Advertisement
ಶುಕ್ರವಾರ ಬೆಳಗ್ಗೆ ಮುಂಬಯಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಎಪ್ರಿಲ್ ಮೊದಲ ವಾರ ನಡೆಯಬೇಕಾಗಿದ್ದ ಆರ್‌ಬಿಐ ದ್ವೆ„ಮಾಸಿಕ ಹಣಕಾಸು ಸಮಿತಿ ಸಭೆಯನ್ನು ಈಗಲೇ ನಡೆಸಿರುವ ಅವರು, ರೆಪೊ ಮತ್ತು ರಿವರ್ಸ್ ರೆಪೊ ದರವನ್ನು ಕಡಿತ ಮಾಡಿದ್ದಾರೆ.
ಆರ್‌ಬಿಐ ಹಣಕಾಸು ಪರಾಮರ್ಶೆ ಸಮಿತಿಯ ಪ್ರಮುಖ ನಿರ್ಧಾರವಿದು. 75 ಮೂಲಾಂಶಗಳಷ್ಟು ರೆಪೊ ದರ ಕಡಿತ ಮಾಡಲಾಗಿದೆ. ಈ ಮೊದಲು ಶೇ.5.15ರಷ್ಟಿದ್ದ ರೆಪೊ ದರ ಈಗ ಶೇ.4.4ಕ್ಕೆ ಇಳಿಕೆಯಾಗಿದೆ. ಗೃಹ ಮತ್ತು ವಾಹನ ಸಾಲಗಳ ಮೇಲಿನ ಬಡ್ಡಿ ದರ ಇಳಿಕೆಯಾಗಲಿದ್ದು , ಇದರ ಪ್ರಯೋಜನ ಗೃಹ ಮತ್ತು ವಾಹನ ಸಾಲಗಾರರಿಗೆ ಸಿಗಲಿದೆ. ಹಾಗೆಯೇ ರೆಪೊ ದರವನ್ನೂ 90 ಮೂಲಾಂಶಗಳಷ್ಟು ಇಳಿಕೆ ಮಾಡಲಾಗಿದೆ. ಇದು ಹಾಲಿ ಶೇ.4ಕ್ಕೆ ಬಂದು ನಿಂತಿದೆ. ರಿವರ್ಸ್ ರೆಪೊ ಕಡಿತ ಮಾಡಿರುವುದರಿಂದ ಆರ್‌ಬಿಐಯಿಂದ ಬ್ಯಾಂಕುಗಳಿಗೆ ಸಿಗಬೇಕಾಗಿರುವ ಸಾಲದ ಮೇಲಿನ ಬಡ್ಡಿಯೂ ಇಳಿಕೆಯಾಗಿ ಹಣದ ಹರಿವು ಹೆಚ್ಚಲಿದೆ. ನಗದು ಮೀಸಲು ದರ (ಸಿಆರ್‌ಆರ್)ವನ್ನೂ 100 ಮೂಲಾಂಶಗಳಷ್ಟು ಕಡಿತ ಮಾಡಲಾಗಿದ್ದು, ಈ ದರ ಶೇ.3ಕ್ಕೆ ಬಂದು ತಲುಪಿದೆ. ಈ ಎಲ್ಲ ಕ್ರಮಗಳ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಗೆ 3.74 ಲಕ್ಷ ಕೋಟಿ ರೂ.ಗಳಷ್ಟು ಬಂಡವಾಳ ಹರಿದು ಬರುವಂತೆ ನೋಡಿಕೊಳ್ಳಲಾಗಿದೆ.
Related Articles
ಇಡೀ ದೇಶವೇ ಲಾಕ್ ಡೌನ್ ಆಗಿರುವುದರಿಂದ ಮುಂದಿನ ಮೂರು ತಿಂಗಳು ಜನರ ಜೀವನ ಕಷ್ಟವಾಗುವ ಸಂಭವವಿದೆ. ಹೀಗಾಗಿ ಆರ್‌ಬಿಐ ಎಲ್ಲ ರೀತಿಯ ಸಾಲಗಳ ಮೇಲಿನ ಇಎಂಐ ಅನ್ನು 3 ತಿಂಗಳುಗಳ ಕಾಲ ಮುಂದೂಡುವಂತೆ ಹೇಳಿದೆ. ಈ ಸಂಬಂಧ ವಾಣಿಜ್ಯ ಬ್ಯಾಂಕುಗಳು, ಪ್ರಾದೇಶಿಕ ಬ್ಯಾಂಕುಗಳು, ಪುಟ್ಟ ಹಣಕಾಸು ಸಂಸ್ಥೆಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ವಸತಿ ಹಣಕಾಸು ಸಂಸ್ಥೆಗಳಿಗೆ ಸೂಚಿಸಲಾಗಿದೆ.
Advertisement
ಹಾಗೆಯೇ ಕೈಗಾರಿಕೆಗಳ ವರ್ಕಿಂಗ್ ಕ್ಯಾಪಿಟಲ್ ಸೌಲಭ್ಯದಡಿ ನೀಡಲಾಗಿರುವ ಕ್ಯಾಶ್ ಕ್ರೆಡಿಟ್/ ಓವರ್ ಡ್ರಾ´r…ಗಳ ಕಂತನ್ನೂ 3 ತಿಂಗಳು ಮುಂದೂಡಬೇಕು ಇದನ್ನು ಬಾಕಿ ಎಂದು ಪರಿಗಣಿಸಬಾರದು ಎಂದೂ ಹೇಳಿದೆ.
ಈ ಎಲ್ಲ ರೀತಿಯ ಇಎಂಐಗಳನ್ನು ಮುಂದೂಡ ಬೇಕೇ ವಿನಾ ಬಾಕಿ ಉಳಿದಿದೆ ಎಂದು ತೋರಿಸಬಾರದು. ಈ ಸಂಬಂಧ ಕ್ರೆಡಿಟ್ ಅಸೆಸ್‌ಮೆಂಟ್ ಕಂಪೆನಿಗಳಿಗೆ ಸೂಕ್ತ ಮಾಹಿತಿ ನೀಡಬೇಕು ಎಂದೂ ಶಕ್ತಿಕಾಂತ್ ದಾಸ್ ಅವರು ಬ್ಯಾಂಕುಗಳಿಗೆ ಸೂಚಿಸಿದ್ದಾರೆ.
ಯಾವ ಯಾವ ಸಾಲಗಳಿಗೆ ಅನ್ವಯ?ಗೃಹ ಸಾಲ, ವಾಹನಗಳ ಮೇಲಿನ ಸಾಲ, ವೈಯಕ್ತಿಕ ಸಾಲ, ಶೈಕ್ಷಣಿಕ ಸಾಲ ಸಹಿತ ಕಂತಿನ ಮೇಲೆ ಪಡೆದಿರುವ ಬೇರಾವುದೇ ಸಾಲ. ಇದು ಕ್ರೆಡಿಟ್ ಕಾರ್ಡ್ ಗಳಿಗೂ ಅನ್ವ ಯವಾಗುವುದೇ ಎಂಬ ಬಗ್ಗೆ ಗೊಂದಲಗಳಿದ್ದವು. ಈ ಬಗ್ಗೆ ಸ್ವತಃ ಆರ್‌ಬಿಐ ಸ್ಪಷ್ಟನೆ ನೀಡಿದ್ದು, ಕ್ರೆಡಿಟ್ ಕಾರ್ಡ್ ಬಾಕಿಯೂ ಈ ಮೂರು ತಿಂಗಳ ಮಟ್ಟಿಗೆ ಮುಂದೂಡಿಕೆಯಾಗಲಿದೆ ಎಂದಿದೆ. ಮೂರು ತಿಂಗಳ ಮುಂಗಡ ಪಿಂಚಣಿ
ಹಿರಿಯ ನಾಗರಿಕರು, ವಿಧವೆಯರು ಮತ್ತು ದಿವ್ಯಾಂಗರಿಗೆ ಎಪ್ರಿಲ್ ಮೊದಲ ವಾರವೇ ಮೂರು ತಿಂಗಳ ಪಿಂಚಣಿ ಕೊಡಲಾಗುವುದು ಎಂದು ಕೇಂದ್ರ ಸರಕಾರ ಹೇಳಿದೆ. ಕೋವಿಡ್ 19 ಭೀತಿ ಆವರಿಸಿರುವುದರಿಂದ ಮುಂಗಡವಾಗಿಯೇ ಪಿಂಚಣಿ ನೀಡಲಾಗುವುದು. ಇದರಿಂದಾಗಿ ಅವರಿಗೆ ಸಹಾಯವಾಗುತ್ತದೆ ಎಂದು ಸರಕಾರ ತಿಳಿಸಿದೆ. ಇದು ದೇಶದ ಸುಮಾರು 2.98 ಕೋಟಿ ಪಿಂಚಣಿದಾರರ ಬ್ಯಾಂಕ್ ಅಕೌಂಟ್‌ಗಳಿಗೆ ನೇರವಾಗಿ ಜಮೆಯಾಗಲಿದೆ. ಆರ್‌ಬಿಐನ ಈ ಪ್ರೋತ್ಸಾಹಕ ಕ್ರಮದ ಬೆನ್ನಲ್ಲೇ ದೇಶದ ಬಹುದೊಡ್ಡ ಬ್ಯಾಂಕ್ ಎಸ್‌ಬಿಐ ತನ್ನ ಸಾಲದ ಮೇಲಿನ ಬಡ್ಡಿದರವನ್ನು 75 ಮೂಲಾಂಶಗಳಷ್ಟು ಇಳಿಕೆ ಮಾಡಿದೆ. ಆರ್‌ಬಿಐ ಪರಿಹಾರಗಳು
ಕೋವಿಡ್ 19ದಿಂದಾಗಿ ಜಗತ್ತು ತನ್ನೆಲ್ಲ ಚಟುವಟಿಕೆ ನಿಲ್ಲಿಸಿದೆ. ಗುರುವಾರವಷ್ಟೇ ಕೇಂದ್ರ ಸರಕಾರ 1.70 ಲಕ್ಷ ಕೋ.ರೂ.ಗಳ ಪ್ಯಾಕೇಜ್ ಘೋಷಣೆ ಮಾಡಿ ಬಡವರಿಗೆ, ಮಹಿಳೆಯರಿಗೆ ಸಹಾಯಹಸ್ತ ಚಾಚಿತ್ತು. ಶುಕ್ರವಾರ ಬೆಳಗ್ಗೆ ಆರ್‌ಬಿಐ ಕೂಡ ದೇಶದ ಮಧ್ಯಮ ವರ್ಗದವರ ಕಷ್ಟ ಪರಿಹರಿಸುವ ಕೆಲಸಕ್ಕೆ ಕೈಹಾಕಿದೆ. ರೆಪೊ ಮತ್ತು ರಿವರ್ಸ್ ರೆಪೊ ಕಡಿತ ಮಾಡಿರುವುದಷ್ಟೇ ಅಲ್ಲದೆ ಮುಂದಿನ ಮೂರು ತಿಂಗಳು ಸಾಲದ ಮೇಲಿನ ಕಂತುಗಳನ್ನು ಸ್ಥಗಿತಗೊಳಿಸಿದೆ. ಆರ್‌ಬಿಐ ಕ್ರಮಗಳು 1. 75 ಮೂಲಾಂಶ ರೆಪೊ ರೇಟ್ ಕಡಿತ. ಈ ಮೂಲಕ ಶೇ.4.4ಕ್ಕೆ ನಿಂತ ರೆಪೊ ದರ 2. 90 ಮೂಲಾಂಶ ರಿವರ್ಸ್ ರೆಪೊ ರೇಟ್ ಕಡಿತ. ಇದು ಶೇ.4ಕ್ಕೆ ನಿಂತ ದರ 3. 100 ಮೂಲಾಂಶ ಸಿಆರ್‌ಆರ್ ಇಳಿಕೆ. ಶೇ.3ಕ್ಕೆ ಬಂದು ನಿಂತ ಸಿಆರ್‌ಆರ್. ಇದು ಒಂದು ವರ್ಷಗಳ ವರೆಗೆ ಚಾಲ್ತಿಯಲ್ಲಿ ಇರಲಿದ್ದು, ಬ್ಯಾಂಕುಗಳಿಗೆ 1.37 ಲಕ್ಷ ಕೋ.ರೂ. ಹಣದ ಹರಿವು ಸಿಗಲಿದೆ. 4. ಶೇ.90-80ಕ್ಕೆ ಕನಿಷ್ಠ ಸಿಆರ್‌ಆರ್ ಬ್ಯಾಲೆನ್ಸ್ ಇಳಿಕೆ – ಇದು 2020ರ ಜೂ.30ರ ವರೆಗೆ ಅನ್ವಯ 5. ಬ್ಯಾಂಕಿಂಗ್ ವ್ಯವಸ್ಥೆಗೆ ಆರ್‌ಬಿಐನಿಂದ 3.74 ಲಕ್ಷ ಕೋ.ರೂ. ಬಂಡವಾಳ. ಇದು ಜಿಡಿಪಿಯ ಶೇ.3.4ರಷ್ಟು. 6. ಮೂರು ತಿಂಗಳ ನಿರ್ಬಂಧ -ಅವಧಿ ಸಾಲಗಳ ಕಂತುಗಳ ಸ್ಥಗಿತ 7. ಮೂರು ತಿಂಗಳು ಮುಂದೂಡಿಕೆ -ವರ್ಕಿಂಗ್ ಕ್ಯಾಪಿಟಲ್ ಮೇಲಿನ ಬಡ್ಡಿಯನ್ನು ಮುಂದೂಡಲಾಗಿದ್ದು, ಇದನ್ನು ಎನ್‌ಪಿಎ ಎಂದು ಪರಿಗಣಿಸಲಾಗುವುದಿಲ್ಲ. 8. ವರ್ಕಿಂಗ್ ಕ್ಯಾಪಿಟಲ್‌ನ ಅಸೆಸ್ಸಿಂಗ್ ವೇಳೆ ಡ್ರಾವಿಂಗ್ ಪವರ್ (ಡಿಪಿ) ಲೆಕ್ಕಾಚಾರ ಬದಲು. ಈ ಕ್ರಮಗಳು ಕ್ರೆಡಿಟ್ ಹಿಸ್ಟರಿ ಮೇಲೆ ಪ್ರಭಾವ ಬೀರುವುದಿಲ್ಲ. ನೀಟ್ ಪರೀಕ್ಷೆ ಮುಂದೂಡಿಕೆ
ಕೋವಿಡ್ 19 ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಪ್ರವೇಶಾತಿಗಾಗಿ ನಡೆಸುವ ನೀಟ್ ಪರೀಕ್ಷೆಯನ್ನು ಮುಂದೂಡಲಾಗಿದೆ. ದೇಶಾದ್ಯಂತ ಕೋವಿಡ್ 19 ಸೋಂಕುಪೀಡಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಸೋಂಕುಪೀಡಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಲೇ ಇದೆ. ಕೇರಳದಲ್ಲಿ 164ಕ್ಕೆ ಏರಿಕೆಯಾಗಿದ್ದರೆ, ಮಹಾರಾಷ್ಟ್ರದಲ್ಲಿ 154ಕ್ಕೆ ತಲುಪಿದೆ.