ಕೊಲಂಬೊ: ಎಸಿಸಿ ಎಮರ್ಜಿಂಗ್ ತಂಡಗಳ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಎ ಅಜೇಯ ಓಟ ಬೆಳೆಸಿ ಸೆಮಿಫೈನಲ್ ಪ್ರವೇಶಿಸಿದೆ. ಸೋಮವಾರ ನಡೆದ “ಬಿ’ ವಿಭಾಗದ ಪಂದ್ಯದಲ್ಲಿ ನೇಪಾಲ ಎ ತಂಡವನ್ನು 9 ವಿಕೆಟ್‌ಗಳಿಂದ ಉರುಳಿಸಿತು.
ನೇಪಾಲ 39.2 ಓವರ್‌ಗಳಲ್ಲಿ 167ಕ್ಕೆ ಕುಸಿದರೆ, ಭಾರತ ಎ 22.1 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 172 ರನ್ ಬಾರಿಸಿತು. ಯಶ್ ಧುಲ್ ಬಳಗ ಮೊದಲ ಪಂದ್ಯದಲ್ಲಿ ಯುಎಇಯನ್ನು ಪರಾಭವಗೊಳಿಸಿತ್ತು. ಕೊನೆಯ ಲೀಗ್ ಪಂದ್ಯವನ್ನು ಪಾಕಿಸ್ಥಾನ ಎ ವಿರುದ್ಧ ಬುಧವಾರ ಆಡಲಿದೆ. ಪಾಕಿಸ್ಥಾನ ಎ ಕೂಡ ನೇಪಾಲ ಎ ಮತ್ತು ಯುಎಇ ಎ ತಂಡವನ್ನು ಮಣಿಸಿದೆ. ರನ್‌ರೇಟ್‌ನಲ್ಲಿ ಮುಂದಿರುವ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದೆ.ಎರಡೂ ಪಂದ್ಯಗಳನ್ನು ಸೋತ ನೇಪಾಲ ಮತ್ತು ಯುಎಇ ಕೂಟದಿಂದ ನಿರ್ಗಮಿಸಿವೆ.
ನಿಶಾಂತ್ ಸಿಂಧು, ರಾಜವರ್ಧನ್ ಹಂಗಗೇìಕರ್ ಮತ್ತು ಹರ್ಷಿತ್ ರಾಣಾ ಸೇರಿಕೊಂಡು ನೇಪಾಲವನ್ನು ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿದರು. ಸಿಂಧು ಕೇವಲ 14 ರನ್ ನೀಡಿ 4 ವಿಕೆಟ್ ಕೆಡವಿದರು. ಹಂಗಗೇìಕರ್ 3 ಹಾಗೂ ರಾಣಾ 2 ವಿಕೆಟ್ ಉರುಳಿಸಿದರು. ಭಾರತದ ದಾಳಿಯನ್ನು ತಡೆದು ನಿಂತ ನೇಪಾಲದ ಆಟಗಾರನೆಂದರೆ ನಾಯಕ ರೋಹಿತ್ ಪೌದೆಲ್. ಅವರು ಸರ್ವಾಧಿಕ 65 ರನ್ ಬಾರಿಸಿದರು (85 ಎಸೆತ, 7 ಬೌಂಡರಿ). ಗುಲ್ಶನ್ ಝಾ 38 ರನ್ ಮಾಡಿದರು.
139 ರನ್ ಜತೆಯಾಟ
ಚೇಸಿಂಗ್ ವೇಳೆ ಭಾರತದ ಆರಂಭಿಕರಾದ ಸಾಯಿ ಸುದರ್ಶನ್ ಮತ್ತು ಅಭಿಷೇಕ್ ಶರ್ಮ ಇಬ್ಬರೇ ಸೇರಿಕೊಂಡು ನೇಪಾಲ ಮೊತ್ತವನ್ನು ಮೀರುವ ಸೂಚನೆ ನೀಡಿದರು. ಇವರಿಂದ ಮೊದಲ ವಿಕೆಟಿಗೆ 19 ಓವರ್‌ಗಳಲ್ಲಿ 139 ರನ್ ಒಟ್ಟುಗೂಡಿತು. ಆಗ 87 ರನ್ ಮಾಡಿದ ಶರ್ಮ ವಿಕೆಟ್ ಬಿತ್ತು. ಸಾಯಿ ಸುದರ್ಶನ್ 58 ಮತ್ತು ಧ್ರುವ ಜುರೆಲ್ 21 ರನ್ ಮಾಡಿ ಅಜೇಯರಾಗಿ ಉಳಿದರು.
ಸಂಕ್ಷಿಪ್ತ ಸ್ಕೋರ್: ನೇಪಾಲ ಎ-39.2 ಓವರ್‌ಗಳಲ್ಲಿ
167 (ರೋಹಿತ್ ಪೌದೆಲ್ 65, ಗುಲ್ಶನ್ ಝಾ 38, ನಿಶಾಂತ್ ಸಿಂಧು 14ಕ್ಕೆ 4, ರಾಜವರ್ಧನ್ ಹಂಗಗೇìಕರ್ 25ಕ್ಕೆ 3, ಹರ್ಷಿತ್ ರಾಣಾ 16ಕ್ಕೆ 2). ಭಾರತ ಎ-22.1 ಓವರ್‌ಗಳಲ್ಲಿ ಒಂದು ವಿಕೆಟಿಗೆ
172 (ಅಭಿಷೇಕ್ ಶರ್ಮ 87, ಸಾಯಿ ಸುದರ್ಶನ್ ಔಟಾಗದೆ 58, ಧ್ರುವ ಜುರೆಲ್ ಔಟಾಗದೆ 21).
ಪಂದ್ಯಶ್ರೇಷ್ಠ: ಅಭಿಷೇಕ್ ಶರ್ಮ.