Advertisement

4 ತಿಂಗಳುಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ; ಎಮ್ಮೆಕೆರೆ ಈಜುಕೊಳ ಸಂಕೀರ್ಣ

04:08 PM Nov 22, 2022 | Team Udayavani |

ಮಹಾನಗರ: ನಗರದ ಎಮ್ಮೆಕರೆ ಯಲ್ಲಿ ಸ್ಮಾರ್ಟ್‌ ಸಿಟಿ ವತಿ ಯಿಂದ ಕೈಗೊಳ್ಳಲಾಗುತ್ತಿರುವ ಒಲಿಂಪಿಕ್‌ ದರ್ಜೆಯ ಈಜುಕೊಳ ಸಂಕೀರ್ಣದ ನಿರ್ಮಾಣ ಕಾಮ ಗಾರಿ ಶೇ. 80ರಷ್ಟು ಪೂರ್ಣಗೊಂಡಿದ್ದು, ಇನ್ನು ನಾಲ್ಕು ತಿಂಗಳುಗಳೊಳಗೆ ಕಾಮಗಾರಿ ಮುಗಿಸಿ, ಲೋಕಾ ರ್ಪಣೆಗೊಳಿಸುವ ಗುರಿ ಹೊಂದಲಾಗಿದೆ.

Advertisement

ನಗದಲ್ಲಿ ಪ್ರಸ್ತುತ ಪಾಲಿಕೆಯ ಮಂಗಳಾ ಈಜುಕೊಳ, ಸಂತ ಅಲೋಶಿಯಸ್‌ ಶಿಕ್ಷಣ ಸಂಸ್ಥೆಯ ಈಜುಕೊಳ ಹೆಚ್ಚಾಗಿ ಸ್ಪರ್ಧಾತ್ಮಕ ಈಜು ತರಬೇತಿ, ಸ್ಪರ್ಧೆಗಳಿಗೆ ಬಳಕೆಯಾಗುತ್ತಿವೆ.

ಸ್ಮಾರ್ಟ್‌ ಸಿಟಿಯಿಂದ ನಿರ್ಮಾಣವಾಗುತ್ತಿರುವ ಈಜುಕೊಳ ಈ ಸಾಲಿಗೆ ಹೊಸ ಸೇರ್ಪಡೆಯಾಗಲಿದ್ದು, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ ಆಯೋಜನೆ ಮತ್ತು ತರಬೇತಿ ಉದ್ದೇಶದಿಂದ ಸ್ವಿಮ್ಮಿಂಗ್‌ ಪೂಲ್‌ ಸಿದ್ಧಗೊಳ್ಳುತ್ತಿದೆ. ಕರಾವಳಿ ಭಾಗದ ಸ್ಪರ್ಧಿಗಳು ರಾಷ್ಟ್ರೀಯ -ಅಂತಾರಾಷ್ಟ್ರೀಯ ಸ್ಪರ್ಧೆ ಗಳಲ್ಲಿ ಭಾಗವಹಿಸಲು ತರಬೇತಿಗೆ ದುಬಾರಿ ಹಣವೆಚ್ಚ ಮಾಡಿ ಇತರೆಡೆಗೆ ಹೋಗ ಬೇಕಾದ ಪರಿಸ್ಥಿತಿ ಇತ್ತು. ಒಲಿಂಪಿಕ್‌ ದರ್ಜೆ ಈಜು ಕೊಳ ಇಲ್ಲಿಯೇ ನಿರ್ಮಾಣವಾಗುತ್ತಿರುವುದು ಸ್ಪರ್ಧಿಗಳಿಗೆ ಹೊಸ ಹುಮ್ಮಸ್ಸು ನೀಡಿದೆ.

ಸ್ಟ್ರಕ್ಚರ್‌ ಪೂರ್ಣ

ಈಜುಕೊಳದ ಕಟ್ಟಡ (ಸ್ಟ್ರಕ್ಚರ್‌) ಪೂರ್ಣಗೊಂಡಿದ್ದು, ಪ್ರಸ್ತುತ ರೂಫಿಂಗ್‌ ಮತ್ತು ಈಜುಕೊಳದ ನೆಲಕ್ಕೆ ಟೈಲ್ಸ್‌ ಅಳವಡಿಸುವ ಕೆಲಸಗಳು ನಡೆಯುತ್ತಿದೆ. ಕಟ್ಟಡವನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಒಟ್ಟು 24.94 ಕೋ. ರೂ. ವೆಚ್ಚದ ಯೋಜನೆಯಾಗಿದ್ದು, ಈ ಸಂಕೀರ್ಣದಲ್ಲಿ ಒಟ್ಟು 3 ಕೊಳಗಳು ಇರಲಿವೆ. ಒಂದು ಸ್ಪರ್ಧೆಯ ಉದ್ದೇಶ ಕ್ಕಾದರೆ ಉಳಿದೆರಡು ಅಭ್ಯಾಸ ಕೊಳ, ಮಕ್ಕಳಿಗಾಗಿ ಇರುವ ಸಣ್ಣ ಕೊಳ.

Advertisement

ಇದರ ಜತೆಗೆ ಪ್ರಥಮ ಚಿಕಿತ್ಸಾ ಕೊಠಡಿ, ಆ್ಯಂಟಿ ಡೂಪಿಂಗ್‌, ತೀರ್ಪುಗಾರರ ಕೊಠಡಿ, ಅಧಿಕಾರಿಗಳ ಕೊಠಡಿ, ಫಿಸಿಯೋಥೆರಪಿ, ರೆಕಾರ್ಡ್‌ ರೂಮ್‌, ಶೌಚಾಲಯ, ಶವರ್‌ ರೂಂ, ಫಿಲ್ಟರೇಶನ್‌ ಪ್ಲ್ಯಾಂಟ್‌, ಪಂಪ್‌ರೂಂ ಕಟ್ಟಡದಲ್ಲಿ ಇರಲಿದೆ. ತಳ ಅಂತಸ್ತಿನಲ್ಲಿ ಕಾರು, ದ್ವಿಚಕ್ರ ವಾಹನ ನಿಲುಗಡೆಗೆ ಸ್ಥಳಾವಕಾಶ ನಿಗದಿ ಪಡಿಸಲಾಗಿದೆ.

ಮೈದಾನವೂ ಅಭಿವೃದ್ಧಿ

ಈಜುಕೊಳ ಸಂಕೀರ್ಣದ ಪಕ್ಕದಲ್ಲೇ ಇರುವ ಎಮ್ಮೆಕರೆ ಮೈದಾನ ಈ ಭಾಗದ ಪ್ರಮುಖ ಮೈದಾನವಾಗಿದ್ದು, ಈಜುಕೊಳದ ಕಾಮಗಾರಿ ಮುಗಿದ ಬಳಿಕ ಇದರ ಅಭಿವೃದ್ಧಿಗೆ ಚಾಲನೆ ದೊರೆಯಲಿದೆ. ಮಣ್ಣು ಹಾಕಿ ಸಮತಟ್ಟು ಮಾಡುವುದು, ಗ್ಯಾಲರಿ ನಿರ್ಮಿಸಿ ಪ್ರೇಕ್ಷಕರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡುವುದು ಸೇರಿದೆ ಎನ್ನುತ್ತಾರೆ ಅಧಿಕಾರಿಗಳು. ಸದ್ಯ ಈಜುಕೊಳ ಕಾಮಗಾರಿ ನಡೆಯುತ್ತಿರುವುದರಿಂದ ಮೈದಾನದಲ್ಲಿ ಮರಳು, ಜಲ್ಲಿ, ಕಲ್ಲು, ಮೊದಲಾದವುಗಳನ್ನು ಇಟ್ಟು ಸಮಸ್ಯೆಯಾಗುತ್ತಿದೆ ಎನ್ನುವುದು ಸ್ಥಳೀಯವಾಗಿ ಆಟವಾಡುವವರ ಮಾತು.

ಶೇ.80 ರಷ್ಟು ಪೂರ್ಣ: ಎಮ್ಮೆ ಕೆರೆ ಈಜುಕೊಳದ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದ್ದು, 2023ರ ಮಾರ್ಚ್‌ ವೇಳೆಗೆ ಪೂರ್ಣಗೊಂಡು ಉದ್ಘಾಟನೆಯಾಗಲಿದೆ. ರೂಫಿಂಗ್‌, ಪೂಲ್‌ ಟೈಲಿಂಗ್‌ ಕೆಲಸಗಳು ನಡೆಯುತ್ತಿದೆ. –ಅರುಣ್‌ ಪ್ರಭ ಕೆ.ಎಸ್‌., ಜನರಲ್‌ ಮ್ಯಾನೇಜರ್‌, ಸ್ಮಾರ್ಟ್‌ ಸಿಟಿ ಲಿ.

Advertisement

Udayavani is now on Telegram. Click here to join our channel and stay updated with the latest news.

Next