ಚಿಕ್ಕಬಳ್ಳಾಪುರ: ಆಮ್ಲಜನಕ ಸಹಿತವಾಗಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಬಹುದಾದ ವೈದ್ಯಕೀಯ ವ್ಯವಸ್ಥೆಯುಳ್ಳ ವಾಹನಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಚಾಲನೆ ನೀಡಿದರು. ಮಂಗಳವಾರ ಜಿಲ್ಲಾಡಳಿತ ಭವನದ ಎದುರು ಜೈನ್ ಟ್ರಸ್ಟ್ ಮತ್ತು ಇತರ ಸರ್ಕಾರೇತರ ಸಂಸ್ಥೆಗಳು ಕೊಡುಗೆ ಆಗಿ ನೀಡಿದ ಚಿಕಿತ್ಸಾ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಡೀಸಿ, ಕೆಎಸ್‌ಆರ್‌ಟಿಸಿ ಸಂಸ್ಥೆಯೊಂದಿಗೆ ಜಿಲ್ಲಾಡಳಿತವು ಸಹ ಈ ರೀತಿಯ ಒಂದು ವಾಹನವನ್ನು ಸಿದ್ಧಪಡಿಸುತ್ತಿದೆ. ಈ ವಾಹನವು ಒಂದೆರಡು ದಿನ ಜನರ ಸೇವೆಗೆ ಲಭ್ಯವಾಗಲಿದೆ ಎಂದು ವಿವರಿಸಿದರು.
ಈ ವಾಹನದಲ್ಲಿ ನಾಲ್ವರಿಗೆ ಸಿಲಿಂಡರ್ ಮೂಲಕ, ಇಬ್ಬರಿಗೆ ಆಮ್ಲಜನಕ ಸಾಂದ್ರಕದ ಮೂಲಕ ಕನಿಷ್ಠ ಹತ್ತು ಗಂಟೆ ಚಿಕಿತ್ಸೆ ನೀಡಬಹುದು. ಈ ವಾಹನ ಕೋವಿಡ್ ಆಸ್ಪತ್ರೆಗಳ ಮುಂಭಾಗದಲ್ಲಿ ನಿಲ್ಲಿಸಲಾಗುತ್ತದೆ. ತೀವ್ರ ಉಸಿರಾಟದತೊಂದರೆಯಿಂದ ಬೆಡ್ ಸಿಗದೇ ಇದ್ದಾಗ ತುರ್ತಾಗಿ ಈ ವಾಹನದಲ್ಲೇ ಆರೈಕೆ ಮಾಡಬಹುದಾಗಿದೆ ಎಂದು ಹೇಳಿದರು.
ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ಮಾಡಿ ರೋಗಿಗಳನ್ನು ಆರೈಕೆ ಮಾಡುವುದರಿಂದ ಪ್ರಾಣಹಾನಿಯನ್ನು ತಪ್ಪಿಸಬಹುದು.ವೈದ್ಯ ಕೀಯ ಸೇವೆ ನೀಡಲು ಬೇಕಾದ ವೈದ್ಯರು ಹಾಗೂ ಸಿಬ್ಬಂದಿ ಬಸ್‌ನಲ್ಲಿ ಇದ್ದು ರೋಗಿ ಗಳನ್ನು ಉಪಚರಿಸಲಿದ್ದಾರೆ. ವಾಹನದಲ್ಲೇ ತಾತ್ಕಾಲಿಕ ಚಿಕಿತ್ಸೆ ನೀಡುವ ವ್ಯವಸ್ಥೆಯು ಜನರಿಗೆ ತುಂಬಾ ಸಹಕಾರಿ ಆಗಲಿದೆ ಎಂದು ತಿಳಿಸಿದರು.
ಎಸಿ ರಘುನಂದನ್, ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದ್‌ರೆಡ್ಡಿ, ಸದಸ್ಯ ಯತೀಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಂದಿರಾ ಆರ್.ಕಬಾಡೆ, ಜೈನ್ ಆಸ್ಪತ್ರೆಯ ಡಾ.ಸೋಲಂಕಿ, ಉತ್ತಮ್ ಚಂದ್, ರಾಕೇಶ್‌ಜೈನ್, ಸರ್ಕಾರೇತರ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.