Advertisement
ಮಾತೇ ಭಾಷೆ. ಭಾಷೆಯ ಹಿಂದೆ ಒಂದು ಪ್ರಮುಖಾಂಶವಿದೆ. ಅದುವೇ “ಭಾವ’. ಭಾವವು ಚಿತ್ತವೃತ್ತಿಯಾಗಿದೆ. ಅಂತರಂಗವೇ ಅದರ “ರಂಗ’. ಭಾವವು ಚಿಗುರೊಡೆ ಯುವುದು ಮನಸ್ಸಿನಲ್ಲೇ. ಆದ ಕಾರಣ ಅದು ಮನೋಭಾವ. ಮನೋಭಾವದ ಬಹಿರಂಗ ಪ್ರಕಟನವೇ ಭಾಷೆ. ಯಾವುದೇ ಒಂದು ಒತ್ತಡವಿಲ್ಲದೆ ವಿಶ್ವದ ಯಾವ ಕಾರ್ಯವೂ ನಡೆಯದು. ಬಾಹ್ಯಾಭ್ಯಂತರ ಪ್ರಚೋದನೆಯಿಲ್ಲದೆ ಯಾವ ಜೀವಿಯೂ ಕಾರ್ಯಪ್ರವೃತ್ತವಾಗದು. ಭಾಷೆಯೂ ಅದಕ್ಕೆ ಹೊಸತಲ್ಲ. ಅದು ಬಾಹ್ಯ ಪ್ರೇರಣೆ ಯಿಂದ, ಅಂತರಿಂದ್ರಿಯಗಳಾದ ಮನಸ್ಸು ಮತ್ತು ಬುದ್ಧಿಗಳ ಪ್ರಚೋದನೆಯಿಂದ, ಅಂತರ್ ಅಂಗಗಳಾದ ನಾಭಿ, ಗಂಟಲು, ನಾಲಗೆ, ದವಡೆ, ಹಲ್ಲು ಮತ್ತು ತುಟಿಗಳ ಸಹಾಯದಿಂದ ಉಚ್ಚಾರಣೆಯ ಮೂಲಕ ಹೊರಹೊಮ್ಮುವಂಥದ್ದು. ವಿವಿಧ ಧ್ವನಿ- ಶಬ್ದಗಳ ವ್ಯವಸ್ಥಿತ ಜೋಡಣೆ ಮತ್ತು ಉಚ್ಚಾ ರಣ ಪ್ರಯೋಗವೇ ಈ “ಮಾತು’. ಮಾತಿನ ಹಿಂದಿನ ಶಕ್ತಿ, ಸ್ಮತಿ. ಸ್ಮತಿಯ ಹಿಂದಿನ ಶಕ್ತಿ ಮೆದುಳು. ಇದೊಂದು ಅದ್ಭುತ ವ್ಯವಸ್ಥೆ.
Related Articles
ಭಾಷೆಯ ಹಿಂದೆ “ಅನುಕರಣಾ ತತ್ತÌ’ವಿದೆ. ಭಾಷೆಯು ಅನುಕರಣೆಯಿಂದಲೇ ಸಿದ್ಧಿಸು ವುದಾದರೂ ಎಲ್ಲರೂ ಎಲ್ಲ ಭಾಷೆಗಳನ್ನು ಯಥಾವತ್ತಾಗಿ ಅನುಕರಿಸಲಾರರು. ಏಕೆಂದರೆ, ಭಾಷೆ ಜನ್ಮ ತಾಳಿದ್ದು ನಿಸರ್ಗದ ಮಡಿಲಲ್ಲಿ; ಅದಕ್ಕೊಂದು ಸಂಸ್ಕಾರವಿದೆ, ಸಂಸ್ಕೃತಿಯಿದೆ. ಪರಿಸರ ಸಂಬಂಧಿ, ಸಂಸ್ಕಾರ – ಸಂಬಂಧಿ, ಸಾಂಸ್ಕೃ ತಿಕ ಸಂಬಂಧಿ ವೈವಿಧ್ಯ ತೆಯಿಂದಾಗಿ ಎಲ್ಲರಿಂದಲೂ ಎಲ್ಲ ಭಾಷೆಗಳ ಉಚ್ಚಾರ, ಭಾಷಾ ಪ್ರೌಢಿಮೆಯ ಸಂಪಾದನೆ ಅಸಾಧ್ಯ. ಏಕೆಂದರೆ, ಈ ನಿಸರ್ಗದ ಪ್ರತಿ ಯೊಂದಕ್ಕೂ ಒಂದು ಮಿತಿಯಿದೆ. ಜೀವನ ಪದ್ಧತಿಗೂ ಭಾಷೆಗೂ ಪರಸ್ಪರ ಸಂಬಂಧವಿದೆ. ದುಡಿಮೆ-ವಿಶ್ರಾಂತಿ, ಆಹಾರ-ವಿಹಾರ ಇತ್ಯಾದಿಗಳು ದೇಶದಿಂದ ದೇಶಕ್ಕೆ ಬದಲಾ ಗುತ್ತವೆ. (ದೇಶ – ಸ್ಥಳ) ಮನುಷ್ಯನ ಸ್ವಭಾವ – ಅನುಭವಗಳೂ ಕೂಡ ಅಂತೆಯೇ ಅದಕ್ಕ ನುಗುಣವಾಗಿ ಆತನ ಉಚ್ಚಾರಣೆಯಿರುತ್ತದೆ. ನಮ್ಮ ದೇಶೀ ಭಾಷೆಗಳಲ್ಲೇ ಎಷ್ಟೊಂದು ವೈವಿಧ್ಯತೆಯಿದೆ! ಅವುಗಳ ಉಚ್ಚಾರಣೆಯಲ್ಲಿ ಅದೆಷ್ಟು ವ್ಯತ್ಯಾಸವಿದೆ! ಕನ್ನಡದಂತೆ ಮಲೆ ಯಾಳವಿಲ್ಲ ! ತಮಿಳಿನಂತೆ ಗುಜರಾತಿಯಿಲ್ಲ ! ಸಂಸ್ಕೃತ ಮತ್ತು ಹಿಂದಿಯ ಲಿಪಿಗಳು ಒಂದೇ ಆಗಿದ್ದರೂ, ಉಚ್ಚಾರಣೆ ಮತ್ತು ಬಳಕೆ ಯಲ್ಲಿ ಬಹಳ ವ್ಯತ್ಯಾಸವಿದೆ.
Advertisement
ಅತ್ಯಂತ ಪ್ರಭಾವೀ ಅಂತಾರಾಷ್ಟ್ರೀಯ ಭಾಷೆಯಾದ ಇಂಗ್ಲಿಷ್‌ನ ಜಾಯಮಾನವೇ ಬೇರೆ. ಅದನ್ನು ಅದರ ಜಾಡಿನಲ್ಲಿಯೇ ಬಳಸಬೇಕೇ ವಿನಾ ಇತರ ಭಾಷೆಗಳಂತೆ ಬಳಸಿದರೆ ಅದು ಭಾವನಾಹೀನವಾಗಿ, ಅರ್ಥಹೀನವಾಗಿ ಬಿಡ ಬಹುದು. ನಾವು ಕನ್ನಡಿಗರು ಇಂಗ್ಲಿಷನ್ನು ಅವರಂತೆಯೇ ಉಚ್ಚರಿಸಲಾರೆವು; ಉಚ್ಚರಿ ಸಿದರೂ ಅವರಂತೆ ಬಳಸಲಾರೆವು – ಬರೆಯ ಲಾರೆವು. ಬಳಸಿದರೂ ಬರೆದರೂ ಅವರಂ ತೆಯೇ ಭಾವ ಪ್ರಕಟಿಸಲಾರೆವು. ಏಕೆಂದರೆ, ಯಾವುದೇ ಭಾಷೆಗೆ ಅದರದ್ದೇ ಆದ ಒಂದು ಸ್ವರೂಪವಿದೆ, ಸ್ವಭಾವವಿದೆ, ಶುದ್ಧಿಯಿದೆ. ಭಾಷಾ ಶುದ್ಧಿಯಿಂದಲೇ ಭಾವ ಶುದ್ಧಿ. ಭಾವಶುದ್ಧಿಗೆ ಭಾಷಾಸಿದ್ಧಿಯಿರಬೇಕು. ಭಾಷಾ ಸಿದ್ಧಿಯ ಹಿಂದೆ ಪ್ರಕೃತಿಯ ಕೊಡು ಗೆಯಿದೆ; ಮನುಷ್ಯ ಪ್ರಯತ್ನವಿದೆ; ಬದುಕೇ ಇದೆ.ಆದ ಕಾರಣ, ಭಾವ-ಭಾಷೆ-ಬದುಕು ಒಂದನ್ನೊಂದು ಬಿಟ್ಟಿಲ್ಲ. ಹೇಗಿದ್ದರೂ ಕೆಲವ ರಿಗೆ ಸ್ವಭಾಷೆಯ ಮೇಲೆ ಅಭಿಮಾನ; ಪರ ಭಾಷೆಯ ಕುರಿತು ಅತ್ಯಭಿಮಾನ, ತಿರಸ್ಕಾರ; ಸ್ವಭಾಷೆಯ ಕುರಿತು ಕೀಳರಿಮೆ; ಇವು ಅತಿರೇಕವೇ ಸರಿ.
ಭಾಷಾಸಕ್ತರು ಸ್ವಭಾಷೆ ಯನ್ನೂ, ಅನ್ಯಭಾಷೆಗಳನ್ನೂ ಅಭ್ಯಾಸ ಮಾಡುವುದೋ, ತುಲನಾತ್ಮಕವಾಗಿ ವಿಮರ್ಶಿಸುವುದೋ ಮಾಡಬಹುದು. ಆದರೆ, ಭಾಷೆಗಳ ಕುರಿತಾದ ಮೇಲರಿಮೆ – ಕೀಳರಿಮೆಗಳು ಯೋಗ್ಯವಲ್ಲ. ಏಕೆಂದರೆ, ಭಾಷೆಯು ಮನುಷ್ಯನಿಗೆ ನಿಸರ್ಗವಿತ್ತ ಪ್ರಸಾದ. ಅದು ಸಂಘರ್ಷಕ್ಕಲ್ಲ! ಸಾಂಗತ್ಯಕ್ಕೆ; ಶ್ರೇಷ್ಠ – ಕನಿಷ್ಠವೆಂಬ ಭಾವಕ್ಕಲ್ಲ! ಮನುಷ್ಯನ ಶ್ರೇಯೋಭಿವೃದ್ಧಿಗೆ. ಕನ್ನಡ ಸಾಹಿತ್ಯದ ಮೇರು ಪ್ರತಿಭೆ ಡಾ| ಕೆ. ಶಿವರಾಮ ಕಾರಂತರು ತಮ್ಮ “ಬಾಳ್ವೆಯೇ ಬೆಳಕು’ ಕೃತಿ ಯಲ್ಲಿ ಹೀಗಂದಿದ್ದಾರೆ: “ಕಣ್ಣಿಗೆ ಕಾಣಿಸದಂಥ ಬರಹ, ಕಿವಿಗೆ ಕೇಳಿಸದಂಥ ಮಾತು, ನಿಸರ್ಗದ ನೋಟದಲ್ಲಿ ಅಡಕವಾಗಿವೆ. ಅವು ಗಳೇ ತನ್ನ ಹಿಮ್ಮೇಳ, ತನ್ನ ಜೀವನಕ್ಕೆ ಅವೇ ಹಿನ್ನೆಲೆ – ಎಂದು ತಿಳಿಯಬಲ್ಲ ವ್ಯಕ್ತಿಗೆ ನಿಸರ್ಗ ತಿಳಿಸುವಷ್ಟು ಸತ್ಯ, ಸೊಗಸುಗಳು ಇನ್ನಾವುದರಿಂದಲೂ ದೊರೆಯಲಾರವು’. ಆದುದರಿಂದ ಭಾಷೆ ಯಾವುದಾದರೇನು ? ಭಾವವೇ ಮುಖ್ಯ. “ನಿಸರ್ಗ ಭಾಷೆ’ಯ ಮುಂದೆ ಮಾನವನ ಭಾಷೆ ಯಾವ ಲೆಕ್ಕ? ಬದುಕಿಗಾಗಿ ಭಾಷೆ; ಭಾಷೆಗಾಗಿ ಬದುಕಲ್ಲ – ಎಂಬ ಈ ಭಾವವೇ ಶ್ರೇಷ್ಠ .
ಜಯಪ್ರಕಾಶ್ ಎ. ನಾಕೂರು