Advertisement

ನೆರೆ, ಪ್ರಾಕೃತಿಕ ವಿಕೋಪಗಳಲ್ಲಿ ತುರ್ತು ಪರಿಹಾರ ಕಾರ್ಯ: ಜಿಲ್ಲಾಧಿಕಾರಿ ಕರೆ

12:46 AM May 19, 2022 | Team Udayavani |

ಉಡುಪಿ: ನೆರೆ ಸೇರಿದಂತೆ ಪ್ರಕೃತಿ ವಿಕೋಪಗಳು ಸಂಭವಿಸಿದಾಗ, ಸ್ಥಳೀಯ ಸಿಬಂದಿ ತತ್‌ಕ್ಷಣ ಸ್ಪಂದಿಸುವುದರಿಂದ ಹೆಚ್ಚಿನ ಅನಾಹುತಗಳನ್ನು ತಪ್ಪಿಸುವುದಲ್ಲದೆ ಪರಿಹಾರ ಕಾರ್ಯಗಳನ್ನು ಶೀಘ್ರ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ಹೇಳಿದರು.

Advertisement

ಅವರು ಬುಧವಾರ ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ, ಮುಂಗಾರು ಮಳೆ ಮತ್ತು ಕೃಷಿ ಚಟುವಟಿಕೆ ಪ್ರಾರಂಭ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೆಚ್ಚಿನ ಮಳೆ, ಗಾಳಿ ಸೇರಿದಂತೆ ಮತ್ತಿತರ ಪ್ರಕೃತಿ ವಿಕೋಪದ ಮುನ್ಸೂಚನೆಗಳು ಈಗಾಗಲೇ ದೊರೆಯುತ್ತಿದ್ದು, ಅದಕ್ಕೆ ಅನುಗುಣವಾಗಿ ಪೂರ್ವ ತಯಾರಿ ಮಾಡಿಕೊಳ್ಳುವುದರ ಜತೆಗೆ, ಕಳೆದ ವರ್ಷಗಳಲ್ಲಿ ಸಂಭವಿಸಿರುವ ನೆರೆ ಪ್ರದೇಶಗಳನ್ನು ಗುರುತಿಸಿ ಅಗತ್ಯವಿರುವ ಎಲ್ಲ ರೀತಿಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಪ್ರತೀ ತಾಲೂಕಿನಲ್ಲಿಯೂ ಪ್ರಕೃತಿ ವಿಕೋಪಗಳನ್ನು ಯಾವ ರೀತಿಯಲ್ಲಿ ತಂಡಗಳು ಎದುರಿಸಬೇಕು ಎಂಬ ಬಗ್ಗೆ ಅಣುಕು ಪ್ರದರ್ಶನ ಅಭ್ಯಾಸಗಳನ್ನು ಕೈಗೊಳ್ಳುವುದರಿಂದ ವಿಕೋಪ ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ಅನುಕೂಲವಾಗುತ್ತದೆ. ಜತೆಗೆ ತಮಗೆ ಅಗತ್ಯವಿರುವ ಸುರಕ್ಷಿತಾ ಪರಿಕರಗಳ ಉಪಯೋಗದ ಬಗ್ಗೆಯೂ ಸಹ ಅನುಭವ ದೊರೆಯಲಿದೆ ಎಂದರು.

ಪ್ರಾಣಹಾನಿಗೆ 24 ಗಂಟೆಯೊಳಗೆ ಪರಿಹಾರ
ಪ್ರಕೃತಿ ವಿಕೋಪಗಳಿಂದ ಉಂಟಾಗುವ ಪ್ರಾಣ ಹಾನಿಗೆ 24 ಗಂಟೆಯೊಳಗೆ ಪರಿಹಾರವನ್ನು ಒದಗಿಸಬೇಕು, ಮನೆ ಹಾಗೂ ಬೆಳೆ ಹಾನಿಗಳ ಅಂದಾಜು ಮೊತ್ತವನ್ನು 48 ಗಂಟೆಯ ಒಳಗಾಗಿ ವರದಿಯನ್ನು ನೀಡುವುದರ ಜತೆಗೆ ಪರಿಹಾರ ಮೊತ್ತವನ್ನು ಸಾಧ್ಯವಾದಷ್ಟು ಶೀಘ್ರದಲ್ಲಿ ವಿತರಿಸುವ ಕಾರ್ಯಗಳು ಆಗಬೇಕು ಎಂದರು.

Advertisement

ಸಾಂಕ್ರಾಮಿಕ ರೋಗ: ಮುಂಜಾಗ್ರತೆ
ಮಳೆಯ ನೀರು ಎಲ್ಲೆಂದರಲ್ಲಿ ನಿಲ್ಲುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಸಾಂಕ್ರಮಿಕ ರೋಗಳು ಹರಡುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಅಪಾಯಕಾರಿ ಮರಗಳ ತೆರವು
ರಸ್ತೆ ಬದಿಯಲ್ಲಿ ಅಪಾಯಕಾರಿ ಮರಗಳಿದ್ದಲ್ಲಿ ಅವು ರಸ್ತೆಗೆ ಉರುಳಿ ವಾಹನಗಳ ಸಂಚಾರಕ್ಕೆ ಅಡ್ಡಿ, ಜೀವ ಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅವುಗಳನ್ನು ತೆರವುಗೊಳಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇರುವಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿ.ಪಂ. ಸಿಇಒ ಪ್ರಸನ್ನ ಎಚ್‌., ಕರಾವಳಿ ಕಾವಲು ಪಡೆಯ ಎಸ್ಪಿ ಅಂಶುಕುಮಾರ್‌, ಅಪರ ಜಿಲ್ಲಾಧಿಕಾರಿ ವೀಣಾ, ಎಎಸ್ಪಿ ಸಿದ್ದಲಿಂಗಪ್ಪ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌, ಉಪ ವಿಭಾಗಾಧಿಕಾರಿ ರಾಜು ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸಹಾಯವಾಣಿ
ಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್‌ ರೂಂ ತೆರೆಯಲಾಗಿದ್ದು ಉಚಿತ ಸಹಾಯವಾಣಿ ಸಂಖ್ಯೆ 1077, ಮೆಸ್ಕಾಂಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಸಹಾಯವಾಣಿ ಸಂಖ್ಯೆ 1912, ರಕ್ಷಣೆಗೆ ಸಂಬಂದಿಸಿದಂತೆ ಸಹಾಯವಾಣಿ ಸಂಖ್ಯೆ 112 ಕ್ಕೆ ಸಾರ್ವಜನಿಕರು ಕರೆ ಮಾಡಬಹುದಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರಿನಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಕುಂದಾಪುರ, ಪಡುಬಿದ್ರಿ, ಕಾಪುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ದೀಪ ಅಳವಡಿಸಬೇಕು. ಬೈಂದೂರಿನ ಕೆಲವು ಭಾಗಗಳಲ್ಲಿ ಮಣ್ಣು ಕುಸಿತಗಳಾಗುವ ಬಗ್ಗೆ ಎಚ್ಚರವಹಿಸಬೇಕು. ಈ ಸಂಬಂಧ ಸಾರ್ವಜನಿಕ ಸಹಾಯವಾಣಿ 1033ಕ್ಕೆ ದೂರುಗಳು ಬಂದಲ್ಲಿ ತತ್‌ ಕ್ಷಣ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

184 ಪ್ರಕರಣ: 56.53 ಲ.ರೂ. ನಷ್ಟ
ಜಿಲ್ಲೆಯಲ್ಲಿ ಈವರೆಗೆ ಮಳೆಯಿಂದಾಗಿ, 1 ಪ್ರಾಣಹಾನಿ, ಸಿಡಿಲಿನಿಂದ ಒಬ್ಬರಿಗೆ ಗಾಯ, ತೋಟಗಾರಿಕೆಗೆ ಸಂಬಂಧಿಸಿ 51 ಹಾನಿ ಪ್ರಕರಣಗಳು, 5 ಮನೆಗಳು ಪೂರ್ಣಪ್ರಮಾಣದಲ್ಲಿ ಹಾನಿಯಾಗಿ, 107 ಮನೆಗಳು ಭಾಗಶಃ ಹಾನಿ ಪ್ರಕರಣಗಳು ವರ ದಿಯಾಗಿವೆ. ಒಟ್ಟಾರೆ 184 ಪ್ರಕರಣಗಳಲ್ಲಿ 56,53,118 ರೂ ನಷ್ಟವಾಗಿದ್ದು, 91 ಪ್ರಕರಣಗಳಿಗೆ 15,48,343 ರೂ. ಪರಿಹಾರ ವಿತರಿಸಲಾಗಿದೆ ಎಂದು ಡಿಸಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next