Advertisement
ಸ್ವಾಮೀಜಿಗಳು ವಾಸ್ತವ ಸ್ಥಿತಿ ಅರಿತು ಮಾತಾಡಲಿಹಾವೇರಿ: ಸ್ವಾಮೀಜಿಗಳಾದವರು ರಾಜ್ಯದ ವಾಸ್ತವ ಸ್ಥಿತಿ ತಿಳಿಯದೆ ಸಲಹೆ ನೀಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಪಾದಿಸಿದರು. ನರಸೀಪುರದಲ್ಲಿ ಬುಧವಾರ ನಡೆದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,” ಪಂಚಮಸಾಲಿ ಪೀಠದ ಕಾರ್ಯಕ್ರಮದಲ್ಲಿ ಮಂಗಳವಾರ ವಚನಾನಂದ ಶ್ರೀಗಳು ವಾಸ್ತವಿಕ ಅರಿವು ಇಲ್ಲದೇ ಸಚಿವ ಸ್ಥಾನ ನೀಡುವ ಬಗ್ಗೆ ಮಾತನಾಡಿದರು. ಇದರಿಂದ ಸ್ವಲ್ಪ ಗೊಂದಲವಾಯಿತು. ನಮ್ಮ ಪಕ್ಷಕ್ಕೆ ಬೇರೆ ಪಕ್ಷದಿಂದ ಬಂದ 17 ಶಾಸಕರಿಂದ ನಾನು ಇಂದು ಮುಖ್ಯಮಂತ್ರಿಯಾಗಿದ್ದೇನೆ. ಈ ಸಂದರ್ಭದಲ್ಲಿ ಎಲ್ಲವನ್ನೂ ಎದುರಿಸುವುದು ನನಗೆ ಅನಿವಾರ್ಯವಾಗಿದೆ. ಒಂದೊಂದು ಸಮುದಾಯವರೂ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟರೆ ಕಷ್ಟ ಆಗುತ್ತದೆ” ಎಂದರು.
ಹಾವೇರಿ: ಸ್ವಾಮೀಜಿಯಾದವರು ಸೌಜನ್ಯ ಮರೆತು ಮಾತನಾಡಬಾರದು. ಯಾರನ್ನೇ ಆಗಲಿ ಬೆದರಿಸುವ ತಂತ್ರ ಸಲ್ಲದು ಎಂದು ನಿಡುಮಾಮಿಡಿಯ ವೀರಭದ್ರಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯಿಸಿದರು. ತಾಲೂಕಿನ ನರಸೀಪುರದಲ್ಲಿ ಬುಧವಾರ ನಡೆದ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿ, ಹರಜಾತ್ರಾ ಮಹೋತ್ಸವದಲ್ಲಿ ವಚನಾನಂದ ಶ್ರೀಗಳು ಪಂಚಮಸಾಲಿ ಸಮುದಾಯವರಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದಿದ್ದು ಸರಿಯಲ್ಲ. ಮಠಾಧಿಧೀಶರು ಯಾವುದೇ ಪಕ್ಷದ ಮುಖ್ಯಮಂತ್ರಿಯಾದರೂ ಅವರನ್ನು ಬೆದರಿಸುವ ತಂತ್ರ ಮಾಡಬಾರದು. ಮುಖ್ಯಮಂತ್ರಿ ಎಂದರೆ ಅವರು ನಾಡಿನ ಆರು ಕೋಟಿ ಜನರ ಪ್ರತಿನಿಧಿ. ಸಂಖ್ಯಾ ಬಲದಿಂದ ಮುಖ್ಯಮಂತ್ರಿಯನ್ನು ಬೆದರಿಸುವುದು ತಪ್ಪು ಎಂದರು. ಯಡಿಯೂರಪ್ಪ ಅವರಿಗೆ ಮಾತೃ ಹೃದಯದ ಅಂತಃಕರಣವಿದೆ. ಅವರನ್ನು ಎಲ್ಲರೂ ಗೌರವಿಸಬೇಕು. ಅದನ್ನು ಬಿಟ್ಟು ಕೆಲ ಕಾರ್ಯಕ್ರಮದಲ್ಲಿ ಶ್ರೀಗಳನ್ನು ಎತ್ತರ ಸ್ಥಾನದಲ್ಲಿ ಕೂಡಿಸಿ, ಮುಖ್ಯಮಂತ್ರಿಯವರನ್ನು ಕಡಿಮೆ ಎತ್ತರದ ಕುರ್ಚಿಯಲ್ಲಿ ಕೂಡಿಸಲಾಗುತ್ತದೆ. ಎತ್ತರದ ಕುರ್ಚಿಯಲ್ಲಿ ಕುಳಿತರೆ ದೊಡ್ಡವರಾಗು ವುದಿಲ್ಲ. ಸಾರ್ವಜನಿಕರನ್ನೂ ಸಮಾನವಾಗಿ ಕಾಣಬೇಕು ಎಂದರು. ಯಡಿಯೂರಪ್ಪ ಅವರಿಂದ ಸಮಾಜ ಮೇಲೆತ್ತುವ ಕೆಲಸವಾಗಲಿ. ಕೆಲವರು ದುರುದ್ದೇಶದಿಂದ ತಪ್ಪು ಮಾಡಿಸಿ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಾರೆ. ಅಂಥ ವ್ಯಕ್ತಿಗಳನ್ನು ದೂರವಿಡಿ ಎಂದು ಬಿಎಸ್‌ವೈಗೆ ಸಲಹೆ ನೀಡಿದರು.
Related Articles
ಹುಬ್ಬಳ್ಳಿ: ಮುಖ್ಯಮಂತ್ರಿಗಳ ಹುದ್ದೆ ಸಾಕಷ್ಟು ಒತ್ತಡದ ಕಾರ್ಯ. ಆದರೆ, ನಿತ್ಯದ ಆಡಳಿತದಲ್ಲಿ ಯಾವುದೇ ಒತ್ತಡಗಳು ಮುಖ್ಯಮಂತ್ರಿಗಳಿಗಿಲ್ಲ. ಹರಿಹರದ ಕಾರ್ಯಕ್ರಮದಲ್ಲಿ ನಡೆದ ಘಟನೆಗೆ ಪೂರಕವಾಗಿ ಸಿಎಂ ಯಡಿಯೂರಪ್ಪ ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸ್ವಾಮೀಜಿಗಳು ಮನವಿ ಮಾಡಲಿ, ಬೆದರಿಸುವ ಕೆಲಸ ಬೇಡ ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, “ನಾನು ಹತ್ತು ತಿಂಗಳ ಕಾಲ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ.
Advertisement
ಬಹಳಷ್ಟು ಒತ್ತಡ ಎದುರಿಸಿದ್ದೇನೆ. ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇಡೀ ರಾಜ್ಯದ ಹಿತಾಸಕ್ತಿ ಕಾಪಾಡಬೇಕಾಗುತ್ತದೆ. ಹರಿಹರದ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು ಪ್ರಸ್ತಾಪಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ’ ಎಂದರು. ಯಡಿಯೂರಪ್ಪ ಅವರ ಪ್ರಯತ್ನದಿಂದ ಈ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅವರು ಮುಖ್ಯಮಂತ್ರಿಯಾಗಿದ್ದಾರೆ. ನಾವೆಲ್ಲಾ ಮಂತ್ರಿಗಳಾಗಿದ್ದೇವೆ. 17 ಶಾಸಕರ ತ್ಯಾಗದ ಫಲವಾಗಿ ರಾಜ್ಯದಲ್ಲಿ ಸದೃಢ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೀಗಾಗಿ, ಹೊಸದಾಗಿ ಬಂದವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು. ನಂತರ, ಉಳಿದವರಿಗೆ ಸ್ಥಾನಮಾನ ನೀಡುವುದು ನ್ಯಾಯ ಸಮ್ಮತ ಎಂದರು.
ತಪ್ಪು ಮಾತನಾಡಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿದಾವಣಗೆರೆ: “ನನ್ನ ಪ್ರಾಣ ಇರುವವರೆಗೆ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಸಂಘಟನೆ ಮಾಡುತ್ತೇನೆ. ಹರಜಾತ್ರೆಯ ಎರಡು ದಿನದ ಕಾರ್ಯಕ್ರಮದಲ್ಲಿ ಏನಾದರೂ ತಪ್ಪು ಮಾತನಾಡಿದ್ದರೆ ಮನೆಯ ಮಗನಾಗಿ ಹೊಟ್ಟೆಯಲ್ಲಿ ಹಾಕಿಕೊಳ್ಳಿ’ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಶ್ರೀ ವಚನಾನಂದ ಸ್ವಾಮೀಜಿ ಮನವಿ ಮಾಡಿದರು. ಬುಧವಾರ ಹರ ಜಾತ್ರಾ ಮಹೋತ್ಸವದ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ತಾವು ಹರಿಹರ ಪೀಠಕ್ಕೆ ಬಂದಿರುವುದೇ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಉಸಿರು ನೀಡುವುದಕ್ಕಾಗಿ. ಪ್ರಾಣ ಹೋದರೂ ಚಿಂತೆ ಇಲ್ಲ. ಸಮಾಜ ಸಂಘಟನೆ ಮಾಡುತ್ತೇನೆ ಎಂದರು. ಚುನಾವಣೆ ಗೆಲ್ಲಲು ಮಠ ಬೇಕು ನಂತರ ಬೇಡ ಅಂದ್ರೆ ಹೇಗೆ?
ಹರಿಹರ: ಚುನಾವಣೆಯಲ್ಲಿ ಗೆಲ್ಲಲು ಮಠ-ಸ್ವಾಮೀಜಿಗಳು ಬೇಕು. ಗೆದ್ದ ನಂತರ ಸಮಾಜದ ಬೇಡಿಕೆಗಳು, ಸ್ವಾಮೀಜಿಯವರ ಮಾತುಗಳು ಬೇಡ ಎಂದರೆ ಹೇಗೆ ಎಂದು ಮಾಜಿ ಸಚಿವ, ಶಾಸಕ ಡಿ.ಕೆ.ಶಿವಕುಮಾರ್ ಹೇಳಿದರು. ವೀರಶೈವ ಲಿಂಗಾಯತ ಪಂಚಮ ಸಾಲಿ ಜಗದ್ಗುರು ಪೀಠದ ದ್ವಾದಶ ಮಾನೋತ್ಸವ ಹಾಗೂ ಪಂಚಮ ಸಾಲಿ ಜಗದ್ಗುರು ವಚನಾನಂದ ಮಹಾಸ್ವಾಮಿಗಳ ದ್ವೀತಿಯ ಪೀಠಾರೋಹಣ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಅವರು, ಮಂಗಳವಾರ ಇದೇ ವೇದಿಕೆಯಲ್ಲಿ ಸಿಎಂ ಬಿಎಸ್‌ವೈ ಸಿಟ್ಟಿಗೆದ್ದದ್ದನ್ನು ಟೀಕಿಸಿದರು. ಚುನಾವಣೆ ಸಂದರ್ಭ ಮಠಗಳಿಗೆ ತೆರಳಿ ಶ್ರೀಗಳ ಪಾದಕ್ಕೆ ಬಿದ್ದು ಸಹಕಾರ ಮತ್ತು ಬೆಂಬಲಿಸುವಂತೆ ಕೋರುವವರು, ಸಮಾಜದ ಬೆಂಬಲ ಪಡೆದು ಅಧಿ ಕಾರಕ್ಕೆ ಬಂದವರು, ಸೌಜನ್ಯದಿಂದ ಅವರ ಅಹವಾಲುಗಳನ್ನು ಕೇಳುವುದು ಕರ್ತವ್ಯವಾಗುತ್ತದೆ. ಆದರೆ, ತಮ್ಮೆದುರು ಬೇಡಿಕೆ ಇಟ್ಟಿದ್ದೆ ತಪ್ಪು ಎಂದು ಭಾವಿಸಿದರೆ ಹೇಗೆ? ಅಧಿ ಕಾರದಲ್ಲಿದ್ದವರನ್ನು ಕೇಳದೆ ಸೋತವರನ್ನು ಕೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ರಾಜ್ಯವನ್ನಾಳುವ ಅರಸನಿಗೆ ಪ್ರಜೆಗಳ ಮತ್ತು ಸಮಾಜದ ಅಂಕು ಡೊಂಕನ್ನು ತಿದ್ದುವ ಕೆಲಸ ಮಾಡುವಂತ ಶ್ರೀಗಳ ಮಾತನ್ನು ಶಾಂತಿಯಿಂದ ಕೇಳುವ ವ್ಯವಧಾನ ಇರಬೇಕು ಎಂದು ಚಾಟಿ ಬೀಸಿದರು. ಶ್ರೀಗಳು ಸಮಾಜದ ಏಳ್ಗೆಗಾಗಿ ಬೇಡಿಕೆಗಳನ್ನು ಸಲ್ಲಿಸಿದಾಗ ಈ ರೀತಿಯ ಘಟನೆ ನಡೆಯುವುದು ಸಹಜ. ಆದರೆ, ತಾವು ಆತ್ಮಸ್ಥೈರ್ಯ ಕಳೆದುಕೊಳ್ಳುವುದು ಬೇಡ. ನಾವು ಸದಾ ನಿಮ್ಮ ಮತ್ತು ಪಂಚಮಸಾಲಿ ಸಮಾಜದೊಂದಿಗಿದ್ದೇವೆ ಎಂದರು.