ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರು ಶನಿವಾರ ಜಿಲ್ಲೆಯ ಅಧಿಕಾರಿಗಳ ತುರ್ತು ಸಭೆಯನ್ನು ಕರೆದು ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದ್ದಾರೆ.
ಅಭಿವೃದ್ಧಿ ಕಾಮಗಾರಿಗಳಿಗೆ ಬೇಕಾದ ಕಡತಗಳನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಶೀಘ್ರವಾಗಿ ಅನುಮೋದನೆ ಲಭಿಸುವಂತೆ ಮಾಡಿ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಸೂಚನೆಯನ್ನು ನೀಡಿದ್ದಾರೆ.
ಜಿಲ್ಲೆಯಿಂದ ಯಾವುದೇ ಕಡತಗಳು ಪ್ರಧಾನಿಯಾದ ಬಳಿಕ ಆಯಾ ಇಲಾಖೆಯ ಅಧಿಕಾರಿಗಳು ಕಡತಗಳು ಹಿಂದಿರುಗಿ ಬರುವವರೆಗೆ ನಿರಂತರ ನಿಗಾವಹಿಸಬೇಕು. ನಾನು ಕೇಳಿದಾಗ ಯಾವುದೇ ಸಬೂಬು ನೀಡದೆ ನಾವು ಕೈಗೊಂಡ ಕೆಲಸಕಾರ್ಯಗಳ ಧನಾತ್ಮಕ ಫಲಿತಾಂಶವನ್ನು ಮಾತ್ರ ನೀಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ನನಗೆ ಅಧಿಕಾರಿಗಳ ವರ್ಗಾವಣೆಯಲ್ಲಿ ಯಾವುದೇ ಆಸಕ್ತಿ ಇಲ್ಲ. ಅವರವರ ಇಲಾಖೆಗಳಲ್ಲಿ ಫಲಿತಾಂಶ ಬರುವ ಕೆಲಸಗಳನ್ನು ನಿರ್ವಹಿಸಲು ಒತ್ತು ನೀಡಬೇಕಿದೆ.ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗುವ ಎಂದು ಹೇಳಿದರು.
ಫೆಬ್ರವರಿಯಲ್ಲಿ ಬಾಕಿ ಉಳಿದಿರುವ ಕಡತಗಳನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಕಡತ ಯಜ್ಞ ಹಮ್ಮಿಕೊಳ್ಳಲಾಗುತ್ತದೆ ಈ ಬಗ್ಗೆ ದಕ್ಷಿಣಕನ್ನಡ ಜಿಲ್ಲಾಧಿಕಾರಿಯವರಲ್ಲಿ ಚರ್ಚಿಸಿ ದಿನಾಂಕವನ್ನು ನಿಗದಿ ಪಡಿಸುವುದು ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.
ಈ ಸಂದರ್ಭ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ ಭರತ್ ಶೆಟ್ಟಿ ವೈ, ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ, ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.