Advertisement

ಬೆನಿಫಿಟ್‌ ಖೋತಾ!

04:05 PM Jul 13, 2020 | Suhan S |

ಜನಸಾಮಾನ್ಯರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಆರ್‌ಬಿಐ, ತಿಂಗಳ ಕಂತು ಕಟ್ಟುವ ಪ್ರಕ್ರಿಯೆಯನ್ನು ಮುಂದೂಡುವ ಸವಲತ್ತನ್ನು ಪರಿಚಯಿಸಿತ್ತು. ಹಣದ ತುರ್ತು ಇದ್ದವರು ಮಾತ್ರ ಈ ಸವಲತ್ತನ್ನು ಬಳಸಿಕೊಂಡರೆ ಉತ್ತಮ. ಏಕೆಂದರೆ, ಇಎಂಐ ಮುಂದೂಡಿಕೆ ಸವಲತ್ತಿನಿಂದ ಭವಿಷ್ಯದಲ್ಲಿ ಹೆಚ್ಚುವರಿ ಮೊತ್ತ ತೆರಬೇಕಾಗುತ್ತದೆ. ಇಎಂಐ ಮುಂದೂಡಿಕೆ ಸವಲತ್ತನ್ನು ಬಳಸಿಕೊಳ್ಳದಿರಲು ಇನ್ನೊಂದು ಕಾರಣವೆಂದರೆ, ಮನೆ ಸಾಲದ ಮೇಲಿನ ತೆರಿಗೆ ಕಡಿತದ ಮೇಲೂ ಇದು ಪ್ರತಿಕೂಲ ಪರಿಣಾಮ ಬೀರುತ್ತದೆ ಎನ್ನುವುದು.

Advertisement

ಮನೆ ಸಾಲದ ಪ್ರಿನ್ಸಿಪಲ್‌ ಮೊತ್ತದ ಮೇಲೆ ದೊರೆಯುವ ತೆರಿಗೆ ಕಡಿತದ ಬೆನಿಫಿಟ್ ಇಎಂಐ ಮುಂದೂಡಿಕೆ ಸವಲತ್ತನ್ನು ಬಳಸಿಕೊಳ್ಳುವುದರಿಂದ ಕಡಿಮೆಯಾಗುತ್ತದೆ. 6 ತಿಂಗಳ (ಮಾರ್ಚ್‌- ಆಗಸ್ಟ್) ಇಎಂಐ ಮುಂದೂಡಿಕೆ ಅಳವಡಿಸಿಕೊಂಡಿದ್ದರೆ, ಅಷ್ಟು ದೀರ್ಘ‌ ಸಮಯ ಕಂತು ಕಟ್ಟಬೇಕಿಲ್ಲ. ಹಾಗಾಗಿ, ಮರುಪಾವತಿ ಮಾಡಬೇಕಾದ ಮೊತ್ತ ಉಳಿದುಹೋಗುತ್ತದೆ. ಇದರಿಂದಾಗಿ ಹಣ ಮರುಪಾವತಿಸಿದ ಆಧಾರದ ಮೇಲೆ ಟ್ಯಾಕ್ಸ್ ಡಿಡಕ್ಷನ್‌ ಬೆನಿಫಿಟ್‌ ಕ್ಲೈಮ್‌ ಮಾಡಲು ಆಗುವುದಿಲ್ಲ.

ಕ್ಲೈಮ್‌ ಮಾಡಲು ಆಗುವುದಿಲ್ಲ :  ಒಬ್ಬ ವ್ಯಕ್ತಿ ತಾನು ಮನೆ ಸಾಲ ತೀರಿಸಲು ಪಾವತಿಸಿದ ಮೊತ್ತದ ಮೇಲೆ ಸೆಕ್ಷನ್‌ 80ಸಿ ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್‌ ಬೆನಿಫಿಟ್‌ ಅನ್ನು ಕ್ಲೈಮ್‌ ಮಾಡಬಹುದು. ಡಿಡಕ್ಷನ್‌ ಬೆನಿಫಿಟ್‌ ಅನ್ನು ಸಾಲ ಮರುಪಾವತಿಯ ಅಧಾರದ ಮೇಲೆ ಮಾತ್ರವೇ ಕ್ಲೈಮ್‌ ಮಾಡಬಹುದು ಎಂದು ಸೆಕ್ಷನ್‌ 80ಸಿಯಲ್ಲಿ ಹೇಳಲಾಗಿದೆ. ಹೀಗಾಗಿ ಇಎಂಐ ಮುಂದೂಡಿಕೆ ಸವಲತ್ತನ್ನು ಅಳವಡಿಸಿಕೊಂಡವರು ಕಂತು ಕಟ್ಟದೇ ಇರುವುದರಿಂದ, ಮರುಪಾವತಿಯ ಆಧಾರದ ಮೇಲೆ ಕ್ಲೈಮ್‌ ಮಾಡಲು ಆಗುವುದಿಲ್ಲ. ಹೀಗಾಗಿ ಅವರು ತೆರಿಗೆ ಕಡಿತದ ಬೆನಿಫಿಟ್‌ನಿಂದ ವಂಚಿತರಾಗುತ್ತಾರೆ.

 ಉದಾಹರಣೆಗೆ, ವ್ಯಕ್ತಿಯೊಬ್ಬ 8% ಬಡ್ಡಿಯಂತೆ, 50 ಲಕ್ಷ ರೂ. ಮನೆಸಾಲ ಮಾಡಿರುತ್ತಾನೆ ಎಂದುಕೊಳ್ಳೋಣ. ಸಾಲದ ಅವಧಿ 20 ವರ್ಷಗಳು. ಇದು ಮರುಪಾವತಿಯ ಮೊದಲ ವರ್ಷ ಎಂದುಕೊಂಡರೆ ಮುಂದಿನ 12 ತಿಂಗಳು ಆತ ಮರುಪಾವತಿಸಬೇಕಿರುವ ಮೊತ್ತ 1,05,683. ಒಂದು ವೇಳೆ ಆತ 6 ತಿಂಗಳ ಕಾಲ ಇ ಎಂ ಐ ಮುಂದೂಡಿಕೆ ಸವಲತ್ತನ್ನು ಅಳವಡಿಸಿಕೊಂಡರೆ, 6 ತಿಂಗಳು ಕಳೆದ ನಂತರ 43,517ರೂ.ಪ್ರಿನ್ಸಿಪಲ್‌ ಮೊತ್ತವನ್ನು ಮರುಪಾವತಿಸ  ಬೇಕಾಗುತ್ತದೆ. ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಿಕೊಳ್ಳ ಬೇಕಾಗುತ್ತದೆ. ಆಗ ಟ್ಯಾಕ್ಸ್ ಡಿಡಕ್ಷನ್‌ ಬೆನಿಫಿಟ್‌ ಕೂಡಾ ಕಡಿಮೆಯಾಗುತ್ತದೆ.

ಬೆನಿಫಿಟ್‌ ಉಳಿಸಿಕೊಳ್ಳುವ ಮಾರ್ಗ :  ಕೆಲ ಸಾಲಗಾರರಿಗೆ ಇಎಂಐ ಮುಂದೂಡಿಕೆ ಅಳವಡಿಸಿಕೊಳ್ಳುವುದರಿಂದ ಟ್ಯಾಕ್ಸ್ ಬೆನಿಫಿಟ್‌ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲ. ಇನ್ನು ಕೆಲ ಮಂದಿಗೆ ಟ್ಯಾಕ್ಸ್ ಬ್ರೇಕ್‌ ಅವಧಿ ಹೆಚ್ಚಬಹುದು. ಮನೆಸಾಲದ ಮೇಲೆ ಕಟ್ಟಿದ ಬಡ್ಡಿಯ ಆಧಾರದ ಮೇಲೆ 2 ಲಕ್ಷದವರೆಗೂ ಟ್ಯಾಕ್ಸ್ ಬೆನಿಫಿಟ್‌ ಪಡೆಯಬಹುದಾಗಿದೆ. ಇಎಂಐ ಮುಂದೂಡಿಕೆ ಸವಲತ್ತನ್ನು ಪಡೆದುಕೊಳ್ಳುವುದರಿಂದ ಪ್ರಿನ್ಸಿಪಲ್‌ ಮೊತ್ತದ ಮರುಪಾವತಿಗೆ ವಿರಾಮ ನೀಡಬಹುದು.

Advertisement

ಇದೇ ವೇಳೆ ಬಡ್ಡಿಯನ್ನು ಪಾವತಿಸುವ ಸ್ವಾತಂತ್ರ ಇದ್ದೇ ಇರುತ್ತದೆ. ಬಡ್ಡಿ ಮೊತ್ತವನ್ನು ಪಾವತಿಸುವುದರಿಂದ ಟ್ಯಾಕ್ಸ್ ಬೆನಿಫಿಟ್‌ ಅನ್ನು ಪಡೆದುಕೊಳ್ಳಬಹುದು. ಅಂದರೆ, ಟ್ಯಾಕ್ಸ್ ಬೆನಿಫಿಟ್‌ ಅನ್ನು ಬಡ್ಡಿ ಮರುಪಾವತಿಯ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ, ಬಾಕಿ ಉಳಿದಿರುವ ಪ್ರಿನ್ಸಿಪಲ್‌ ಮೊತ್ತದ ಮೇಲಲ್ಲ. ಸಾಲದ ಕಂತಿನ ಮೊದಲ ತಿಂಗಳುಗಳಲ್ಲಿ ಬಡ್ಡಿಯೇ ಕಂತಿನ ಹೆಚ್ಚಿನ ಭಾಗವನ್ನು ಆವರಿಸಿಕೊಂಡಿರುತ್ತದೆ. ವರ್ಷಗಳು ಉರುಳಿದಂತೆ, ತಿಂಗಳ ಕಂತಿನಲ್ಲಿ ಬಡ್ಡಿಯ ಪ್ರಮಾಣ ಕಡಿಮೆಯಾಗುತ್ತಾ ಬರುತ್ತದೆ. ಹೀಗಾಗಿ, ಬಡ್ಡಿಯ ಮೊತ್ತವನ್ನಾದರೂ ಕಟ್ಟುವುದರಿಂದ ಟ್ಯಾಕ್ಸ್ ಬೆನಿಫಿಟ್‌ಗಳನ್ನು ಪಡೆದುಕೊಳ್ಳಬಹುದು. ­

Advertisement

Udayavani is now on Telegram. Click here to join our channel and stay updated with the latest news.

Next