Advertisement
ಕನ್ನಡದಲ್ಲಿ ಅದೆಷ್ಟೋ ಲವ್‌ಸ್ಟೋರಿ ಚಿತ್ರಗಳು ಬಂದಿವೆ. ಆ ಪೈಕಿ ಕಾಡುವ ಲವ್‌ಸ್ಟೋರಿ ಚಿತ್ರಗಳ ವರ್ಗವೇ ಇದೆ. ಈಗಿನ ಟ್ರೆಂಡ್‌ಗೆ ತಕ್ಕಂತಹ ಲವ್‌ಸ್ಟೋರಿ ಸಿನಿಮಾಗಳ ಸಾಲಿನಲ್ಲಿ ಕಾಣಿಸಿಕೊಳ್ಳುವ ಚಿತ್ರವಿದು ಎಂಬುದನ್ನು ಹೇಳಲ್ಲಡ್ಡಿಯಿಲ್ಲ. ಈಗಿನ ಹೊಡಿ, ಬಡಿ, ಕಡಿ, ಸಿನಿಮಾಗಳ ನಡುವೆ, ಮುದ್ದಾದ ಪ್ರೀತಿ ಕಥೆಯಲ್ಲಿ ಹಾಸ್ಯದ ಹೊನಲಷ್ಟೇ ಅಲ್ಲ, ಪ್ರೀತಿಯೊಳಗಿನ ಭಾವನೆ, ಭಾವುಕತೆ, ಧನ್ಯತೆ ಎಲ್ಲವೂ ಮೇಳೈಸಿದೆ.
Related Articles
Advertisement
ಇಲ್ಲಿ ಸ್ಕೂಲ್ ಡೇಸ್‌ನ ಮುಗ್ಧ ಲವ್ ಇದೆ, ಕಾಲೇಜ್ ಡೇಸ್ ಲವ್‌ಸ್ಟೋರಿಯೂ ಇದೆ. ಮದ್ವೆ ಬಳಿಕ ಮಾಡುವ ಲವ್ ಕೂಡ ಇದೆ. ಸಿನಿಮಾ ನೋಡೋರಿಗೆ ತಮ್ಮ ಹಳೆಯ ಲವ್‌ಸ್ಟೋರಿಗಳು ರೀ ಓಪನ್ ಆದರೂ ಅಚ್ಚರಿ ಇಲ್ಲ. ಅಷ್ಟೇ ಅಲ್ಲ, ತಮ್ಮ ಹೆಂಡತಿಯನ್ನೂ ಹೀಗೆ ಪ್ರೀತಿಸಬೇಕು ಎಂಬ ಆಸೆ ಹುಟ್ಟುವ ಅಂಶವೂ ಇದೆ. ಕೆಲ ದೃಶ್ಯ ಅನಗತ್ಯವಾಗಿದ್ದರೂ, ಹಿನ್ನೆಲೆ ಸಂಗೀತ, ಸಂಭಾಷಣೆ ಹೇಗೋ ತೂಗಿಸಿಕೊಂಡು ಹೋಗುತ್ತದೆ. ಒಟ್ಟಾರೆ, ಒಂದು ಕ್ಯೂಟ್ ಲವ್‌ಸ್ಟೋರಿಯನ್ನು ವಿವಿಧ ಹಂತಗಳಲ್ಲಿ ಹೇಗೆಲ್ಲಾ ತೋರಿಸಬಹುದು,
ವಾಸ್ತವದಲ್ಲಿ ಹೀಗೂ ಇದೆ ಎಂಬ ಸತ್ಯ ಹೇಳುತ್ತಲೇ, ಕೊನೆಯ ಇಪ್ಪತ್ತು ನಿಮಿಷ ನೋಡುಗರನ್ನು ಭಾವುಕತೆಗೆ ಕರೆದೊಯ್ಯುತ್ತೆ. ಇಲ್ಲಿ ಪ್ರತಿಯೊಬ್ಬರೂ ಒಳ್ಳೇ ಸ್ಕೋರ್ ಮಾಡುವ ಮೂಲಕ ನೋಡುಗರನ್ನು ಹಾಗೊಮ್ಮೆ ಭಾವುಕರನ್ನಾಗಿಸುವಲ್ಲಿ ಯಶಸ್ವಿ. ಸಣ್ಣಪುಟ್ಟ ದೋಷ ಕಂಡುಬಂದರೂ, ಮೊದಲ ನಿರ್ದೇಶನವಾದ್ದರಿಂದ ಅದನ್ನು ಬದಿಗೊತ್ತಿ “ಲವ್’ ಮಾಕ್ಟೇಲ್ ಸವಿಯಲ್ಲಡ್ಡಿಯಿಲ್ಲ. ಆದಿಗೆ ಶಾಲಾ ದಿನದಲ್ಲೊಂದು ಪ್ರೀತಿ ಹುಟ್ಟುತ್ತೆ. ಕಾಲೇಜ್ ಡೇಸ್‌ನಲ್ಲೂ ಲವ್ ಆಗುತ್ತೆ. ಆ ಪ್ರೀತಿ ಉಳಿಯುತ್ತಾ? ಕೊನೆಗೆ ಮದ್ವೆ ಆಗುವ ಅವನು ಪ್ರೀತಿಸಿದ ಹುಡುಗಿಯನೇ ಕೈ ಹಿಡಿತಾನಾ?
ಈ ಬಗ್ಗೆ ಕುತೂಹಲವಿದ್ದರೆ, ಸಿನಿಮಾ ನೋಡಬಹುದು. “ಡಾರ್ಲಿಂಗ್’ ಕೃಷ್ಣ ನಟನೆಯಲ್ಲಿ ಎಂದಿಗಿಂತ ಪಕ್ವ. ಎರಡು ಹಂತದ ಲವ್ವರ್ ಬಾಯ್ ಆಗಿ ಇಷ್ಟವಾಗುತ್ತಾರೆ. ಮಿಲನಾ ನಾಗರಾಜ್ ಪಾತ್ರದ ಮೂಲಕ ಕಾಡುತ್ತಾರೆ. ಅಲ್ಲಲ್ಲಿ ಭಾವುಕತೆ ಹೆಚ್ಚಿಸುತ್ತಾರೆ. ಉಳಿದಂತೆ ಅಮೃತಾ, ರಚನಾ, ಅಭಿ ಒಳ್ಳೆಯ ಸ್ಕೋರ್ ಮಾಡಿದ್ದಾರೆ. ರಘುದೀಕ್ಷಿತ್ ಅವರ ಹಾಡು ಹಾಗು ಹಿನ್ನೆಲೆ ಸಂಗೀತ ಜೀವಾಳ. ಕ್ರೇಜಿ ಮೈಂಡ್ಸ್ ಅವರ ಕ್ಯಾಮೆರಾ ಕೈಚಳಕ “ಮಾಕ್ಟೇಲ್’ ಡ್ರಿಂಕ್ ಸವಿದಷ್ಟೇ ಅಂದವೆನಿಸಿದೆ.
ಚಿತ್ರ: ಲವ್ ಮಾಕ್ಟೇಲ್ನಿರ್ಮಾಣ: ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್
ನಿರ್ದೇಶನ: ಡಾರ್ಲಿಂಗ್ ಕೃಷ್ಣ
ತಾರಾಗಣ: ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್, ಅಮೃತಾ ಅಯ್ಯಂಗಾರ್, ರಚನಾ, ಅಭಿ ಇತರರು. * ವಿಜಯ್ ಭರಮಸಾಗರ