Advertisement

ಜಾನುವಾರುಗಳಿಗೆ ತುರ್ತು ಚಿಕಿತ್ಸಾ ಸೌಲಭ್ಯ

12:50 PM Sep 06, 2020 | Suhan S |

ಮೈಸೂರು: ಜಾನುವಾರಗಳಿಗೆ ತುರ್ತು ಚಿಕಿತ್ಸಾ ಸೌಲಭ್ಯ ಒದಗಿಸಲು ಹಾಗೂ ಜಾನುವಾರು ಮಾಲೀಕರಿಗೆ ಅನುಕೂಲವಾಗುವಂತೆ ಸುಸಜ್ಜಿತ ಪಶು ಸಂಜೀವಿನಿ ವಾಹನಕ್ಕೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿದರು.

Advertisement

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಶನಿವಾರ ಪಶುಪಾಲನಾ, ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ನೀಡಲಾದ ಪಶು ಸಂಜೀವಿನಿ ವಾಹನಕ್ಕೆ ವಿಶೇಷ ಪೂಜೆ ನೆರವೇರಿಸಿ ಚಾಲನೆ ನೀಡಿ ಮಾತನಾಡಿದರು. ಜಾನುವಾರು ಮಾಲೀಕರಿಗೆ ಅನುಕೂಲವಾಗಲಿ ಎಂದು ಪಶು ಸಂಜೀವಿನಿ ವಾಹನ ಲೋಕಾರ್ಪಣೆ ಮಾಡಿದ್ದೇವೆ. ಯಾವುದೇ ಪ್ರಾಣಿಗಳಿಗೆ ತೊಂದರೆಯಾದಾಗ ಮಾಹಿತಿ ನೀಡಿದರೆ ಪಶು ಸಂಜೀವಿನಿ ವಾಹನ ತಕ್ಷಣ ನೆರವಿಗೆ ಧಾವಿಸುತ್ತದೆ. ಒಳಗೆ ವೈದ್ಯಕೀಯ ಸಿಬ್ಬಂದಿ ಸಹ ಇರುತ್ತಾರೆ. ಇದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ ಎಂದರು.

ಪಶು ಸಂಜೀವಿನಿ ವಾಹನದ ವಿಶೇಷತೆ: ಪಶು ಸಂಜೀವಿನಿ ವಾಹನದಲ್ಲಿ ಶಸ್ತ್ರಚಿಕಿತ್ಸಾ ಘಟಕ, ಸ್ಕ್ಯಾನಿಂಗ್‌ ಉಪಕರಣ, 250 ಲೀ. ಸಾಮರ್ಥ್ಯದ ನೀರಿನ ಟ್ಯಾಂಕ್‌, ಹವಾ ನಿಯಂತ್ರಣ ವ್ಯವಸ್ಥೆ, ವೈದ್ಯರು ಮತ್ತು ಸಿಬ್ಬಂದಿ ಕುಳಿತುಕೊಳ್ಳಲು ವ್ಯವಸ್ಥೆ, ವಾಷ್‌ ಬೇಸಿನ್‌, ಆಮ್ಲಜನಕದ ಸಪೋರ್ಟ್‌ ಸಿಸ್ಟಂ, ಬೆಂಕಿ ಅನಾಹುತ ನಿವಾರಣಾ ಉಪಕರಣಗಳು, ಮರಣೋತ್ತರ ಉಪಕರಣಗಳು ಲಭ್ಯವಿದೆ. ಪ್ರಸೂತಿ, ವಿಷ ಪ್ರಾಶನ, ಹೊಟ್ಟೆಯುಬ್ಬರ, ಅಪಘಾತ, ಮೂಳೆ ಮುರಿತದಂತಹ ಆಕಸ್ಮಿಕ ಸಂದರ್ಭಗಳಲ್ಲಿ ಪ್ರಾಣಿಗಳಿಗೆ ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮೇಕೆ, ಹಸು, ಎಮ್ಮೆ, ಕುರಿ, ಹಂದಿ ಇನ್ನಿತರ ಜಾನುವಾರುಗಳಿಗೆ ತುರ್ತಾಗಿ ಚಿಕಿತ್ಸೆ ಬೇಕಾದ ಸಂದರ್ಭದಲ್ಲಿ 1962 ಗೆ ಕರೆ ಮಾಡಿದರೆ ಈ ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೆ ತಕ್ಷಣ ಸ್ಪಂದಿಸಲಾಗುತ್ತದೆ.

ಮುಡಾ ಅಧ್ಯಕ್ಷ ಎಚ್‌.ವಿ. ರಾಜೀವ್‌, ಶಾಸಕ ಎಲ್‌. ನಾಗೇಂದ್ರ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಜಿಲ್ಲಾಧಿಕಾರಿ ಬಿ. ಶರತ್‌, ನಗರಪಾಲಿಕೆ ಆಯಕ್ತ ಗುರುದತ್ತ ಹೆಗಡೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next