ಕೋವಿಡ್ 19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಆರ್.ಬಿ.ಐ, ಗ್ರಾಹಕರ ತಿಂಗಳ ಕಂತು ಇ.ಎಂ.ಐ ಪಾವತಿಗೆ, ಮೂರು ತಿಂಗಳು ವಿನಾಯಿತಿ ನೀಡುವಂತೆ ಸೂಚಿಸಿತ್ತು. ಈ ಕುರಿತಾಗಿ ಅನೇಕ ಗೊಂದಲಗಳು ಸೃಷ್ಟಿಯಾಗಿದ್ದವು. ಅವುಗಳನ್ನು ಬಗೆಹರಿಸುವ ಸಲುವಾಗಿ ಈ ಲೇಖನ.
ಇದು ಮೂರು ತಿಂಗಳ ಮುಂದೂಡಿಕೆಯಷ್ಟೇ. ಮೂರು ತಿಂಗಳ ಇ.ಎಂ. ಐ ಮನ್ನಾ ಅಲ್ಲ. ಮಾರ್ಚ್ 1, 2020 ಮತ್ತು ಮೇ 31, 2020, ಈ ಅವಧಿಯಲ್ಲಿ ಕಟ್ಟಬೇಕಿದ್ದ ಇ.ಎಂ.ಐ.ಗಳಿಗೆ ಈ ನಿಯಮ ಅನ್ವಯವಾಗುತ್ತದೆ. ಮಾರ್ಚ್ 1- ಮೇ 31ರ ಅವಧಿಯಲ್ಲಿ ಕಟ್ಟಬೇಕಿದ್ದ ಸಾಲದ ಕಂತುಗಳಿಗೂ 3 ತಿಂಗಳ ವಿನಾಯಿತಿ ಅನ್ವಯವಾಗುತ್ತದೆ. ಮೂರು ತಿಂಗಳ ವಿನಾಯಿತಿ ಬೇಕಿದ್ದವರು ತಂತಮ್ಮ ಬ್ಯಾಂಕುಗಳಿಗೆ ಮನವಿ ಸಲ್ಲಿಸಬೇಕು. ಇಲ್ಲದೇ ಹೋದರೆ, ವಿನಾಯಿತಿ ಅನ್ವಯವಾಗುವುದಿಲ್ಲ. ಈ ಮುಂದೂಡಿಕೆ ಕೇವಲ ಬ್ಯಾಂಕ್ ಸಾಲಕ್ಕೆ ಮಾತ್ರವಲ್ಲ, ಎಲ್ಲಾ ಅರ್ಹ ಹಣಕಾಸು ಸಂಸ್ಥೆಗಳಿಗೂ, ಸಹಕಾರಿ ಬ್ಯಾಂಕುಗಳಿಗೂ ಅನ್ವಯಿಸುತ್ತದೆ.
ಈ ಯೋಜನೆ ಕುರಿತಾಗಿ, ಕೆಲ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಇ-ಮೇಲನ್ನು ಕಳಿಸಿವೆ. ಈ ಇ-ಮೇಲ್, ಕೇವಲ ಮಾಹಿತಿಯಷ್ಟೇ. ಅಷ್ಟು ಮಾತ್ರಕ್ಕೆ, ತಮ್ಮ ಖಾತೆ ಯೋಜನೆಗೆ ಒಳಪಟ್ಟಿದೆ ಎಂದು ಗ್ರಾಹಕರು ತಿಳಿಯುವ ಹಾಗಿಲ್ಲ. ವಿನಾಯಿತಿ ಕೇಳಿ ಗ್ರಾಹಕರು ಮನವಿ ಸಲ್ಲಿಸದೇ ಹೋದರೆ, ಎಂದಿನ ಇ.ಎಂ. ಐ ನಿಯಮಗಳೇ ಅನ್ವಯವಾಗುವುದು. ಮೂರು ತಿಂಗಳ ವಿನಾಯಿತಿಗೆ ಒಳಪಟ್ಟ ಗ್ರಾಹಕರಿಗೆ, ದಂಡ ವಿಧಿಸಲಾಗುವುದಿಲ್ಲ. ಆದರೆ, ಬಡ್ಡಿಯ ಮೊತ್ತವನ್ನು ಎಂದಿನಂತೆಯೇ ವಿಧಿಸಲಾಗುವುದು. ಸಮಯಕ್ಕೆ ಸರಿಯಾಗಿ ಕಂತು ಕಟ್ಟುವುದರಿಂದ, ಬ್ಯಾಂಕುಗಳು ನೀಡುವ ಕ್ರೆಡಿಟ್ ರೇಟಿಂಗ್ (ಸಿಬಿಲ್ ಸ್ಕೋರ್) ಹೆಚ್ಚುತ್ತದೆ. ಈ ಸಮಯದಲ್ಲಿ ಮೂರು ತಿಂಗಳು ಮುಂದೂಡಲ್ಪಟ್ಟರೆ, ತಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಏನಾದರೂ ದುಷ್ಪರಿಣಾಮ ಬೀರುವುದೇ ಎಂಬ ಅನುಮಾನ ಅನೇಕರಿಗಿರುತ್ತದೆ. ಆದರೆ, ಕ್ರೆಡಿಟ್ ರೇಟಿಂಗ್ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ ಎಂದು ಆರ್.ಬಿ.ಐ. ಸ್ಪಷ್ಟನೆ ನೀಡಿದೆ.
ಮಾರ್ಚ್ 1- ಮೇ 31, ಈ ಅವಧಿಯಲ್ಲಿ ಕಟ್ಟಬೇಕಿದ್ದ ಕಂತಿನ ಮೊತ್ತ ಒಂದುವೇಳೆ ಗ್ರಾಹಕರ ಖಾತೆಯಿಂದ ಕಟ್ಟಲ್ಪಟ್ಟಿದ್ದರೆ, ಮಾರ್ಚ್ ತಿಂಗಳ ಇ.ಎಂ.ಐ. ಮೊತ್ತವನ್ನು ಮರಳಿಸುವಂತೆ ಗ್ರಾಹಕರು ಬ್ಯಾಂಕುಗಳನ್ನು ಕೇಳಿಕೊಳ್ಳಬಹುದು. ಈ ಕುರಿತಾಗಿ, ತಮ್ಮ ಪಾಲಿಸಿಗಳ ಆಧಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ, ಬ್ಯಾಂಕಿನವರಿಗೆ ಇರುತ್ತದೆ. ಎಸ್.ಬಿ.ಐ. ಮತ್ತು ಎಚ್.ಡಿ.ಎಫ್.ಸಿ. ಬ್ಯಾಂಕುಗಳು, ತಮ್ಮ ಗ್ರಾಹಕರ ಮಾರ್ಚ್ ತಿಂಗಳ ಕಂತು ಕಡಿತಗೊಂಡಿದ್ದರೆ, ಅದನ್ನು ಮರಳಿಸುವುದಾಗಿ ಹೇಳಿವೆ.