ಕೊಲಂಬೊ: ಎಮರ್ಜಿಂಗ್ ತಂಡಗಳ ಏಷ್ಯಾಕಪ್ ಕೂಟದಲ್ಲಿ ಭಾರತ ಎ ತಂಡವು ಶುಭಾರಂಭ ಮಾಡಿದೆ. ನಾಯಕ ಯಶ್ ಧುಲ್ ಶತಕದ ನೆರವಿನಿಂದ ಟೀಂ ಇಂಡಿಯಾ ಯುಎಇ ವಿರುದ್ಧ ಎಂಟು ವಿಕೆಟ್ ಅಂತರದ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡವು ಒಂಬತ್ತು ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿದರೆ, ಭಾರತ ಎ ತಂಡ 26.3 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಯುಎಇ ತಂಡವು ಭಾರತೀಯ ಬೌಲಿಂಗ್ ಎದುರು ಪರದಾಡಿತು. ಕೇವಲ ಮೂವರು ಬ್ಯಾಟರ್ ಗಳಷ್ಟೇ ಸ್ವಲ್ಪ ಪ್ರತಿರೋಧ ತೋರಿದರು. ಆರಂಭಿಕ ಆಟಗಾರ ಆರ್ಯಾನ್ಶ್ ಶರ್ಮಾ 38 ರನ್, ನಾಯಕ ವಲ್ತಪ್ಪಾ ಚಿದಂಬರಂ 46 ರನ್ ಮತ್ತು ಮೊಹಮ್ಮದ್ ಫರಾಜುದ್ದೀನ್ 35 ರನ್ ಮಾಡಿದರು.
ಭಾರತದ ಪರ ಹರ್ಷಿತ್ ರಾಣಾ ನಾಲ್ಕು ವಿಕೆಟ್ ಕಿತ್ತರೆ, ನಿತೀಶ್ ರೆಡ್ಡಿ ಮತ್ತು ಮಾನವ್ ಸತ್ತಾರ್ ತಲಾ ಎರಡು ವಿಕೆಟ್ ಪಡೆದರು.
ಸುಲಭ ಗುರಿ ಬೆನ್ನತ್ತಿದ ಭಾರತ ತಂಡವು ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡಿತು. ಸಾಯಿ ಸುದರ್ಶನ್ 8 ರನ್ ಮತ್ತು ಅಭಿಷೇಕ್ ಶರ್ಮಾ 19 ರನ್ ಮಾಡಿ ಔಟಾದರು. ಆದರೆ ಮೂರನೇ ವಿಕೆಟ್ ಗೆ ಜತೆಯಾದ ನಾಯಕ ಯಶ್ ಧುಲ್ ಮತ್ತು ಕನ್ನಡಿಗ ನಿಕಿನ್ ಜೋಸ್ ಅಜೇಯ 138 ರನ್ ಜೊತೆಯಾಟವಾಡಿದರು.
ನಾಯಕನ ಆಟವಾಡಿದ ಯಶ್ ಧುಲ್ ಲಿಸ್ಟ್ ಎ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದರು. 84 ಎಸೆತ ಎದುರಿಸಿ 20 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ ಅಜೇಯ 108 ರನ್ ಗಳಿಸಿದರು. ನಿಕಿನ್ ಜೋಸ್ ಅಜೇಯ 41 ರನ್ ಮಾಡಿದರು.