Advertisement

Emerging Asia Cup: ಭಾರತ-ಪಾಕ್‌ ಫೈನಲ್‌- ಯಶಸ್ಸಿನ ನಿರೀಕ್ಷೆಯಲ್ಲಿ ಯಶ್‌ ತಂಡ 

07:45 AM Jul 23, 2023 | Team Udayavani |

ಕೊಲಂಬೊ: ಎಮರ್ಜಿಂಗ್‌ ಏಷ್ಯಾ ಕಪ್‌ ಕ್ರಿಕೆಟ್‌ ಟ್ರೋಫಿಗಾಗಿ ಭಾನುವಾರ ಕೊಲಂಬೊದ ಆರ್‌. ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ “ಎ’ ತಂಡಗಳು ಸೆಣಸಲಿವೆ. ಇದೊಂದು ಹೈ ವೋಲ್ಟೆಜ್‌ ಪಂದ್ಯವಾಗುವ ಎಲ್ಲ ಸಾಧ್ಯತೆ ಇದ್ದು, ಫೇವರಿಟ್‌ ತಂಡವನ್ನು ಆರಿಸುವುದು ತುಸು ಕಠಿಣವೆಂದೇ ಹೇಳಬಹುದು. ಆದರೆ ಕೂಟದಲ್ಲಿ ಈವರೆಗೆ ಆಡಿದ ರೀತಿ ನೋಡಿದರೆ ಯಶ್‌ ಧುಲ್‌ ಸಾರಥ್ಯದ ಭಾರತಕ್ಕೆ ಯಶಸ್ಸು ಒಲಿದೀತೆಂಬ ನಿರೀಕ್ಷೆಗೇನೂ ಅಡ್ಡಿ ಇಲ್ಲ.

Advertisement

ಭಾರತ “ಎ’ ಈ ಕೂಟದ ಅಜೇಯ ತಂಡ. ಲೀಗ್‌ ಹಂತದಲ್ಲಿ ಪಾಕಿಸ್ತಾನವನ್ನು 8 ವಿಕೆಟ್‌ಗಳಿಂದ ಕೆಡವಿದ ಜೋಶ್‌ನಲ್ಲಿದೆ. ಅಲ್ಲದೇ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಬರೀ 211 ರನ್‌ ಗಳಿಸಿಯೂ ಇದನ್ನು ಉಳಿಸಿಕೊಂಡ ತಾಕತ್ತು ಕೂಡ ಭಾರತದ್ದಾಗಿದೆ. ಪಾಕಿಸ್ತಾನ ಈ ಕೂಟದಲ್ಲಿ ಶರಣಾದದ್ದು ಭಾರತಕ್ಕೆ ಮಾತ್ರ. ಹೀಗಾಗಿ ಸೇಡು ತೀರಿಕೊಳ್ಳಲು ಹವಣಿಸುವುದರಲ್ಲಿ ಅನುಮಾನವಿಲ್ಲ.

ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಆತಿಥೇಯ ಶ್ರೀಲಂಕಾವನ್ನು 60 ರನ್ನುಗಳಿಂದ ಮಣಿಸಿದ ಕಾರಣ ಸಹಜವಾಗಿಯೇ ಉತ್ಸಾಹದಲ್ಲಿದೆ.

ಲೀಗ್‌ ಹಂತದ ಪಂದ್ಯದಲ್ಲಿ ರಾಜವರ್ಧನ್‌ ಹಂಗರ್ಗೇಕರ್‌ ಮತ್ತು ಮಾನವ್‌ ಸುಥಾರ್‌ ಸೇರಿಕೊಂಡು ಪಾಕಿಸ್ತಾನವನ್ನು 205ಕ್ಕೆ ಹಿಡಿದು ನಿಲ್ಲಿಸಿದ್ದರು. ಆರಂಭಕಾರ ಸಾಯಿ ಸುದರ್ಶನ್‌ ಪಾಕ್‌ ಬೌಲರ್‌ಗಳ ಮೇಲೆ ಸವಾರಿ ಮಾಡಿ ಅಜೇಯ ಶತಕ ಬಾರಿಸಿ ಮೆರೆದಿದ್ದರು. ಒಟ್ಟಾರೆ ಅದು ಏಕಪಕ್ಷೀಯ ಪಂದ್ಯವಾಗಿತ್ತು. ಭಾರತ ಫೈನಲ್‌ನಲ್ಲೂ ಇದೇ ಲಯದಲ್ಲಿ ಸಾಗಬೇಕಿದೆ.

ಭಾರತದ ಬೌಲಿಂಗ್‌ ಪಾರಮ್ಯ
ಬಾಂಗ್ಲಾ ವಿರುದ್ಧದ ಉಪಾಂತ್ಯದಲ್ಲಿ ಭಾರತದ ಬ್ಯಾಟಿಂಗ್‌ ಕ್ಲಿಕ್‌ ಆಗಿರಲಿಲ್ಲ. 211ಕ್ಕೆ ಆಲೌಟಾದಾಗ, ಬಾಂಗ್ಲಾ ಒಂದೇ ವಿಕೆಟಿಗೆ 94 ರನ್‌ ಗಳಿಸಿ ಮುನ್ನುಗ್ಗುತ್ತಿದ್ದಾಗ ಭಾರತಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದೇ ಭಾವಿಸಲಾಗಿತ್ತು. ಆದರೆ ಸ್ಪಿನ್ನರ್‌ಗಳಾದ ನಿಶಾಂತ್‌ ಸಿಂಧು ಮತ್ತು ಮಾನವ್‌ ಸುಥಾರ್‌ ನೀಡಿದ ತಿರುಗೇಟಿಗೆ ಬಾಂಗ್ಲಾ ಬ್ಯಾಟಿಂಗ್‌ ನೆಲಕಚ್ಚಿತು. 66 ರನ್‌ ಅಂತರದಲ್ಲಿ ಬಾಂಗ್ಲಾದ 9 ವಿಕೆಟ್‌ ಉಡಾಯಿಸಿದ್ದು ಭಾರತದ ಬೌಲಿಂಗ್‌ ಪಾರಮ್ಯಕ್ಕೆ ಸಾಕ್ಷಿ. ಫೈನಲ್‌ನಲ್ಲಿ ಸ್ಪಿನ್ನರ್‌ಗಳು ಭಾರತದ ಪಾಲಿಗೆ ಶ್ರೀರಕ್ಷೆ ಆಗಬೇಕಿದೆ. ಕೊಲಂಬೊ ಟ್ರ್ಯಾಕ್‌ ನಿಧಾನ ಗತಿಯಿಂದ ಕೂಡಿರುವುದೇ ಇದಕ್ಕೆ ಕಾರಣ.

Advertisement

ಭಾರತದ ಬ್ಯಾಟಿಂಗ್‌ ಲೈನ್‌ಅಪ್‌ ಕೂಡ ಬಲಿಷ್ಠ ಎಂಬುದರಲ್ಲಿ ಎರಡು ಮಾತಿಲ್ಲ. ಸಾಯಿ ಸುದರ್ಶನ್‌, ಅಭಿಷೇಕ್‌ ಶರ್ಮ, ನಿಕಿನ್‌ ಜೋಸ್‌, ಯಶ್‌ ಧುಲ್‌, ಧ್ರುವ ಜುರೆಲ್‌, ರಿಯಾನ್‌ ಪರಾಗ್‌, ಆಲ್‌ರೌಂಡರ್‌ ನಿಶಾಂತ್‌ ಸಿಂಧು… ಹೀಗೆ ಕೊನೆಯ ತನಕವೂ ಬ್ಯಾಟ್‌ ಬೀಸಬಲ್ಲವರಿದ್ದಾರೆ. ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಸಿಕ್ಕಿದರೆ ಕನಿಷ್ಠ 250 ರನ್‌ ಪೇರಿಸುವುದು ಅಗತ್ಯ.

ಪ್ರತಿಭಾನ್ವಿರ ಪಾಕ್‌ ಪಡೆ
ಪಾಕಿಸ್ತಾನ ಕೂಡ ಪ್ರತಿಭಾನ್ವಿತರ ತಂಡ. ಆಲ್‌ರೌಂಡರ್‌ ಮೊಹಮ್ಮದ್‌ ವಾಸಿಮ್‌, ನಾಯಕ ಮೊಹಮ್ಮದ್‌ ಹ್ಯಾರಿಸ್‌, ಓಪನರ್‌ ಸಾಹಿಬ್‌ಜಾದ್‌ ಫ‌ರ್ಹಾನ್‌, ಪೇಸ್‌ ಬೌಲರ್‌ ಅರ್ಷದ್‌ ಇಕ್ಬಾಲ್‌ ಅವರೆಲ್ಲ ನಾನಾ ಹಂತದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಅಮಾದ್‌ ಬಟ್‌, ಒಮೈರ್‌ ಯೂಸುಫ್ ಅವರೆಲ್ಲ ಪಾಕಿಸ್ತಾನ್‌ ಸೂರ್‌ ಲೀಗ್‌ನಲ್ಲಿ ಮಿಂಚಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next