ಬೆಳಗಾವಿ: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ಗೆ ಈಗಾ ಗಲೇ ಅಧಿಕಾರದ ಅಮಲು ಏರಿದೆ. ಪ್ರತಿ ಯೊಬ್ಬ ಸಚಿವರೂ ವಿವಾದಾತ್ಮಕ ಮತ್ತು ಜನವಿರೋಧಿ ಹೇಳಿಕೆ ನೀಡು ತ್ತಿದ್ದಾರೆ. ಇದನ್ನು ನೋಡಿದರೆ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ದಿನಗಳು ಬರುವ ಆತಂಕ ಕಾಣುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಒಬ್ಬ ಸಚಿವರು ಗೋಹತ್ಯೆ ನಿಷೇಧ ಕಾನೂನು ತಿದ್ದುಪಡಿ ಮಾಡುತ್ತೇವೆ ಎನ್ನುತ್ತಾರೆ. ಇನ್ನೊಬ್ಬ ಸಚಿವರು ಸರಕಾರದ ವಿರುದ್ಧ ಮಾತನಾ ಡಿದರೆ ಜೈಲಿಗೆ ಹಾಕುತ್ತಾರೆಂದು ಬೆದರಿಸುತ್ತಾರೆ. ಜನರ ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಪಶುಸಂಗೋಪನೆ ಸಚಿವರು ಗೋ ಹತ್ಯೆ ಕಾಯ್ದೆ ತಿದ್ದುಪಡಿ ಮಾಡುತ್ತೇವೆಂದು ಹೇಳಿದ್ದಾರೆ. ಇದಕ್ಕೆ ಕೆಲವು ಸಚಿವರು ದನಿಗೂಡಿಸಿದ್ದಾರೆ. ಗೋಹತ್ಯೆ ಕಾಯ್ದೆ ನಾವು ಜಾರಿ ಮಾಡಿದ್ದಲ್ಲ. 1960ರ ಅವಧಿಯಲ್ಲೇ ಇದು ಜಾರಿಗೆ ಬಂದಿದೆ. ನಾವು ಗೋ ಹತ್ಯೆ ಮಾಡಿದರೆ ಅದಕ್ಕೆ ಕಠಿನ ಶಿಕ್ಷೆ ಕಾಯ್ದೆ ಜಾರಿ ಮಾಡಿದ್ದೇವೆ. ಒಂದು ವೇಳೆ ಕಾಂಗ್ರೆಸ್ ಸರಕಾರ ಗೋ ಹತ್ಯೆ ಕಾಯ್ದೆ ತಿದ್ದುಪಡಿ ಮಾಡಲು ಮುಂದಾದರೆ ಖಂಡಿತ ಅದಕ್ಕೆ ಆಪತ್ತು ಕಾದಿದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ಅಭಿವೃದ್ಧಿ ಮಾಡಲು ಜನರು ನಿಮಗೆ ಅಧಿಕಾರ ಕೊಟ್ಟಿದ್ದಾರೆ. ನಾವು ವಿಪಕ್ಷವಾಗಿ ಸುಮ್ಮನೆ ಕುಳಿತುಕೊಳ್ಳು ವುದಿಲ್ಲ. ಯಾರನ್ನು ಜೈಲಿಗೆ ಹಾಕುತ್ತೀರಿ ಹಾಕಲಿ. ನಿಮ್ಮ ನೀತಿಯಿಂದ ಜನ ತಿರುಗಿ ಬಿದ್ದರೆ ಯಾವ ಜೈಲುಗಳು ಸಾಕಾಗುವುದಿಲ್ಲ. ಚಾಬೂಕಿನಿಂದ ಹೊಡೆಯಲು ಇದು ಇಸ್ಲಾಂ ರಾಷ್ಟ್ರವೂ ಅಲ್ಲ. ತುರ್ತು ಪರಿಸ್ಥಿತಿ ತರುವ ಪ್ರಯತ್ನಕ್ಕೆ ಪ್ರಜಾಪ್ರಭುತ್ವದಲ್ಲಿ ಜನರ ಶಕ್ತಿ ದೊಡ್ಡದಿದೆ ಎಂದರು.
ವಿದ್ಯುತ್ ಕ್ಷೇತ್ರಕ್ಕೆ ಹೊರೆ
ವಿದ್ಯುತ್ ಕ್ಷೇತ್ರ ಆರ್ಥಿಕವಾಗಿ ಬಹಳ ಸಂಕಷ್ಟದಲ್ಲಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಆಗ ಎಲ್ಲ ವಿದ್ಯುತ್ ನಿಗಮಗಳ ಮೇಲೆ ದೊಡ್ಡ ಆರ್ಥಿಕ ಹೊರೆ ಹಾಕಿತ್ತು. ಇದು ಸಿಎಂ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ ಎಂದರು.