಾಡನ್ನು ಭಾಗವತ ವೇಣಿ ಸುಬ್ರಹ್ಮಣ್ಯ ಭಟ್ ಕಾರ್ಕಳ ರವರು ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರನ್ನು ಭಾವುಕರಾಗಿಸಿದರು.ಕಲಾರಂಗ ಕಾರ್ಕಳ ಆಶ್ರಯದಲ್ಲಿ ಜ.5 ರಂದು ಕಾರ್ಕಳದಲ್ಲಿ ನೆರವೇರಿದ ಗುರುದಕ್ಷಿಣೆ ತಾಳಮದ್ದಳೆ ಕೂಟದಲ್ಲಿ ಹಿಮ್ಮೇಳ,ಮುಮ್ಮೇಳ ಎರಡೂ ವಿಜೃಂಭಿಸಿ ಸಾರ್ಥಕತೆಯ ಕೂಟವಾಯಿತು.
ದ್ರೋಣಾಚಾರ್ಯರಿಂದ ಬಿಲ್ವಿದ್ಯೆ ನಿರಾಕರಿಸಲ್ಪಟ್ಟ ಬೇಡರ ಜಾತಿಯ ಏಕಲವ್ಯನು ದ್ರೋಣರನ್ನೇ ತನ್ನ ಗುರುವೆಂದು ಪರಿಗಣಿಸಿ ಏಕಾಗ್ರಚಿತ್ತದಿಂದ ದ್ರೋಣರ ಮೃಣ್ಮಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸ್ವಯಂ ಧನುರ್ ವಿದ್ಯೆಯನ್ನು ಕಲಿಯುತ್ತಾನೆ.ಇತ್ತ ದ್ರೋಣಾಚಾರ್ಯರು ತಾವು ಕಲಿಸಿದ ವಿದ್ಯೆಯ ಪ್ರಾಯೋಗಿಕ ಪರೀಕ್ಷೆಗಾಗಿ ಪಾಂಡವ,ಕೌರವ ಶಿಷ್ಯರೊಡಗೂಡಿ ಬೇಟೆ ನಾಯಿಯೊಂದಿಗೆ ಕಾಡಿಗೆ ತೆರಳುತ್ತಾರೆ.ಈ ಸಂದರ್ಭ ನಾಯಿಯು ದೂರದ ವಾಸನೆಯನ್ನು ಆಘ್ರಾಣಿಸಿ ಬೊಗಳಿದಾಗ ಆ ಕಡೆಯಿಂದ ಬಂದ ಏಳು ಬಾಣಗಳು ನಾಯಿಯ ಬಾಯಿಯ ಸುತ್ತು ಮಾತ್ರ ಆವರಿಸಿ ,ನಾಯಿಯನ್ನು ಸ್ತಬ್ಧಗೊಳಿಸುತ್ತದೆ.
ಆಶ್ಚರ್ಯಗೊಂಡ ಅರ್ಜುನನು ಇದು ಶಬ್ದವೇಧಿ ವಿದ್ಯೆಯ ಪರಿಣಾಮ ,ಇದು ಗುರುಗಳು ತನಗೆ ಮಾತ್ರ ಕಲಿಸಿದ್ದು ಬಿಟ್ಟರೆ ಇತರರಿಗೆ ತಿಳಿದದ್ದು ಹೇಗೆ ಎಂಬ ಜಿಜ್ಞಾಸೆಯೊಂದಿಗೆ ಆ ಬಾಣಗಳು ಬಂದ ದಿಕ್ಕಿಗೆ ಹುಡುಕಿ ಹೋದಾಗ ,ಪ್ರತಿಮೆಯೊಂದನ್ನು ಕೇಂದ್ರವಾಗಿಟ್ಟುಕೊಂಡು ಧನುರ್ವಿದ್ಯೆಯಲ್ಲಿ ತಲ್ಲೀನನಾಗಿದ್ದ ಏಕಲವ್ಯನನ್ನು ಕಾಣು ತ್ತಾನೆ. ದ್ರೋಣರೇ ಆತನ ಗುರುವೆಂದು ತಿಳಿದಾಗ ಸಪ್ಪೆ ಮೊರೆಯೊಂದಿಗೆ ಬಂದು ನಡೆದ ವೃತ್ತಾಂತವನ್ನೆಲ್ಲ ಗುರುಗಳಿಗೆ ತಿಳಿಸುತ್ತಾನೆ.
ಏಕಲವ್ಯನಾಗಿ ಅರ್ಥ ಹೇಳಿದ ಸುಬ್ರಾಯ ಲೋಂಡೆ ಶೆಟ್ಟಿಬೆಟ್ಟುರವರು, ತಾನು ಬೇಡ ಜಾತಿಯವ,ರಾಜಕುಮಾರನಲ್ಲನೆಂಬ ಕಾರಣಕ್ಕೆ ತನಗೆ ವಿದ್ಯೆ ನಿರಾಕರಿಸಿದ ದ್ರೋಣರಿಗೆ, ಭಗವಂತನು ಗಾಳಿ,ನೀರು,ಬೆಂಕಿಯನ್ನು ಬಡವ ಬಲ್ಲಿದರಾದಿಯಾಗಿ ಚಾತುರ್ವರ್ಣದವರಿಗೂ ಸಮಾನವಾಗಿ ಕರುಣಿಸಿರುವಾಗ ನೀವು ಹೀಗೆ ಭೇದಭಾವ ಮಾಡುವುದು ಸರಿಯೇ? ಜಾತಿಯೆನ್ನುವುದು ಆಕಸ್ಮಿಕ ಹುಟ್ಟೇ ಹೊರತು ಅರ್ಜಿ ಹಾಕಿ ಹುಟ್ಟುವುದಲ್ಲವಲ್ಲ . ಇದು ವರವೂ ಅಲ್ಲ ಶಾಪವೂ ಅಲ್ಲಾ ,ಜಾತಿ ನೋಡಿ ವಿದ್ಯೆ ಕಲಿಸುವುದು ಇದು ನ್ಯಾಯವೇ ಗುರುಗಳೇ ಎಂಬ ಮಾರ್ಮಿಕವಾದ ಮಾತುಗಳು ಭಾವುಕತೆಯಲ್ಲಿ ತೇಲಿಸಿತು.ಅಷ್ಟೇ ಪ್ರಬುದ್ಧವಾಗಿ ದ್ರೋಣನಾಗಿ ಅರ್ಥ ನುಡಿದ ಸುಬ್ರಹ್ಮಣ್ಯ ಬೈಪಡಿತ್ತಾಯರವರು ಭಗವಂತನು ಯಾವುದೇ ಭೇದಭಾವ ಮಾಡದೆ ದಯಪಾಲಿಸಿದ ಗಾಳಿ,ನೀರು,ಬೆಂಕಿ ಹೌದಾದರೂ ಸನ್ನಿವೇಶಕ್ಕೆ ತಕ್ಕಂತೆ ಪರಿವರ್ತನೆಯಾಗುತ್ತದೆ.ಮನೆಯ ಒಲೆಯಲ್ಲಿ ಪಾತ್ರೆಯಲ್ಲಿ ಅಕ್ಕಿ ಹಾಕಿ ಉರಿಸಿದ ಬೆಂಕಿ,ಬೆಂದ ಅನ್ನ ಇವೆಲ್ಲವೂ ದೇವಸ್ಥಾನದಲ್ಲಾದರೆ ಬೆಂಕಿ ಆರತಿಯಾಗುತ್ತದೆ,ಅನ್ನ ನೈವೇದ್ಯವಾಗುತ್ತದೆ,ನೀರಿಗೆ ತುಳಸಿದಳ ಹಾಕಿದರೆ ಅದು ತೀರ್ಥವಾಗುತ್ತದೆ. ಹಾಗೆಯೇ ಇಲ್ಲಿ ಭೀಷ್ಮಾಚಾರ್ಯರಿಂದ ಕೆಲವೊಂದು ನಿಬಂಧನೆಗೆ ಒಳಪಟ್ಟಿರುವ ತನಗೆ, ನಿನಗೆ ವಿದ್ಯೆ ನಿರಾಕರಿಸುತ್ತಿರುವ ಸನ್ನಿವೇಶವೂ ಸೃಷ್ಟಿಸಲ್ಪಟ್ಟಿದ್ದು ಇದೇ ಕಾರಣದಿಂದ ಎಂದು ತಮ್ಮ ನಿಲುವನ್ನು ಸಮರ್ಥಿಸಿ ಮಾತನಾಡಿದ್ದು, ಇಬ್ಬರ ವಾದಕ್ಕೂ ಪ್ರೇಕ್ಷಕರು ತಲೆದೂಗಿ ಚಪ್ಪಾಳೆಗೈದದ್ದು ಅರ್ಥವೈಭವಕ್ಕೆ ಸಾಕ್ಷಿಯಾಯ್ತು.
ಅರ್ಜುನನಾಗಿ ಶ್ರೀಶ ತಾಮಣರ್ ಶೆಟ್ಟಿಬೆಟ್ಟು ಪ್ರಬುದ್ಧ ಮಾತುಗಾರಿಕೆಯಿಂದ ಮನಗೆದ್ದರು.ಆನಂದ ಗುಡಿಗಾರ ಕೆರ್ವಾಶೆ ಮದ್ದಳೆಯಲ್ಲಿ ,ರವಿರಾಜ್ ಜೈನ್ ಕಾರ್ಕಳ ಚೆಂಡೆಯಲ್ಲಿ, ಉದಯ ಪಾಟ್ಕರ್ ಮಿಯಾರು ಚಕ್ರತಾಳದಲ್ಲಿ ಮಿಂಚಿದರು.
ಎಂ.ರಾಘವೇಂದ್ರ ಭಂಡಾರ್ಕರ್